Advertisement
ಕಾರಣಗಳೇನು?ಮೂಲತಃ ಮೂರು ವಿಧವಾದ ಜಾಂಡಿಸ್‌ಗಳಿವೆ. ಜಾಂಡಿಸ್ ಉಂಟಾಗಿರುವ ವ್ಯಕ್ತಿ ವೈದ್ಯರಲ್ಲಿ ಬಂದ ಕೂಡಲೇ ನಾವು ಕ್ಷಿಪ್ರವಾಗಿ ರೋಗಿ ಹೊಂದಿರುವ ಜಾಂಡಿಸ್ ಯಾವ ವಿಧವಾದದ್ದು ಎಂಬುದನ್ನು ನಿರ್ಧರಿಸುತ್ತೇವೆ. ಬಳಿಕ ಆ ನಿರ್ದಿಷ್ಟ ವಿಧದ ಜಾಂಡಿಸ್‌ನತ್ತ ಗಮನ ಹರಿಸುತ್ತೇವೆ.
Related Articles
ಎರಡನೆಯ ವಿಧವಾದ ಜಾಂಡಿಸ್ ಪಿತ್ತಕೋಶದಲ್ಲಿ ಇರುವ ಸಮಸ್ಯೆಯಿಂದಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಹೆಪಟಿಕ್ ವಿಧವಾದ ಜಾಂಡಿಸ್ ಎನ್ನುತ್ತೇವೆ. ಇದು ಕಡಿಮೆ ಅವಧಿಯದ್ದು ಆಗಿರಬಹುದು ಅಥವಾ ದೀರ್ಘಕಾಲಿಕವಾಗಿರಬಹುದು. ಕಡಿಮೆ ಅವಧಿಯ ಪಿತ್ತಕೋಶ ಕಾಯಿಲೆಗೆ ಅತಿ ಸಾಮಾನ್ಯವಾದ ಕಾರಣ ಎಂದರೆ ವೈರಸ್‌ಗಳಿಂದ ಉಂಟಾಗುವ ಹೆಪಟೈಟಿಸ್. ಇದನ್ನು ವೈರಲ್ ಹೆಪಟೈಟಿಸ್ ಎಂಬುದಾಗಿ ಕರೆಯುತ್ತೇವೆ. ಹೆಪಟೈಟಿಸ್ ಉಂಟುಮಾಡುವ ಐದು ಬಗೆಯ ವೈರಸ್‌ಗಳಿವೆ: ಹೆಪಟೈಟಿಸ್ ಎ ವೈರಸ್, ಹೆಪಟೈಟಿಸ್ ಬಿ ವೈರಸ್, ಹೆಪಟೈಟಿಸ್ ಸಿ ವೈರಸ್, ಹೆಪಟೈಟಿಸ್ ಡಿ ವೈರಸ್ ಮತ್ತು ಹೆಪಟೈಟಿಸ್ ಇ ವೈರಸ್. ಪಿತ್ತಕೋಶವನ್ನು ಬಾಧಿಸುವ ಇನ್ನೂ ಕೆಲವು ವೈರಸ್‌ಗಳಿದ್ದರೂ ಅವುಗಳ ಬಗ್ಗೆ ನಾವಿಲ್ಲಿ ವಿವರಿಸುವುದಿಲ್ಲ. ಈ ಐದು ಹೆಪಟೈಟಿಸ್ ವೈರಸ್‌ಗಳಲ್ಲಿ ಎರಡು ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತವೆ. ಅವುಗಳೆಂದರೆ ಹೆಪಟೈಟಿಸ್ ಎ ಮತ್ತು ಇ. ಕೆಲವೊಮ್ಮೆ ಹೆಪಟೈಟಿಸ್ ಹಾವಳಿ ದೊಡ್ಡ ಪ್ರಮಾಣದಲ್ಲಿ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಜಾಂಡಿಸ್‌ನ ಈ ಭಾರೀ ಹಾವಳಿ ಹೆಪಟೈಟಿಸ್ ಇ ವೈರಸ್‌ನಿಂದ ಉಂಟಾಗುತ್ತದೆ.
Advertisement
ಹೆಪಟೈಟಿಸ್ ಎ ಮತ್ತು ಇ ವೈರಸ್‌ಗಳ ಉತ್ತಮಾಂಶ ಎಂದರೆ ಅವು ಸ್ವತಃ ನಿಯಂತ್ರಣಕ್ಕೆ ಬರಬಲ್ಲಂಥವು. ಅಂದರೆ, ನೀವು ಚಿಕಿತ್ಸೆ ಒದಗಿಸದೇ ಇದ್ದರೂ ಇದಕ್ಕೆ ತುತ್ತಾದ ರೋಗಿ ಮೂರರಿಂದ ನಾಲ್ಕು ವಾರಗಳಲ್ಲಿ ಸಹಜ ಆರೋಗ್ಯಕ್ಕೆ ಮರಳುತ್ತಾರೆ. ಇನ್ನಿತರ 3 ಹೆಪಟೈಟಿಸ್ ವೈರಸ್‌ಗಳಾದ ಬಿ, ಸಿ ಮತ್ತು ಡಿ ಸೋಂಕು ಪೀಡಿತ ರಕ್ತದಿಂದ ಪ್ರಸಾರವಾಗುತ್ತವೆ. ಹೀಗಾಗಿ, ಇವು ಕೇವಲ ರಕ್ತ ಪೂರಣ, ಕಲುಷಿತ ಸಿರಿಂಜ್, ಲೈಂಗಿಕ ಸಂಬಂಧ ಹಾಗೂ ಜನನ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಮಾತ್ರ ಹರಡಬಹುದಾಗಿದೆ.
ಜುಲೈ 28ನ್ನು ಜಾಗತಿಕ ಹೆಪಟೈಟಿಸ್ ದಿನವನ್ನಾಗಿ ಆಚರಿಸ ಲಾಗುತ್ತದೆ. ಇದು ಡಾ| ಬ್ಲೂಮ್‌ಬರ್ಗ್ ಎಂಬ ಅಮೆರಿಕನ್ ವಿಜ್ಞಾನಿಯ ಜನ್ಮದಿನ. ಹೆಪಟೈಟಿಸ್ ಬಿ ವೈರಸ್ ಅನ್ನು ಕಂಡು ಹಿಡಿದವರು ಇವರು. ಈ ವೈರಸ್ ಶೋಧವು ಹೆಪಟೈಟಿಸ್ ಬಿ ಲಸಿಕೆಯ ಆವಿಷ್ಕಾರಕ್ಕೆ ಕಾರಣವಾಯಿತು, ಇದರಿಂದಾಗಿ ಇಂದು ಹೆಪಟೈಟಿಸ್ ಬಿಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಈ ಲಸಿಕೆಯು ಪಿತ್ತಕೋಶದ ಸಿರೋಸಿಸ್ ಮತ್ತು ಪಿತ್ತಕೋಶದ ಕ್ಯಾನ್ಸರ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ತಡೆಗಟ್ಟುವುದಕ್ಕೆ ಕಾರಣವಾಗಿದೆ.
ಕಲುಷಿತ ರಕ್ತದ ಮೂಲಕ ಪ್ರಸಾರವಾಗಬಹುದಾದ ಎಲ್ಲ ಮೂರು ವಿಧದ ಹೆಪಟೈಟಿಸ್ ವೈರಸ್‌ಗಳೂ ಪಿತ್ತಕೋಶಕ್ಕೆ ದೀರ್ಘಕಾಲಿಕ ಹಾನಿ ಉಂಟು ಮಾಡಬಲ್ಲವಾಗಿದ್ದು, ಸಿರೋಸಿಸ್ ಮತ್ತು ಪಿತ್ತಕೋಶ ಕ್ಯಾನ್ಸರ್‌ಗೂ ಕಾರಣವಾಗಬಲ್ಲವು. ಸರಿಯಾದ ರಕ್ತ ಪರೀಕ್ಷೆಗಳನ್ನು ನಡೆಸುವ ಮೂಲಕ ನಾವು ರೋಗಿ ಹೆಪಟೈಟಿಸ್ ವೈರಸ್ ಸೋಂಕಿಗೆ ತುತ್ತಾಗಿದ್ದಾನೆಯೇ ಹಾಗೂ ಆಗಿದ್ದರೆ ಯಾವ ವಿಧವಾದ ವೈರಸ್ ಎಂಬುದನ್ನು ಪತ್ತೆಹಚ್ಚಬಹುದು.
ಪಿತ್ತಕೋಶದ ದೀರ್ಘಕಾಲಿಕ ಹಾನಿಯು ಸಿರೋಸಿಸ್‌ಗೆ ಕಾರಣವಾಗುತ್ತದೆ, ಇದರಲ್ಲಿ ಪಿತ್ತಕೋಶದ ಜೀವಕೋಶಗಳು ಗಮನಾರ್ಹ ಪ್ರಮಾಣದಲ್ಲಿ ನಾಶ ಹೊಂದಿರುತ್ತವೆ. ಇದರಿಂದ ಪಿತ್ತಕೋಶದ ಕಾರ್ಯಚಟುವಟಿಕೆ ನಷ್ಟವಾಗುತ್ತದೆ. ಬದುಕುಳಿಯಲು ಪಿತ್ತಕೋಶವು ಬಹಳ ಅಗತ್ಯ. ಪಿತ್ತಕೋಶದ ಕಾರ್ಯಾಚರಣೆ ಸರಿಯಾಗಿಲ್ಲದಿದ್ದರೆ ವ್ಯಕ್ತಿಯು ಬದುಕುಳಿಯಲು ಸಾಧ್ಯವಾಗುವುದಿಲ್ಲ. ಸಿರೋಸಿಸ್ ಹೊಂದಿರುವ ರೋಗಿಗಳು ಜಾಂಡಿಸ್‌ಗೆ ತುತ್ತಾಗುವುದಲ್ಲದೆ ಅವರ ಹೊಟ್ಟೆ ಮತ್ತು ಕಾಲುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅವರು ರಕ್ತವಾಂತಿ ಮಾಡಿಕೊಳ್ಳಬಹುದು ಮತ್ತು ಸ್ಮತಿ ಕಳೆದುಕೊಳ್ಳಬಹುದು. ಸಿರೋಸಿಸ್‌ಗೆ ಮುಖ್ಯ ಕಾರಣ ಹೆಪಟೈಟಿಸ್ ವೈರಸ್. ಇಂದು ಹೆಪಟೈಟಿಸ್ ಬಿ ಮತ್ತು ಸಿ ವೈರಸ್‌ಗಳಿಗೆ ನಮ್ಮಲ್ಲಿ ಪರಿಣಾಮಕಾರಿ ಔಷಧಗಳಿವೆ.
ಪಿತ್ತಕೋಶ ಕಾಯಿಲೆ ತುಂಬಾ ಮುಂದುವರಿಯದೆ ಇದ್ದಲ್ಲಿ ಆಗ ಬಹುತೇಕ ರೋಗಿಗಳು ಈ ಔಷಧಗಳಿಗೆ ಪ್ರತಿಸ್ಪಂದಿಸುತ್ತಾರೆ. ಆದರೆ ಕೆಲವೊಮ್ಮೆ, ಪಿತ್ತಕೋಶ ಕಾಯಿಲೆ ತುಂಬಾ ಮುಂದುವರಿದ ಹಂತದಲ್ಲಿದ್ದಾಗ ಈ ಔಷಧಿಗಳು ಕೆಲಸ ಮಾಡಲಾರವು. ಇಂತಹ ಸನ್ನಿವೇಶಗಳಲ್ಲಿ ರೋಗಿಗೆ ಪಿತ್ತಕೋಶ ಕಸಿ ಮಾಡಬೇಕಾಗುತ್ತದೆ. ಇದರಲ್ಲಿ ದಾನಿಯ ಪಿತ್ತಕೋಶದ ಅರ್ಧಾಂಶವನ್ನು ರೋಗಿಯ ದೇಹದಲ್ಲಿ ಕಸಿ ಮಾಡಲಾಗುತ್ತದೆ. ಪಿತ್ತಕೋಶ ಕಸಿಯ ಯಶಸ್ಸಿನ ದರವು ಉತ್ತಮವಾಗಿದ್ದರೂ ಇದು ಬಹಳ ವೆಚ್ಚದಾಯಕವಾಗಿದೆ; ಈ ಶಸ್ತ್ರಚಿಕಿತ್ಸೆಗೆ ಸುಮಾರು 20 ಲಕ್ಷ ರೂ. ವೆಚ್ಚವಾಗುತ್ತದೆ.
– ಮುಂದಿನ ವಾರಕ್ಕೆ