ಬೆಂಗಳೂರು: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಉದ್ಘಾಟನೆ ವೇಳೆ ಉಂಟಾದ ಅವ್ಯವಸ್ಥೆ ಮತ್ತು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಪಕ್ಷ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲು ಪಕ್ಷದ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರೇ ಬುಧವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಪರಿವರ್ತನಾ ಯಾತ್ರೆಗೆ ನಿರೀಕ್ಷಿತ ಜನ ಬಾರದೇ ಇದ್ದುದರಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಈ ಬಗ್ಗೆ ದಿನಕ್ಕೊಂದು ಊಹಾಪೋಹಗಳು ಹುಟ್ಟಿಕೊಳ್ಳುತ್ತಿವೆ. ಈ ಊಹಾಪೋಹಗಳೆಲ್ಲವೂ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧವೇ ಸುತ್ತಿಕೊಳ್ಳುತ್ತಿದೆ. ಇದು ಪಕ್ಷದ ಸಂಘಟನೆಗೆ ಧಕ್ಕೆ ತರಬಹುದಾದ ಹಿನ್ನೆಲೆಯಲ್ಲಿ ಜಾವಡೇಕರ್ ಅವರು ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಿದ್ದಾರೆಂದು ತಿಳಿದುಬಂದಿದೆ.
ಗೊಂದಲಗಳ ಕುರಿತಂತೆ ಮೊದಲು ಪಕ್ಷದ ಬೆಂಗಳೂರು ಭಾಗದ ಮುಖಂಡರೊಂದಿಗೆ ಚರ್ಚಿಸಲಿರುವ ಪ್ರಕಾಶ್ ಜಾವಡೇಕರ್, ಮಾರನೇ ದಿನ ಮಂಗಳೂರಿಗೆ ತೆರಳಿ ಅಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ವೇಳೆ ಬೆಂಗಳೂರಿನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಕುರಿತು ಕೋರ್ ಕಮಿಟಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ದಿನಕ್ಕೊಂದು ಊಹಾಪೋಹ: ಕಳೆದ ಗುರುವಾರ (ನ. 2) ನಡೆದ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದ 17 ಜಿಲ್ಲೆ, 114 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ಒಂದು ಲಕ್ಷ ಬೈಕ್‌ಗಳಲ್ಲಿ ಎರಡು ಲಕ್ಷ ಯುವ ಕಾರ್ಯಕರ್ತರು ಸೇರಿ ಸುಮಾರು ಮೂರು ಲಕ್ಷ ಮಂದಿ ಬರುತ್ತಾರೆಂದು ಹೇಳಲಾಗಿತ್ತು. ಆದರೆ, ಅದರ ಅರ್ಧದಷ್ಟು ಜನರೂ ಬಂದಿರಲಿಲ್ಲ. ಹೀಗಾಗಿ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಆರ್.ಅಶೋಕ್ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಆರೋಪ ಕೇಳಿಬಂದವು.
ಇದರ ಜತೆಗೆ ಅಶೋಕ್ ಅವರು ಬೆಂಗಳೂರಿನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಅವರಾರೂ ಸ್ಪಂದಿಸಿಲ್ಲ. ಹಣಕಾಸು ವ್ಯವಸ್ಥೆಯನ್ನು ಶೋಭಾ ಕರಂದ್ಲಾಜೆ ಅವರೇ ನೋಡಿಕೊಳ್ಳುತ್ತಿದ್ದುದರಿಂದ ಅಶೋಕ್ ಕೈ ಕಟ್ಟಿಹಾಕಲಾಗಿತ್ತು. ಕಾರ್ಯಕ್ರಮ ವಿಫಲವಾಗಲು ಅಶೋಕ್ ಕಾರಣ ಎಂದು ಅವರ ವಿರುದ್ಧ ವರಿಷ್ಠರಿಗೆ ದೂರು ನೀಡಲಾಗುತ್ತದೆ. ಯಾತ್ರೆ ಯಶಸ್ವಿಯಾದರೆ ನಿಮ್ಮ ವಿರುದ್ಧದ ಭೂಮಂಜೂರಾತಿ ಹಗರಣದ ತನಿಖೆ ನಡೆಸುವುದಾಗಿ ಸಚಿವರೊಬ್ಬರು ಬೆದರಿಕೆ ಹಾಕಿದ್ದರಿಂದ ಅಶೋಕ್ ಯಾತ್ರೆಗೆ ಜನರನ್ನು ಕರೆತರಲಿಲ್ಲ ಎಂಬ ರೀತಿಯ ಊಹಾಪೋಹಗಳು ಸೃಷ್ಟಿಯಾಗಿದ್ದವು.
ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಈ ರೀತಿಯ ಗೊಂದಲ, ಊಹಾಪೋಹಗಳು ಪಕ್ಷದ ಸಂಘಟನೆಗೆ ಅಡ್ಡಿಯಾಗಬಹುದು ಎಂಬ ಆತಂಕದಿಂದ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಕಾಶ್ ಜಾವಡೇಕರ್ ಅವರಿಗೆ ವಹಿಸಿದ್ದಾರೆ. ಹೀಗಾಗಿ ನ. 9ರಂದು ಕೋರ್ ಕಮಿಟಿ ಸಭೆಗೆ ಮಂಗಳೂರಿಗೆ ಬರಬೇಕಾಗಿದ್ದ ಜಾವಡೇಕರ್ ಒಂದು ದಿನ ಮೊದಲೇ ಬೆಂಗಳೂರಿಗೆ ಬಂದು ಸಮಸ್ಯೆ ಕುರಿತು ಮುಖಂಡರೊಂದಿಗೆ ಸಮಾಲೋಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಧಾನ ಪರಿಷತ್ ಅಭ್ಯರ್ಥಿಗಳ ಕುರಿತು ಚರ್ಚೆ
ಮಂಗಳೂರಿನಲ್ಲಿ ಗುರುವಾರ (ನ. 9) ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ತಲಾ ಮೂರು ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆಯಿದೆ.