ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯುತ್ತಿದ್ದ ವೇಳೆ ತಾಲೂಕು ಕಚೇರಿಯಲ್ಲಿನ ಮತದಾನ ಕೇಂದ್ರದ ಸಮೀಪ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದ ಘಟನೆ ಜರುಗಿತು. ತಾಲೂಕು ಕಚೇರಿ ಮತದಾನ ಕೇಂದ್ರದ ಮತಗಟ್ಟೆ ಆವರಣದ ಒಳಗೆ ನಿಯಮ ಬಾಹೀರವಾಗಿ ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವಿಚಾರಕ್ಕೆ ಎರಡು ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗತೊಡಗಿತು. ತಕ್ಷಣವೇ ಆಗಮಿಸಿದ ಪೊಲೀಸರು ಎರಡೂ ಗುಂಪಿನ ಮುಖಂಡರನ್ನು ಮತಗಟ್ಟೆ ಕೇಂದ್ರದಿಂದ ದೂರ ಕಳುಹಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಉಳಿದಂತೆ ತಾಲೂಕಿನ ಐದು ಹೋಬಳಿ ಕೇಂದ್ರಗಳ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.
ಶೇ.93 ರಷ್ಟು ಮತದಾನ: ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬುಧವಾರ ನಡೆದ ಮತದಾನದಲ್ಲಿ ತಾಲೂಕಿನಲ್ಲಿ ಶೇ.93.06 ರಷ್ಟು ಮತಚಲಾವಣೆಯಾಗಿದೆ ಎಂದು ತಹಶೀಲ್ದಾರ್ ಟಿ. ಎಸ್.ಶಿವರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.90ರಷ್ಟು ಮತದಾನ
ನಗರ ವ್ಯಾಪ್ತಿಯ ಕಸಬಾ ಮತಗಟ್ಟೆಯಲ್ಲಿ ಶೇ.92.08, ತಾಲೂಕಿನ ಮಧುರೆ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ. ಸಾಸಲು ಮತಗಟ್ಟೆಯಲ್ಲಿ ಶೇ.90.24, ದೊಡ್ಡಬೆಳವಂಗಲ ಶೇ.95 ರಷ್ಟು ಮತದಾನ ನಡೆದಿದೆ. ತೂಬಗೆರೆ ಮತಗಟ್ಟೆಯಲ್ಲಿ ಶೇ.92 ರಷ್ಟು ಮತ ಚಲಾವಣೆಯಾಗಿವೆ.
ಸಿಬ್ಬಂದಿಗೆ ಪಿಪಿಇ ಕಿಟ್: ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಿದರು. ಮತ ಚಲಾಯಿಸಲು ಬರುವ ಪ್ರತಿಯೊಬ್ಬರ ಕೈಗೆ ಸ್ಯಾನಿಟೈಸರ್ ಹಾಕಲಾಯಿತು. ಕೋವಿಡ್ ಮಾರ್ಗ ಸೂಚಿಗಳನ್ನು ಪ್ರತಿ ಮತಗಟ್ಟೆಯಲ್ಲೂ ಕಡ್ಡಾಯವಾಗಿ ಪಾಲಿಸಲಾಗಿದೆ. ಮತಗಟ್ಟೆಯಲ್ಲಿ ಸೋಂಕು ಹರಡದಂತೆ ಅಗತ್ಯ ಇರುವ
ಎಲ್ಲಾ ಸುರಕ್ಷಿತ ನಿಯಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾಹಿತಿ ನೀಡಿದರು.