Advertisement

ಕಾಮಾಲೆ ಕಣ್ಣವರಿಗೆ ಸೊಪ್ಪು ಹಾಕಲ್ಲ

01:27 PM Nov 07, 2017 | |

ಬೆಂಗಳೂರು: ಸಮಾಜದ ಒಳಿತಿಗಾಗಿ ಮತ್ತು ನಾಡಿನ ರಕ್ಷಣೆಗಾಗಿ ಶ್ರಮಿಸಿದ ಸಾಧು-ಸಂತರು, ದಾರ್ಶನಿಕರು ಮತ್ತು ಹೋರಾಟಗಾರರ ಜಯಂತಿ ಆಚರಣೆಯನ್ನು “ಕಾಮಾಲೆ ಕಣ್ಣುಗಳಿಂದ’ ನೋಡುವವರಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ವಿಧಾನಸೌಧದ ಬೃಹತ್‌ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ “ದಾಸ ಶ್ರೇಷ್ಠ ಕನಕದಾಸರ ಜಯಂತಿ-2017′ ಮತ್ತು “ಕನಕ ಶ್ರೀ’ ಪ್ರಶಸ್ತಿ, “ಕನಕ ಗೌರವ’ ಹಾಗೂ ಕನಕ ಯುವ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜಕೀಯ ಲಾಭವಿಲ್ಲ: ರಾಜ್ಯ ಸರ್ಕಾರದಿಂದ 26 ಮಹಾನ್‌ ಪುರುಷರು ಹಾಗೂ ಮಹಾ ಮಾತೆಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಇವುಗಳನ್ನು ಬಹುತೇಕ ಜಯಂತಿಗಳನ್ನು ನಮ್ಮ ಸರ್ಕಾರ ಬಂದ ಮೇಲೆ ಆಚರಿಸಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಆಚರಣೆ ಮಾಡಲಾಗುತ್ತಿಲ್ಲ.

ಸಮಾಜದ ಸುಧಾರಣೆಗೆ ತಮ್ಮನ್ನು ಸಮರ್ಪಿಸಿಕೊಂಡವರನ್ನು ಸ್ಮರಿಸಿ, ಗೌರವಿಸುವುದು ಸರ್ಕಾರದ ಕರ್ತವ್ಯ. ಆದರೆ, ಕೆಲವರು ಇದನ್ನು ರಾಜಕೀಯವಾಗಿ ನೋಡುತ್ತಿದ್ದಾರೆ. ಈ ರೀತಿಯ “ಕಾಮಾಲೆ ಕಣ್ಣಿನವರಿಗೆ’ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಹೇಳಿದರು. 

ನೆರವು ಸಿಗುತ್ತಿತ್ತಾ: ವಿವಾದ ಸೃಷ್ಟಿಸಿರುವ ಟಿಪ್ಪು ಜಯಂತಿ ವಿಚಾರವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಕೆಲವರು ಟಿಪ್ಪು ಜಯಂತಿಯನ್ನು ವಿನಾಕಾರಣ ವಿವಾದದ ವಿಷಯವನ್ನಾಗಿ ಮಾಡುತ್ತಿದ್ದಾರೆ. ಹಿಂದೂ ವಿರೋಧಿ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಟಿಪ್ಪು ಮತಾಂಧ, ಹಿಂದೂ ವಿರೋಧಿ ಆಗಿದಿದ್ದರೆ ಪಂಡಿತ್‌ ಪೂರ್ಣಯ್ಯ ದಿವಾನ್‌ ಆಗಲು ಸಾಧ್ಯವಾಗುತ್ತಿತ್ತಾ?,

Advertisement

ಹಿಂದೂ ದೇವಾಲಯಗಳಿಗೆ ಆರ್ಥಿಕ ನೆರವು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 1988ರಲ್ಲಿ ಕನಕದಾಸರ 500ನೇ ಜಯಂತ್ಯುತ್ಸವ ಆಚರಿಸಿದ ನಂತರದಿಂದ ಪ್ರತಿ ವರ್ಷ ಕನಕ ಜಯಂತಿ ಆಚರಿಸುವ ಸಂಪ್ರದಾಯ ಪ್ರಾರಂಭವಾಗಿತ್ತು. ಆಗ ನಾನು ಸಾರಿಗೆ ಸಚಿವನಾಗಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಶಸ್ತಿ ಪ್ರದಾನ: ಡಾ. ಕೆ. ಗೋಕುಲನಾಥ್‌ ಅವರಿಗೆ 2017ನೇ ಸಾಲಿನ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನೀಡುವ ಕನಕ ಗೌರವ ಪುರಸ್ಕಾರವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್‌ ಹಾಗೂ ಡಾ. ಗವಿಸಿದ್ದಪ್ಪ ಎಚ್‌. ಪಾಟೀಲ ಅವರಿಗೆ ಕನಕ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಡಾ. ಎಲ್‌.ಆರ್‌. ಲಲಿತಾಂಬ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಸಚಿವರಾದ ಉಮಾಶ್ರೀ, ಕೆ.ಜೆ. ಜಾರ್ಜ್‌, ಎಚ್‌.ಎಂ. ರೇವಣ್ಣ, ಸಂಸದ ಪ್ರಕಾಶ್‌ ಹುಕ್ಕೇರಿ, ಶಾಸಕರಾದ ಭೈರತಿ ಬಸವರಾಜ್‌, ಭೈರತಿ ಸುರೇಶ್‌. ಕೆ. ಗೋವಿಂದರಾಜ್‌ ಇತರರಿದ್ದರು.

ವಿಷದ ಬಾಟಲಿ ಪ್ರದರ್ಶಿಸಿದ ವ್ಯಕ್ತಿ: 1998ನೇ ಸಾಲಿನಿಂದ ಸತತ ಮೂರು ಕೆಎಎಸ್‌ ಪರೀಕ್ಷೆ ಬರೆದು ಅನುತ್ತೀರ್ಣರಾಗಿರುವ 53 ವರ್ಷದ ಮೈಸೂರಿನ ಪರುಶರಾಮ ಎಂಬುವರು ಮುಖ್ಯಮಂತ್ರಿಯವರು ಭಾಷಣ ಆರಂಭಿಸುತ್ತಿದ್ದಂತೆ ವೇದಿಕೆಯತ್ತ ಓಡಿ ಬಂದು “ನ್ಯಾಯ ಕೊಡಿ’ ಎಂದು ಘೋಷಣೆ ಕೂಗಿ ವಿಷದ ಬಾಟಲಿ ಪ್ರದರ್ಶಿಸಿದ ಪ್ರಸಂಗ ನಡೆಯಿತು. ಅಲ್ಲೇ ಇದ್ದ ಪೊಲೀಸ್‌ ಸಿಬ್ಬಂದಿ ತಕ್ಷಣ ಅವರನ್ನು ಅಲ್ಲಿಂದ ಹೊರಗೆ ಕರೆದುಕೊಂಡು ಹೋದರು. ಆತನ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಸನ್ನೆ ಮಾಡುತ್ತ ಮುಖ್ಯಮಂತ್ರಿ ಭಾಷಣ ಆರಂಭಿಸಿದರು.

ಧರ್ಮಕ್ಕಾಗಿ ಜನರಲ್ಲ, ಜನರಿಗಾಗಿ ಧರ್ಮ ಇರುವುದು. ಹಾಗಾಗಿ ಕನಕದಾಸ ಹಿಂದೂ ಧರ್ಮವನ್ನು ವಿರೋಧಿಸಿಲ್ಲ. ಬಸವಣ್ಣನವರೆಂತೆ ಪರ್ಯಾಯ ಚಿಂತನೆ ನಡೆಸಿಲ್ಲ. ಬದಲಾಗಿ ಹಿಂದೂ ಧರ್ಮದಲ್ಲಿ ಇದ್ದುಕೊಂಡೇ ಅಲ್ಲಿನ ಕೊಳಕುಗಳನ್ನು ಸರಿಪಡಿಸಲು ಪ್ರಯತ್ನಿಸಿದರು. ಹುಟ್ಟಿನಿಂದ ಯಾರೂ ದೊಡ್ಡವರಾಗಲ್ಲ. ಸಾಧನೆ ಮತ್ತು ಮನುಷ್ಯತ್ವದಿಂದ ಶ್ರೇಷ್ಠರಾಗಲು ಸಾಧ್ಯ.’
-ಮುಖ್ಯಮಂತ್ರಿ ಸಿದ್ದರಾಮಯ್ಯ. 

Advertisement

Udayavani is now on Telegram. Click here to join our channel and stay updated with the latest news.

Next