ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದ್ದು, ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಭರ್ಜರಿ ಜಯಗಳಿಸಿದ್ದಾರೆ.
ಜಯನಗರ 4ನೇ “ಟಿ’ ಬ್ಲಾಕ್‌ನಲ್ಲಿರುವ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೂ ಮನ್ನಡೆ ಕಾಯ್ದುಕೊಂಡ ಬಂದ ಸೌಮ್ಯ ಕೊನೆಯಲ್ಲಿ ಬಿಜೆಪಿಯ ಅಭ್ಯರ್ಥಿ, ಮಾಜಿ ಶಾಸಕ ದಿವಂಗತ ವಿಜಯಕುಮಾರ್ ಸಹೋದರ ಬಿ.ಎನ್.ಪ್ರಹ್ಲಾದ್‌ಬಾಬು ವಿರುದ್ಧ
2,889 ಮತಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡರು.
ಕ್ಷೇತ್ರದಲ್ಲಿ ಲಂಚ ಮುಕ್ತ ಕರ್ನಾಟಕ ಹೋರಾಟದ ಮೂಲಕ ಸದ್ದು ಮಾಡಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ 1,591 ಮತಗಳನ್ನು ಮಾತ್ರ ಪಡೆದು ಠೇವಣಿ ಕಳೆದುಕೊಂಡರು.
ಸೌಮ್ಯ ರೆಡ್ಡಿ 54,457 ಮತಗಳನ್ನು ಪಡೆದರೆ, ಬಿ.ಎನ್.ಪ್ರಹ್ಲಾದ್‌ಬಾಬು 51,568 ಮತಗಳನ್ನು ಪಡೆದರು. ಆರಂಭದಿಂದ 12 ನೇ ಸುತ್ತಿನ ವರೆಗೂ 15 ಸಾವಿರ ಮತಗಳಿಗೂ ಹೆಚ್ಚು ಮುನ್ನಡೆ ಕಾಯ್ದು ಕೊಂಡಿದ್ದ ಸೌಮ್ಯ ರೆಡ್ಡಿ ಅವರ ಮತಗಳ ಅಂತರ ಕೊನೆಯ 3 ಸುತ್ತುಗಳಲ್ಲಿ ಕಡಿಮೆಯಾಯಿತು.
ಜಯನಗರ ಕ್ಷೇತ್ರದಿಂದ ರಾಮಲಿಂಗಾ ರೆಡ್ಡಿ ಅವರು ನಾಲ್ಕು ಬಾರಿ ಆಯ್ಕೆ ಯಾಗಿದ್ದರು. ಅವರು ಕ್ಷೇತ್ರ ಬದಲಾವಣೆ ಮಾಡಿ ಬಿಟಿಎಂ ಲೇಔಟ್‌ನಿಂದ ಸತತ 2 ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಿದ್ದು, 216 ಮತಗಟ್ಟೆಗಳ ಮತ ಎಣಿಕೆಯು 16 ಸುತ್ತಿಗಳಲ್ಲಿ ನಡೆಯಿತು.
ಶಾಸಕರಾಗಿದ್ದ ಬಿ.ಎನ್.ವಿಜಯಕುಮಾರ್ ನಿಧನ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ಜೆಡಿಎಸ್‌ಅಭ್ಯರ್ಥಿಯನ್ನು ಹಿಂಪಡೆದುಕೊಂಡಿತ್ತು.