ತುಮಕೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವ ಎಂದೇ ಬಿಂಬಿತವಾಗಿದ್ದ ಜೆ.ಸಿ.ಮಾಧುಸ್ವಾಮಿ ಅವರನ್ನೇ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಸೋಲಿಸಿದ್ದಾರೆ.
ರಾಜ್ಯದಲ್ಲಿ ಪ್ರತಿಷ್ಠಿತ ಕ್ಷೇತ್ರವಾಗಿದ್ದ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ತೀವ್ರ ಪೈಪೋಟಿ ಇತ್ತು. ಆದರೆ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಅವರಿಗೆ ಜನರೇ ಚುನಾವಣಾ ಖರ್ಚಿಗೆ ಹಣ ನೀಡಿ ಪ್ರಚಾರ ಮಾಡಿದ್ದರು. ಅವರಿಗೆ ಮೊದಲಿನಿಂದಲೂ ಜನರಲ್ಲಿ ಎದ್ದಿದ್ದ ಸಿಂಪತಿ ಹೆಚ್ಚು ಕೆಲಸ ಮಾಡಿದ ಪರಿಣಾಮ ಸಚಿವರು ಸೋಲು ಕಾಣಬೇಕಾಗಿದೆ.
4ನೇ ಬಾರಿ ವಿಧಾನಸಭೆ ಪ್ರವೇಶಿಸಿದ ಸಿಬಿಎಸ್: ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸಿ.ಬಿ.ಸುರೇಶ್ ಬಾಬು 10042 ಮತಗಳ ಅಂತರದಿಂದ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸೋಲಿಸಿ 4ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಸಿ.ಬಿ.ಸುರೇಶ್ ಬಾಬು 71036 ಮತ ಪಡೆದು ಜಯಗಳಿಸಿದರೆ, ಬಿಜೆಪಿಯ ಜೆ.ಸಿ.ಮಾಧುಸ್ವಾಮಿ 60994 ಮತ ಹಾಗೂ ಇತ್ತೀಚೆಗಷ್ಟೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಕೆ.ಎಸ್. ಕಿರಣ್ ಕುಮಾರ್ 50996 ಮತ ಪಡೆದು ಸೋಲು ಅನುಭವಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಗೆಲುವು ಸಾಧಿಸಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆಯೇ ಅವರ ಬೆಂಬಲಿಗರು, ಅಭಿಮಾನಿಗಳು ತುಮಕೂರು ವಿವಿ ವಿಜ್ಞಾನ ಕಾಲೇಜಿನ ಮುಂದೆ ಜಮಾಯಿಸಿ ವಿಜಯೋತ್ಸವ ಮಾಡಿದರು.
ಚಿಕ್ಕನಾಯಕನಹಳ್ಳಿ ಮತದಾರರ ಋಣ ತೀರಿಸುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ. ಜನರೊಂದಿಗೆ ಬೆರೆತು ಕೆಲಸ ಮಾಡುತ್ತೇನೆ. ಈ ಅಭೂತ ಪೂರ್ವವಾದ ಗೆಲುವಿಗೆ ಕಾರಣರಾದ ನನ್ನ ಕ್ಷೇತ್ರದ ಎಲ್ಲಾ ತಾಯಂದಿರು, ಕಾರ್ಯಕರ್ತರು ಅಭಿಮಾನಿಗಳಿಗೆ ನನ್ನ ಹೃದಯ ಪೂರ್ವಕ ವಂದನೆಗಳು.
– ಸಿ.ಬಿ.ಸುರೇಶ್‌ಬಾಬು, ಶಾಸಕರು ಚಿಕ್ಕನಾಯಕನಹಳ್ಳಿ