Advertisement

Shree Krishna Janmashtami:ದ್ವಾರಕೆಯಿಂದ ಬಂದ ಶ್ರೀಕೃಷ್ಣನಿಗೆ ಉಡುಪಿಯಲ್ಲಿ ಜಯಂತೀ ಸಂಭ್ರಮ

10:37 PM Sep 05, 2023 | Team Udayavani |

ಉಡುಪಿಯ ಶ್ರೀಕೃಷ್ಣಮಠ ಸಹಿತ ನಾಡಿನ ವಿವಿಧೆಡೆ ಸೆ. 6ರಂದು ಶ್ರೀಕೃಷ್ಣಜನ್ಮಾಷ್ಟಮಿ, ಸೆ.7ರಂದು ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ ಉತ್ಸವ) ಜರುಗುತ್ತಿದೆ. ಈ ಹಿನ್ನೆಲೆಯಲ್ಲಿ ದ್ವಾರಕೆಯಿಂದ ಬಂದು ಉಡುಪಿಯಲ್ಲಿ ನೆಲೆನಿಂತ ಶ್ರೀಕೃಷ್ಣನ ತಾಣದಲ್ಲಿ ಆತನ ಜಯಂತ್ಯುತ್ಸವದ ಮಹತ್ವವನ್ನು ಲೇಖನದಲ್ಲಿ ವಿವರಿಸಲಾಗಿದೆ.

Advertisement

ವಿಶ್ವದಲ್ಲಿ ಭರತಖಂಡಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಧಾರ್ಮಿಕ, ಸಾಂಸ್ಕೃತಿಕ ರಾಷ್ಟ್ರವಾಗಿ ಹೊರಹೊಮ್ಮಿರುವಂತಹ ದೇಶ ಭಾರತ. ಇಡೀ ಜಗತ್ತಿಗೆ ಧರ್ಮದ ಜಾಗೃತಿಯನ್ನು ಮೂಡಿಸುವ, ಬದುಕಿನ ಕಲೆಯನ್ನು ಹಂಚಿರುವಂತಹ ಕಂಪು ನಮ್ಮ ಭಾರತದಲ್ಲಿದೆ. ಪುಣ್ಯಕ್ಷೇತ್ರಗಳ ತವರು ನಮ್ಮ ಭಾರತ.

ಜನರ ಸಮಸ್ಯೆಯನ್ನು ಪರಿಹರಿಸಲು, ಶಾಶ್ವತವಾದ ಬಂಧ-ಮುಕ್ತಿಯನ್ನು ಕೊಡುವಂತಹ ಕ್ಷೇತ್ರಗಳು ಹಲವಾರು. ಪುರಾಣಗಳು ಇದನ್ನು ನೆನಪಿಸಲು ಮರೆಯುವುದಿಲ್ಲ. ಅದರಲ್ಲಿ ಸಪ್ತ ಮೋಕ್ಷದಾಯಕ ಕ್ಷೇತ್ರಗಳೆಂದೇ ಪ್ರಸಿದ್ಧವಾದವುಗಳನ್ನು ಉಲ್ಲೇಖ ಮಾಡುತ್ತವೆ ಪುರಾಣಗಳು.

“ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ |
ಪುರೀ ದ್ವಾರಾವತೀ ಚೈವ ಸಪ್ತೈತಾಃ ಮೋಕ್ಷದಾಯಕಾಃ || ಎಂದು.

ಈ ದ್ವಾರಕೆ ಇಷ್ಟು ಮಹತ್ವದುಳ್ಳದ್ದಾದರೆ, ಆ ದ್ವಾರಕೆಗಿಂತಲೂ ಹೆಚ್ಚಿನ ಮಹತ್ವವುಳ್ಳದ್ದು ನಮ್ಮ ಉಡುಪಿ ಕ್ಷೇತ್ರ. ದ್ವಾರಕೆ ಮುಳುಗುವ ಸಂದರ್ಭದಲ್ಲಿ ಕೃಷ್ಣ ದ್ವಾರಕೆಯಿಂದ ಉಡುಪಿಗೆ ಬಂದ ಇತಿಹಾಸವನ್ನು ಉಲ್ಲೇಖ ಮಾಡುತ್ತಾರೆ. ಹೇಗೆ ಬಂದನೆಂದರೆ ದ್ವಾರಕಾ ಪಟ್ಟಣ ಮುಳುಗುವ ಸಂದರ್ಭದಲ್ಲಿ ತಾಯಿ ದೇವಕಿ ಕೃಷ್ಣನ ಬಳಿ ಒಂದು ಪ್ರಾರ್ಥನೆ ಮಾಡುತ್ತಾಳೆ. ಶ್ರೀಕೃಷ್ಣನ ಬಾಲ ಲೀಲೆಯನ್ನು ಯಶೋದೆ ಕಣ್ಣಾರೆ ಕಂಡು ಅನುಭವಿಸಿ ಕೃತಾರ್ಥಳಾಗಿದ್ದಾಳೆ. ನನಗೂ ಆ ಒಂದು ಅನುಭವ ಬೇಕು ಎಂದು ದೇವಕಿ ಕೇಳಿದಾಗ ಕೃಷ್ಣ ಆಯಿತು ಎಂದು ತನ್ನ ಎಲ್ಲ ಬಾಲಲೀಲೆಗಳನ್ನು ತೋರಿಸಿದ. ಅದನ್ನು ನೋಡಿದ ದೇವಕಿ ಇಡೀ ಬಾಲ ಲೀಲೆಗಳಲ್ಲಿ ತಾನು ಮೊಸರು ಕಡಿಯುವ ಗೋಪಿಕಾ ಸ್ತ್ರೀಯರನ್ನು ಮಂಗ ಮಾಡಿ ಅಲ್ಲಿರುವಂತಹ ಹಗ್ಗ, ದಂಡಗಳನ್ನು ಎಳೆದುಕೊಂಡು ಬಂದಿರುವಂತಹ ಆ ರೂಪ ಖುಷಿ ಕೊಟ್ಟಿತು. ಜತೆಗೆ ತನ್ನ ಹಿರಿಯ ಮಡದಿಯಾದ ರುಗ್ಮಿಣೀದೇವಿಯೂ ಅಲ್ಲಿಯೇ ಇದ್ದಳು.

Advertisement

ಅವಳ ಅಪೇಕ್ಷೆಯಂತೆ ಆ ಒಂದು ದಂಡ, ಹಗ್ಗವನ್ನು ಹಿಡಿದುಕೊಂಡಿರುವ ತನ್ನ ಬಾಲರೂಪದ ಪ್ರತಿಮೆ ಬೇಕು ಎಂದು ಪ್ರಾರ್ಥನೆ ಮಾಡಿದಾಗ, ದೇವಶಿಲ್ಪಿಯಾದ ವಿಶ್ವಕರ್ಮನನ್ನು ಕರೆಸಿ ಶಾಲಗ್ರಾಮ ಶಿಲೆಯಲ್ಲಿ ಅಂತಹ ಪ್ರತಿಮೆಯನ್ನು ನಿರ್ಮಾಣ ಮಾಡಿ ಸ್ವಯಂ ಕೃಷ್ಣನೇ ಆ ಪ್ರತಿಮೆಯಲ್ಲಿ ಸನ್ನಿಹಿತನಾಗಿ ಲೋಕಮಾತೆಯಾದ ರುಗ್ಮಿಣಿ ದೇವಿಯಿಂದ ಪೂಜೆಗೊಳ್ಳುತ್ತಿದ್ದ.

ಅನಂತರ ಕೃಷ್ಣಾವತಾರದ ಸಮಾಪ್ತಿಯ ಬಳಿಕ ಆ ವಿಗ್ರಹ ನೀರು ಪಾಲಾಯಿತು. ಜತೆಗೆ ಅಲ್ಲಿರುವ ಗೋಪಿಚಂದನ ಮಣ್ಣಿನ ಹೆಂಟೆಯೊಳಗೆ ಸೇರಿಕೊಂಡಿತು. ಅನೇಕ ವರ್ಷಗಳ ಕಾಲ ಆ ಸಮುದ್ರದ ದಡದಲ್ಲಿ ಇತ್ತು. ಅಲ್ಲಿಂದ ಕ್ರಮೇಣ ಅದೇ ಪಶ್ಚಿಮ ಸಾಗರದ ಮತ್ತೂಂದು ತೀರವಾದ ನಮ್ಮ ಉಡುಪಿಯ ಹತ್ತಿರದಲ್ಲಿರುವ ಮಲ್ಪೆಯ ಸಮುದ್ರದ ತಟಕ್ಕೆ ತಲುಪಿತ್ತು. ತಮ್ಮ ಯೋಗದೃಷ್ಟಿಯಿಂದ ಇದನ್ನು ಕಂಡ ಆಚಾರ್ಯ ಮಧ್ವರು ಅಲ್ಲಿಗೆ ತೆರಳಿ ಸಮುದ್ರ ತಟದಲ್ಲಿದ್ದ ಗೋಪಿಚಂದನದ ಹೆಂಟೆಯಲ್ಲಿರುವಂತಹ ಕೃಷ್ಣನ ಪ್ರತಿಮೆಯನ್ನು ಮೇಲೆತ್ತಿ ತಂದು ಉಡುಪಿಯ ಅನಂತೇಶ್ವರನ ಹತ್ತಿರದಲ್ಲಿ ನಾವೀಗ ಕಾಣುವ ಮಧ್ವ ಸರೋವರದ ಒಳಗೆ ಜಲಾನಿವಾಸವನ್ನಾಗಿ ಮಾಡಿದರು.

ಕೆಲವು ದಿನಗಳ ಅನಂತರ ಒಂದು ಮಕರ ಸಂಕ್ರಮಣದ ಶುಭದಿನ ತನ್ನ ಮಠದಲ್ಲಿ ಆ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬ ಉದ್ದೇಶ ಆಚಾರ್ಯ ಮಧ್ವರದ್ದಾಗಿತ್ತು. ಶಿಷ್ಯರಿಗೆ ಆ ಪ್ರತಿಮೆಯನ್ನು ತೆಗೆದುಕೊಂಡು ಬರುವಂತೆ ಆಜ್ಞಾಪಿಸಿದರು. ಒಬ್ಬರು, ಇಬ್ಬರು, ಮೂವರು ಹೀಗೆ ಮೂವತ್ತು ಯುವಕರು ಹೋಗಿ ಪ್ರತಿಮೆಯನ್ನು ಎತ್ತಲು ಪ್ರಯತ್ನಿಸಿದರೂ ಆ ಪ್ರತಿಮೆ ಮೇಲೇಳಲಿಲ್ಲ. ಇದಕ್ಕೆ ಕಾರಣ ಸ್ವಯಂ ಕೃಷ್ಣ ತಾನು ಬಂದು ನೆಲೆ ನಿಂತಿರುವ ಪ್ರತಿಮೆ ಅದು. ಸಾಕ್ಷಾತ್‌ ಲಕ್ಷ್ಮೀದೇವಿಯ ರೂಪವಾದ ರುಗ್ಮಿಣಿ ದೇವಿಯ ಪೂಜೆಗೊಂಡಿರುವ ಪ್ರತಿಮೆ.

ಸನ್ನಿಧಾನದಿಂದ ಭಾರಭೂತವಾಗಿರುವ ಪ್ರತಿಮೆ. ಜತೆಗೆ ವಾಯುದೇವರ ಅವತಾರರಾದ ಆಚಾರ್ಯ ಮಧ್ವರ ಕರಸ್ಪರ್ಶದಿಂದ ವಿಶಿಷ್ಟ ಸನ್ನಿಧಾನವನ್ನು ಪಡೆದುಕೊಂಡು ಇನ್ನಷ್ಟು ಭಾರಭೂತವಾಗಿರುವಂತಹದ್ದು. ವಿಷಯ ತಿಳಿದ ಆಚಾರ್ಯ ಮಧ್ವರೇ ಪುನಃ ಪ್ರತಿಮೆ ಹತ್ತಿರ ಹೋಗಿ, ಕೃಷ್ಣನನ್ನು ಪ್ರಾರ್ಥಿಸಿದಾಗ ಆ ಪ್ರತಿಮೆಯನ್ನು ತಾವೊಬ್ಬರೇ ಎತ್ತಿಕೊಂಡು ದ್ವಾದಶ ಗೀತೆಯನ್ನು ಹಾಡಿಕೊಂಡು ಬಂದು ಮಠದೊಳಗೆ ಪ್ರತಿಷ್ಠೆ ಮಾಡಿದ್ದಾರೆ. ಈ ಪ್ರತಿಷ್ಠೆಯ ವಿಷಯವೆಲ್ಲವೂ ಮಧ್ವವಿಜಯದಲ್ಲಿ ಬಹಳ ಸುಂದರವಾಗಿ ಉಲ್ಲೇಖೀತವಾಗಿದೆ.

ಮಂದಹಾಸಮೃದುಸುಂದರಾನನಂ ನಂದನಂದನಂ ಅತೀಂದ್ರಿಯಾಕೃತಿಂ |
ಸುಂದರಂ ಸ ಇಹ ಸನ್ನéಧಾಪಯತ್‌ ವಂದ್ಯಮಾಕೃಶುಚಿಪ್ರತಿಷ್ಠಯಾ ||

ಬಹಳ ಸುಂದರವಾದ ಮುಗುಳ್ನಗೆಯಿಂದ ಕೂಡಿದ, ಎಷ್ಟು ನೋಡಿದರೂ ಮತ್ತೂಮ್ಮೆ, ಮಗದೊಮ್ಮೆ ನೋಡಬೇಕೆನಿಸುವ ಜೀವಕಳೆಯಿಂದ ತುಂಬಿರುವಂತಹ ಸಾಕ್ಷಾತ್‌ ಕೃಷ್ಣನೇ ನೆಲೆನಿಂತಿರುವಂತಹ ಪ್ರತಿಮೆ. ಆ ಪ್ರತಿಮೆಯನ್ನು ತಮ್ಮ ಶುದ್ಧವಾದ ಆಚಾರ ವಿಚಾರಗಳಿಂದ ಅಲ್ಲಿ ಶಾಸ್ತ್ರೋಕ್ತವಾದ ಕ್ರಮದಲ್ಲಿ ನಮ್ಮ ರಜತಪೀಠಪುರವಾದ ಉಡುಪಿಯಲ್ಲಿ ಪ್ರತಿಷ್ಠೆ ಮಾಡಿದರು ಎಂಬ ಮಾಹಿತಿ ನಮಗೆ ಪುರಾಣದಲ್ಲಿ ಸಿಗುತ್ತದೆ.

ಆಚಾರ್ಯ ಮಧ್ವರ ಜೀವನ ಚರಿತ್ರೆಯನ್ನು ತಿಳಿಸುವಂತಹ ಪಂಡಿತಾಚಾರ್ಯರು ಮತ್ತೂಂದು ಉಲ್ಲೇಖ ಮಾಡುತ್ತಾರೆ. ಕೃಷ್ಣನನ್ನು ಇಲ್ಲಿ ಏಕೆ ಪ್ರತಿಷ್ಠೆ ಮಾಡಿದ್ದೆಂದರೆ- “ಸಿದ್ಧಿವಿಘ್ನಮುಖದೋಷಭೇಷಜಮ್‌’ ಎಂಬ ಕಾರಣವನ್ನು ಕೊಡುತ್ತಾರೆ. ಜೀವನದಲ್ಲಿ ಸಾಧನೆಯನ್ನು ನಡೆಸಿ ಸಿದ್ಧಿಯನ್ನು ಪಡೆಯುವ ಇಚ್ಛೆಯುಳ್ಳ ಸಾಧಕರಿಗೆ ಬರುವಂತಹ ವಿಘ್ನಗಳನ್ನು, ತಾಪತ್ರಯಗಳನ್ನು ಪರಿಹಾರ ಮಾಡಲು ಒಬ್ಬ ವೈದ್ಯ ಬೇಕು, ಒಂದು ಔಷಧ ಬೇಕು. ಆ ಔಷಧವೇ ಈ ಕೃಷ್ಣ ಎಂಬುದರಿಂದಲೇ ಆಚಾರ್ಯ ಮಧ್ವರು ಈ ಕ್ಷೇತ್ರದಲ್ಲಿ ಕೃಷ್ಣನ ಪ್ರತಿಷ್ಠೆಯನ್ನು ಮಾಡಿದರು ಎಂಬುದನ್ನು ತಿಳಿಸುತ್ತಾರೆ. ಶ್ರೀ ರಘುವರ್ಯರು ತಿಳಿಸಿರುವಂತಹ ದ್ವಾರಕೆಯಿಂದ ಕೃಷ್ಣ ಹೀಗೆ ಬಂದ ಎಂಬ ಚಿಂತನೆಯನ್ನು ಒಳಗೊಂಡಂತಹ ಪ್ರಮಾಣಗಳಲ್ಲಿ ಉಲ್ಲೇಖೀತವಾಗಿದೆ.

ಕದಾಚಿತ್‌ ದೇವಕೀ ದೇವೀ ದ್ವಾರಕಾಯಾಂ ಸುತಂ ಹರಿಮ್‌|
ಉವಾಚ ಬಾಲಲೀಲಾನಾಂ ದರ್ಶನೋತ್ಸುಕಮಾನಸಾ ||
ಯಶೋದಾ ಬಾಲಲೀಲಾಸ್ತೇ ವಿಲೋಕ್ಯ ಪರಮಂ ಮುದಮ್‌
ಜಗಾಮ ಕಿಲ ತತ್ರೈಕಾಂ ಲೀಲಾಂ ಮೇ ಕೃಷ್ಣ ದರ್ಶಯ ||

ಹೀಗೆ ಸ್ಕಂಧ ಪುರಾಣ, ಹರಿವಂಶ ಪುರಾಣ, ಭಾಗವತ ಪುರಾಣ, ಮಹಾಭಾರತ ಇತ್ಯಾದಿ ಅನೇಕ ಗ್ರಂಥಗಳ ಮೂಲಕ ಹೊಗಳಿಸಿಕೊಂಡಂತಹ ಗುಣವುಳ್ಳ ಮಣ್ಣು ನಮ್ಮ ಉಡುಪಿಯ ಮಣ್ಣು. ಶ್ರೀ ರಘುವರ್ಯತೀರ್ಥರು ರಚಿಸಿರುವ ಪದವೂ ಒಂದು.

“ರುಗ್ಮಭೂಷಣ ಪಾಲಿಸೆನ್ನನು ತಿಗ್ಮಕಿರಣಶತಪ್ರಭಾ
ರುಗ್ಮಿಣೀಪವನಾರ್ಚ್ಯ ಸತ್ಪದಯುಗ್ಮ ಉಡುಪಿನ ಕೃಷ್ಣನೇ |
ದ್ವಾರಕಾಪುರದಲ್ಲಿ ದೇವಕಿ ಸರಸಬಾಲಕ ಲೀಲೆಯ
ತೋರು ಎನುತಲೆ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ ||”
ಇಂತಹ ದ್ವಾರಕೆಯಿಂದ ನಮ್ಮ ಹೆಗ್ಗಳದ ನಾಡು ಉಡುಪಿಗೆ ಬಂದು ನೆಲೆನಿಂತ ಬಗೆಯನ್ನು ವರ್ಣಿಸಿದ್ದಾರೆ.

ಮಹಾಭಾರತ ಗ್ರಂಥದಲ್ಲಿ ಬರುವ ಉಲ್ಲೇಖದಂತೆ ಕೃಷ್ಣಜಯಂತಿ ಆಚರಣೆ ಬಗೆಗೆ ಮಧ್ವರು “ಜಯಂತಿ ನಿರ್ಣಯ’ ಎಂಬ ಕೃತಿ ರಚಿಸಿದ್ದಾರೆ. ಇದರ ಪ್ರಕಾರ ಸಿಂಹಮಾಸದಲ್ಲಿ ರೋಹಿಣಿ ನಕ್ಷತ್ರ, ಅಷ್ಟಮಿ ತಿಥಿ ಚಂದ್ರೋದಯದ ವೇಳೆ ಕೂಡಿಬಂದ ದಿನ ಶ್ರೀಕೃಷ್ಣ ಜನಿಸಿದ್ದ. ಉಡುಪಿ ಸಹಿತ ವಿವಿಧೆಡೆ ಇದೇ ಅವಧಿಯಲ್ಲಿ ಕೃಷ್ಣನಿಗೆ ಅರ್ಘ್ಯಪ್ರದಾನ ನಡೆಯುತ್ತದೆ. ಶ್ರೀಕೃಷ್ಣಮಠದಲ್ಲಿ ಸೆ. 6ರ ರಾತ್ರಿ ಮಹಾಪೂಜೆ ಮುಗಿಸಿದ ಪರ್ಯಾಯ ಶ್ರೀಪಾದರು ರಾತ್ರಿ 11.43 ಗಂಟೆಗೆ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುತ್ತಾರೆ. ಬಳಿಕ ಚಂದ್ರನಿಗೂ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. 5,000 ವರ್ಷಗಳ ಹಿಂದೆ ಕೃಷ್ಣ ಜನಿಸಿದ ಮರುದಿನವೇ ಗೋಕುಲದಲ್ಲಿ ಸುದ್ದಿ ತಿಳಿದದ್ದು. ಆಗ ಅಲ್ಲಿದ್ದದ್ದು ಹಾಲು, ಮೊಸರು. ಇವುಗಳನ್ನೇ ಎರಚಿಕೊಂಡು ಸಂಭ್ರಮಪಟ್ಟರು. ಇದರ ಸಂಕೇತವಾಗಿ ಮೊಸರುಕುಡಿಕೆ ಉತ್ಸವ ಕೃಷ್ಣಾಷ್ಟಮಿ ಮರುದಿನ (ಸೆ. 7) ಕೃಷ್ಣ ಲೀಲೋತ್ಸವವಾಗಿ ಆಚರಣೆಯಾಗುತ್ತಿದೆ.

-ಡಾ| ವಂಶೀಕೃಷ್ಣಾಚಾರ್ಯ ಪುರೋಹಿತ್‌, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next