ಬೆಂಗಳೂರು: ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿದ್ದ ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಭದ್ರೇಗೌಡ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಬಿಎಂಪಿ ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿಕೂಟದ ಉಪಮೇಯರ್ ಅಭ್ಯರ್ಥಿಯಾಗಿ ನಾಗಪುರ ವಾರ್ಡ್ ನ ಸದಸ್ಯ ಭದ್ರೆಗೌಡ ನಾಮಪತ್ರ ಸಲ್ಲಿಸಿದ್ದರು. ಆದರೆ ಬಿಬಿಎಂಪಿ ಉಪಮೇಯರ್ ಚುನಾವಣೆ ಅಖಾಡದಿಂದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಹಿಂದೆ ಸರಿದಿತ್ತು.
ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶಿವಯೋಗಿ ಕಳಸದ್ ಅವರು, ಭದ್ರೇ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದ್ದರು.
ಬೆಂಗಳೂರು ಅಭಿವೃದ್ಧಿಯೇ ನನ್ನ ಗುರಿ:
ಹಸಿರು ಬೆಂಗಳೂರು ನಿರ್ಮಾಣಕ್ಕೆ ಆದ್ಯತೆ ಸೇರಿದಂತೆ ಬೆಂಗಳೂರು ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ನೂತನವಾಗಿ ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಗೊಂಡ ಭದ್ರೇಗೌಡ ಅವರು ಮಾಧ್ಯಮದವರ ಜೊತೆ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.