ಬೆಂಗಳೂರು: ಎಲ್ಲಾ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ “ಕಾದು ನೋಡುವ’ ತಂತ್ರ ಅನುಸರಿಸುವ ಜೆಡಿಎಸ್, ಅದರಂತೆ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಸೋಮವಾರ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿದೆ.
ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 24 ಕೊನೆ ದಿನವಾಗಿದೆ.
ಸಂಖ್ಯಾಬಲದ ಆಧಾರದಲ್ಲಿ ಜೆಡಿಎಸ್‌ಗೆ ಸಿಗುವುದು ಒಂದು ಸ್ಥಾನ ಮಾತ್ರ. ಅದಕ್ಕೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದು ನಾಮಪತ್ರ ಸಲ್ಲಿಸಲು ಇನ್ನೊಂದೇ ದಿನ ಬಾಕಿ ಇದ್ದರೂ, ಅಭ್ಯರ್ಥಿ ಯಾರೆಂದು ನಿರ್ಧಾರವಾಗಿಲ್ಲ.
ಸಿಗುವ ಒಂದು ಸ್ಥಾನಕ್ಕೆ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ, ಹಾಲಿ ವಿಧಾನಪರಿಷತ್ ಸದಸ್ಯರಾದ ರಮೇಶ್‌ಗೌಡ, ನಾರಾಯಣಸ್ವಾಮಿ ಪೈಪೋಟಿ ನಡೆಸಿದ್ದಾರೆ. ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹೀಂ ಸಹ ಒಲವು ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗ ಸುಮ್ಮನಿರಿ ಮುಂದೆ ನೋಡೋಣ ಎಂದು ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗದಿಂದ ಸ್ಪರ್ಧಿಸಿದ್ದ ಹಿರಿಯ ನಟ ದೊಡ್ಡಣ ಅವರ ಅಳಿಯ ಹಾಗೂ ಉದ್ಯಮಿ ಕೆ.ಸಿ ವಿರೇಂದ್ರ ಪಪ್ಪಿ ಅವರು ಹೆಸರು ಸಹ ಪ್ರಬಲವಾಗಿ ಕೇಳಿ ಬರುತ್ತಿದ್ದು, ಲಿಂಗಾಯತ ಸಮುದಾಯದ ವಿರೇಂದ್ರ ಆವರಿಗೆ ಟಿಕೆಟ್ ಕೊಟ್ಟರೆ, ಪಕ್ಷದಲ್ಲಿ ಆ ಸಮುದಾಯಕ್ಕೆ ಮನ್ನಣೆ ಕೊಟ್ಟಂತಾಗುತ್ತದೆ. ಇದು ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷಕ್ಕೆ ಒಂದಿಷ್ಟು ಸಹಾಯ ಆಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ ಎಂದು ಹೇಳಲಾಗಿದೆ.