ರಾಜಕೋಟ್: ಇತ್ತೀಚೆಗಷ್ಟೇ ಸುಮಾರು 12 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಮರು ಆಯ್ಕೆಯಾಗಿದ್ದ ವೇಗಿ ಜಯದೇವ್ ಉನಾದ್ಕತ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರಣಜಿ ಟ್ರೋಫಿಯ ಪಂದ್ಯವೊಂದರಲ್ಲಿ ಮೊದಲ ಓವರ್ ನಲ್ಲಿಯೇ ಹ್ಯಾಟ್ರಿಕ್ ಕಿತ್ತು ಮಿಂಚಿದ್ದಾರೆ.
ರಾಜಕೋಟ್ ನಲ್ಲಿ ನಡೆಯುತ್ತಿರುವ ದಿಲ್ಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ನಾಯಕ ಭರ್ಜರಿ ಬೌಲಿಂಗ್ ಮಾಡಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸೌರಾಷ್ಟ್ರ ಭರ್ಜರಿ ಆರಂಭ ಪಡೆಯಿತು, ನಾಯಕ ಉನಾದ್ಕತ್ ಮೊದಲ ಓವರ್ ನಲ್ಲೇ ಹ್ಯಾಟ್ರಿಕ್ ಪಡೆದರು. ಮೊದಲ ಓವರ್ ನ 3ನೇ ಎಸೆತದಲ್ಲಿ ಧ್ರುವ್ ಶೋರಿ, 4ನೇ ಎಸೆತದಲ್ಲಿ ವೈಭವ್ ರಾವಲ್, 5ನೇ ಎಸೆತದಲ್ಲಿ ಯಶ್ ಧುಲ್ ವಿಕೆಟ್ ಪಡೆದರು. ಅಲ್ಲದೆ ಮುಂದಿನ ಓವರ್ ನಲ್ಲಿ ಜಾಂಟಿ ಸಿಧು ಮತ್ತು ಲಲಿತ್ ಯಾದವ್ ವಿಕೆಟ್ ಕಿತ್ತರು.
ಇದನ್ನೂ ಓದಿ:ಬೀಫ್, ಮದ್ಯ ಸೇವಿಸಲು ನಿರಾಕರಿಸಿದವನನ್ನು ವಿವಸ್ತ್ರಗೊಳಿಸಿ ಥಳಿತ
ಒಂದು ಹಂತದಲ್ಲಿ ದಿಲ್ಲಿ ತಂಡವು ಕೇವಲ 10 ರನ್ ಗೆ ಏಳು ವಿಕೆಟ್ ಕಳೆದುಕೊಂಡಿತ್ತು. ಬಳಿಕ ಜೊತೆಯಾದ ಹೃತಕ್ ಶೌಕೀನ್ ಮತ್ತು ಶಿವಾಂಕ್ ವಶಿಷ್ಟ್ ದಿಲ್ಲಿ ತಂಡದ ಮರ್ಯಾದೆ ಕಾಪಾಡಿದರು. ಹೃತಿಕ್ ಅಜೇಯ 68 ರನ್ ಮಾಡಿದರೆ, ಶಿವಾಂಕ್ 38 ರನ್ ಗಳಿಸಿದರು. ಇವರಿಬ್ಬರು 9ನೇ ವಿಕೆಟ್ ಗೆ 80 ರನ್ ಜೊತೆಯಾಟವಾಡಿದರು. ದಿಲ್ಲಿ ತಂಡವು 35 ಓವರ್ ಗಳಲ್ಲಿ 133 ರನ್ ಗೆ ಆಲೌಟಾಯಿತು. ಆರು ಮಂದಿ ದಿಲ್ಲಿ ಬ್ಯಾಟರ್ ಗಳು ಶೂನ್ಯಕ್ಕೆ ಔಟಾದರು.
ಸೌರಾಷ್ಟ್ರ ಪರ ನಾಯಕ ಜಯದೇವ್ ಉನಾದ್ಕತ್ ಎಂಟು ವಿಕೆಟ್ ಪಡೆದರೆ, ಚಿರಾಗ್ ಸೋನಿ ಮತ್ತು ಪ್ರವೀಣ್ ಮಂಕಡ್ ತಲಾ ಓಂದು ವಿಕೆಟ್ ಕಿತ್ತರು.