ಬೆಂಗಳೂರು: ”ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೂರು ತಿಂಗಳ ಹಿಂದೆಯೇ ಒಪ್ಪಂದವಾಗಿದೆ” ಎಂಬ ಸ್ಫೋಟಕ ವಿಷಯವನ್ನು ರಾಜ್ಯ ವಿದ್ಯುತ್ ಸಚಿವ ಡಿ ಕೆ ಶಿವಕುಮಾರ್ ಬಹಿರಂಗಪಡಿಸಿದ್ದಾರೆ.
ಟಿಕೆಟ್ ಸಿಗದ ಕೆಲವು ಕಾಂಗ್ರೆಸ್ ಶಾಸಕರು ಇಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ಟಿಕೆಟ್ ಹಂಚಿಕೆ ಮಾಡುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಿಂಹಪಾಲನ್ನು ತನ್ನವರಿಗಾಗಿ ಉಳಿಸಿಕೊಂಡಿದ್ದಾರೆ ಎಂಬ ಬಗ್ಗೆ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಂಜನಮೂರ್ತಿ ಅವರ ಬೆಂಬಲಿಗರು ಇಂದು ನೆಲಮಂಗಲ ಹೆದ್ದಾರಿಗೆ ಸಮೀಪ ರಸ್ತೆಯಲ್ಲಿ ಟೈರ್ ಸುಟ್ಟು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದರು.
ಚಿತ್ರ ನಟ ಅಂಬರೀಷ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಲಾಗಿರುವುದನ್ನು ಪ್ರತಿಭಟಿಸಿ ಪಕ್ಷದ ನಾಯಕ ರವಿ ಕುಮಾರ್ ಅವರ ಬೆಂಬಲಿಗರು ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಧಾಂಧಲೆ ನಡೆಸಿದರು. ಕುರ್ಚಿ ಹಾಗೂ ಬಾಗಿಲುಗಳನ್ನು ಧ್ವಂಸಗೊಳಿಸಿದರು. ಟಿಕೆಟ್ ನೀಡಿಕೆ ಪಟ್ಟಿಯನ್ನು ಬದಲಾಯಿಸಿ ಮಂಡ್ಯದಿಂದ ರವಿ ಕುಮಾರ್ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದರು.
ಚುನಾವಣಾ ಆಯೋಗದ ಆಣತಿಯಂತೆ ಆದಾಯ ತೆರಿಗೆ ಇಲಾಖಾಧಿಕಾರಿಗಳ ಇಂದು ಕಾಂಗ್ರೆಸ್ ಶಾಸಕ ಬಿ ಶಿವಣ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಶಾಸಕ ಶಿವಣ್ಣ ಅವರ ಮನೆಯಲ್ಲಿ ಭಾರೀ ಪ್ರಮಾಣದ ನಗದನ್ನು ಸಂಗ್ರಹಿಸಿಡಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡ ಚುನಾವಣಾ ಆಯೋಗ ಐಟಿ ಅಧಿಕಾರಿಗಳಿಗೆ ಅದನ್ನು ತಿಳಿಸಿ ದಾಳಿ ನಡೆಸುವಂತೆ ಕೋರಿದರು ಎನ್ನಲಾಗಿದೆ.
ಆ ಪ್ರಕಾರ ನಸುಕಿನ 5.30ರ ಹೊತ್ತಿಗೆ ಐಟಿ ಅಧಿಕಾರಿಗಳ ಶಿವಣ್ಣ ಅವರ ಮನೆಗೆ ದಾಳಿ ನಡೆಸಿ ಬೆಳಗ್ಗೆ 9.30ರ ಹೊತ್ತಿಗೆ ನಿರ್ಗಮಿಸಿದರು. ಆದರೆ ದಾಳಿಯಲ್ಲಿ ಅವರಿಗೆ ಏನೂ ಸಿಗಲಿಲ್ಲ ಎನ್ನಲಾಗಿದೆ.