ಬೆಂಗಳೂರು: “ಋಣಮುಕ್ತ ಪರಿಹಾರ ಕಾಯ್ದೆ’ ಉಪಯೋಗ ಸಂಬಂಧ “ಸಂಪರ್ಕ ಸೇತು’ವಾಗಿ ಕೆಲಸ ಮಾಡಲು ಜೆಡಿಎಸ್ ನಿರ್ಧರಿಸಿದ್ದು, ಇದಕ್ಕಾಗಿಯೇ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲು ಮುಂದಾಗಿದೆ. ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲ ಮನ್ನಾಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದಲ್ಲಿ ರೂಪಿಸಲಾದ ಋಣಮುಕ್ತ ಪರಿಹಾರ ಕಾಯ್ದೆ ಯಾರ್ಯಾರಿಗೆ ಅನ್ವಯ, ಯಾವ ಅವಧಿಯಲ್ಲಿ ಪಡೆದ ಸಾಲ ಮನ್ನಾ ಆಗಲಿದೆ, ಅದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಬಗ್ಗೆ ಜೆಡಿಎಸ್ ಸಹಾಯವಾಣಿ ನೆರವು ನೀಡಲಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ವರೇ ಸಹಾಯವಾಣಿ ಕೇಂದ್ರಗಳ ಖುದ್ದು ಮೇಲುಸ್ತುವಾರಿ ವಹಿಸಲಿದ್ದು, ನಿತ್ಯ ಈ ಕುರಿತು ಸಹಾಯವಾಣಿ ಕೇಂದ್ರಗಳಿಂದ ಮಾಹಿತಿ ಸಹ ಪಡೆಯಲಿದ್ದಾರೆ. ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಕಾಯ್ದೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಅಗತ್ಯ ಇರುವ ಕಡೆ ಕಾನೂನು ತಜ್ಞರನ್ನು ಸಹಾಯವಾಣಿ ಕೇಂದ್ರದಲ್ಲಿ ನಿಯೋಜಿಸಲು ತೀರ್ಮಾನಿಸಲಾಗಿದೆ. “ಋಣಮುಕ್ತ ಪರಿಹಾರ ಕಾಯ್ದೆ’ ಸಂಬಂಧ ರಾಜ್ಯ ಸರ್ಕಾರ ನಿಯ ಮಾವಳಿ ಸಹ ರೂಪಿಸಿರುವುದರಿಂದ 90 ದಿನಗಳಲ್ಲಿ ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರು ಆ ಮಾಹಿತಿ ನೋಡಲ್ ಅಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು.
ಆದರೆ, ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ನಾನಾ ಗೊಂದಲಗಳು ಇವೆ. ಹೀಗಾಗಿ, ಜೆಡಿಎಸ್‌ನಿಂದ ಪ್ರತಿ ತಾಲೂಕಿನಲ್ಲಿ ಸಹಾಯವಾಣಿ ಕೇಂದ್ರ ತೆರೆದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಸಹ ನೀಡಿ ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವೂ ಮನ್ನಾ ಆಗುವಂತೆ ನೋಡಿಕೊಳ್ಳಲು ಎಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ ಎಲ್ಲ ತಾಲೂಕು ಜೆಡಿಎಸ್ ಘಟಕಗಳಿಗೆ ಸೂಚನೆ ನೀಡಿದ್ದಾರೆ. ಶಾಸಕರು, ಮಾಜಿ ಶಾಸಕರಿಗೆ ತಾಲೂಕುಗಳ ಸಹಾಯವಾಣಿ ಕೇಂದ್ರದ ಜವಾಬ್ದಾರಿ ವಹಿಸಿಕೊಳ್ಳಲು ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದಾರೆ.
ನೆರವಾಗುವ ಉದ್ದೇಶ: ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಪತನವಾಗುವ ಮುನ್ನಾದಿನ ರಾಷ್ಟ್ರಪತಿಗಳಿಂದ ಅಂಕಿತವಾಗಿ ಬಂದಿದ್ದ ಋಣಮುಕ್ತ ಕಾಯ್ದೆ ಬಗ್ಗೆ ಅಧಿಸೂಚನೆ ಹೊರಡಿಸಲಾಗಿತ್ತು. ನಾನು ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಹಾಗೂ ಋಣಮುಕ್ತ ಕಾಯ್ದೆ ಜಾರಿಗೊಳಿಸಿದ್ದು ನನ್ನ ಜೀವನದಲ್ಲಿ ತೃಪ್ತಿ ಕೊಟ್ಟ ಕೆಲಸಗಳು. ಋಣಮುಕ್ತ ಪರಿಹಾರ ಕಾಯ್ದೆ ಸಮರ್ಪಕ ಅನುಷ್ಟಾನ ಹಾಗೂ ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಯಾವುದೇ ಭಯ, ಆತಂಕ ಇಲ್ಲದೆ ಉಪ ವಿಭಾಗಾಧಿಕಾರಿಗಳಿಗೆ ಮಾಹಿತಿ, ಅರ್ಜಿ ಸಲ್ಲಿಸಲು ನೆರವಾಗಲು ಜೆಡಿಎಸ್‌ನಿಂದ ಪ್ರತಿ ತಾಲೂಕಿನಲ್ಲೂ ಸಹಾಯವಾಣಿ ಕೇಂದ್ರ ಸ್ಥಾಪಿಸಲು ಸೂಚನೆ ನೀಡಿದ್ದೇನೆ.
ಪಕ್ಷದ ಕಚೇರಿಯಲ್ಲಿ ಒಂದೊಮ್ಮೆ ಸಾಧ್ಯವಾಗದಿದ್ದರೆ ಪ್ರತ್ಯೇಕ ಕಚೇರಿ ತೆರೆದು ನೆರವಾಗಲಿದ್ದಾರೆ ಎಂದು ಹೇಳಿದರು. ಈ ಕಾರ್ಯ ನಾನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ. ಕಾಯ್ದೆ ಸಮರ್ಪಕ ಜಾರಿಯಾದರೆ ಮಾತ್ರ ನಾವು ಅದನ್ನು ರೂಪಿಸಿದ್ದಕ್ಕೆ ಸಾರ್ಥಕ. ಹೀಗಾಗಿ, ಯಾವುದೇ ರಾಜಕೀಯ ಲಾಭದ ದೃಷ್ಟಿ ಇಟ್ಟುಕೊಳ್ಳದೆ ಮಾಡಲಾಗುತ್ತಿದೆ. ನಾನೇ ಖುದ್ದಾಗಿ ಇದರ ಮೇಲುಸ್ತು ವಾರಿ ಸಹ ವಹಿಸಲಿದ್ದೇನೆ ಎಂದು ತಿಳಿಸಿದರು.
ರಾಜ್ಯ ಪ್ರವಾಸಕ್ಕೆ ಸಿದ್ಧತೆ: ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸಕ್ಕೆ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದು, ಈ ಹಿಂದೆ ರೂಪಿಸಿದ್ದ ಪಾದಯಾತ್ರೆ ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ, ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ತಂಡದೊಂದಿಗೆ ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ಎದುರಾಗಬಹುದು ಎಂಬ ನಿರೀಕ್ಷೆಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ನಿರಂತರ ಸಮಾವೇಶ ನಡೆಸಲು ಕಾರ್ಯಕ್ರಮ ರೂಪಿಸಿದ್ದಾರೆ. ಮತ್ತೊಂದೆಡೆ ಎಚ್.ಡಿ.ಕುಮಾರಸ್ವಾಮಿಯವರು ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
* ಎಸ್. ಲಕ್ಷ್ಮಿನಾರಾಯಣ