ದಾವಣಗೆರೆ: ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ವಿಳಂಬ ಖಂಡಿಸಿ, ಜೆಡಿಎಸ್ ಇದೀಗ ಉಪವಿಭಾಗಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಲಿದೆ.
ರೈಲ್ವೆ ಗೇಟ್ ಅನತಿ ದೂರದಲ್ಲೇ ಮಾ.20ರಿಂದ ನಿರಂತರ ಅಹೋರಾತ್ರಿ ಧರಣಿ ಕೈಗೊಂಡಿದ್ದ ಕಾರ್ಯಕರ್ತರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಲು ಮಾ.27ರಂದು ಬೆಳಗ್ಗೆ 11 ಗಂಟೆಗೆ ಉಪವಿಭಾಗಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾ ಖಾನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈಲ್ವೆ ಉಪ ಮುಖ್ಯ ಅಭಿಯಂತರ ಆರ್.ಕೆ. ಸಿಂಗ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಚ್ಛಾಶಕ್ತಿ ಕೊರತೆಯಿಂದಾಗಿ ಜಿಲ್ಲಾಡಳಿತ ಅವರನ್ನು ಸಂಪರ್ಕಿಸಲು ವಿಫಲವಾಗಿದೆ. ಇದರಿಂದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ವಿಳಂಬ ಆಗುತ್ತಿದೆ.
ಪಿಬಿ ರಸ್ತೆಯ ಹಳೆ ಬಸ್ ನಿಲ್ದಾಣದ ಮೂಲಕ ಅಶೋಕ ಟಾಕೀಸ್ ಪಕ್ಕ ಕೆ.ಆರ್.ರಸ್ತೆಗೆ ಇಳಿಯುವಂತೆ ಮೇಲ್ಸೇತುವೆ ನಿರ್ಮಿಸಿದರೆ ಯಾರಿಗೂ ಯಾವ ತೊಂದರೆಯೂ ಆಗುವುದಿಲ್ಲ. ಯಾವ ನಿವೇಶನಕ್ಕೂ ಧಕ್ಕೆ ಉಂಟಾಗುವುದಿಲ್ಲ. ಕೆ.ಆರ್. ರಸ್ತೆಯು 90 ಅಡಿ ಅಗಲ ಇದ್ದು, ಇದರಲ್ಲಿ ಮೇಲ್ಸೇತುವೆ ನಿರ್ಮಿಸಿ ಎರಡು ಬದಿಯಲ್ಲಿ 30 ಅಗಲದ ಸೇವಾ ರಸ್ತೆ ಸಹ ಮಾಡಬಹುದು ಎಂದರು.
ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾಗುವ ತನಕ ನಮ್ಮ ಹೋರಾಟ ನಡೆಯಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಸಂಸದರ, ಸಚಿವರ, ಜಿಲ್ಲಾಧಿಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಅನಿಸ್ ಪಾಷ, ಬಾತಿ ಶಂಕರ್, ಕೆ.ಮಂಜುಳಾ, ಬಿ.ದಾದಾಪೀರ್, ಖಾದರ್ ಬಾಷಾ, ಪ್ರಕೃದ್ಧೀನ್, ಜೆ.ಶ್ರೀನಿವಾಸ್, ಕೆ.ಡಿ. ಜಮೀರ್ ಅಹಮ್ಮದ್, ಮುಬಾರಕ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.