ಅಹ್ಮದಾಬಾದ್: ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಅಜ್ಜ ಸಂತೋಕ್ ಸಿಂಗ್ (84 ವರ್ಷ) ಅವರ ಶವ ಗುಜರಾತ್‌ನ ಸಬರಮತಿ ನದಿಯಲ್ಲಿ ಪತ್ತೆಯಾಗಿದೆ.ಗಾಂಧಿ ಸೇತುವೆ ಹಾಗೂ ದಧೀಜಿ ಸೇತುವೆಯೆ ನಡುವೆ ಸಂತೋಕ್ ಮೃತದೇಹ ರವಿವಾರ ಪತ್ತೆಯಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ. ಮೃತದೇಹವನ್ನು ಮೇಲೆತ್ತಿದ್ದಾರೆ. ಜಸ್‌ಪ್ರೀತ್ ತನ್ನನ್ನು ನೋಡಲು ನಿರಾಕರಿಸಿದ್ದಕ್ಕೆ ಸಂತೋಕ್ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಜಸ್‌ಪ್ರೀತ್ ಭೇಟಿಗೆ ಬಂದಿದ್ದ ಸಂತೋಕ್
ಅಹ್ಮದಾಬಾದ್‌ಗೆ ಮೊಮ್ಮಗ ಜಸ್‌ಪ್ರೀತ್‌ನನ್ನು ಭೇಟಿಯಾಗಲು 84 ವರ್ಷದ ಸಂತೋಕ್ ಆಗಮಿಸಿದ್ದರು. ಬಳಿಕ ಅವರು ಜಸ್‌ಪ್ರೀತ್ ಮನೆಗೂ ಹೋಗಿರುವುದರ ಬಗ್ಗೆ ಸುದ್ದಿ ಇರಲಿಲ್ಲ. ಅತ್ತ ತನ್ನ ಮನೆಗೂ ಮರಳಿರಲಿಲ್ಲ. ಗಾಬರಿಗೊಂಡ ಕುಟುಂಬದವರು ಸಂತೋಕ್ ಕಾಣೆಯಾಗಿದ್ದಾರೆ ಎಂದು ವಸ್ತ್ರಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮತ್ತೂಂದು ಮೂಲಗಳ ಪ್ರಕಾರ, ಡಿ. ಒಂದರಂದು ವಸ್ತ್ರಾಪುರದ “ಸೋನಾಲ್ ಅಪಾರ್ಟ್‌ಮೆಂಟ್’ನಲ್ಲಿರುವ ಮಗಳ ಮನೆಗೆ ಸಂತೋಕ್ ತೆರಳಿದ್ದರು ಎನ್ನಲಾಗಿದೆ. ಇದೇ ವೇಳೆ ಅವರ ಹುಟ್ಟುಹಬ್ಬದಂದು 17 ವರ್ಷದ ಬಳಿಕ ಜಸ್‌ಪ್ರೀತ್‌ನನ್ನು ಭೇಟಿಯಾಗಲು ಇಷ್ಟಪಟ್ಟಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದಕ್ಕೆ ಜಸ್‌ಪ್ರೀತ್ ತಾಯಿ, ಅಂದರೆ ಸಂತೋಕ್ ಸಿಂಗ್ ಅವರ ಸೊಸೆ ದಲ್ಜೀತ್ ಕೌರ್ ಅವಕಾಶ ನಿರಾಕರಿಸಿದ್ದರು. ಕನಿಷ್ಠ ಬುಮ್ರಾ ಮೊಬೈಲ್ ನಂಬರ್ ಕೂಡ ನೀಡಿರಲಿಲ್ಲ. ಈ ಘಟನೆ ಬಳಿಕ ಸಂತೋಕ್ ತಮ್ಮ ಮಗ ಬಲ್ವಿàಂದರ್ ಸಿಂಗ್‌ಗೆ ಕರೆ ಮಾಡಿ, ನಿಧನ ಹೊಂದಿರುವ ತನ್ನ ಪತ್ನಿಯನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ತಿಳಿಸಿದ್ದರು. ಅನಂತರ ಸಂತೋಕ್ ಸಿಕ್ಕಿದ್ದು ಸಾಬರಮತಿ ನದಿಯಲ್ಲಿ ಶವವಾಗಿಯೇ ಎನ್ನಲಾಗಿದೆ. ಆಗ ಜಸ್‌ಪ್ರೀತ್ ಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ವ್ಯಾಪಾರದಲ್ಲಿ ಭಾರೀ ನಷ್ಟ
1980-90ರಲ್ಲಿ ಗುಜರಾತ್‌ನಲ್ಲಿ ಉದ್ಯಮಿಯಾಗಿ ಸಂತೋಕ್ ಬಾರಿ ಯಶಸ್ಸು ಕಂಡಿದ್ದರು. ಸಂತೋಕ್ ಹೆಸರಲ್ಲಿಯೇ ಎರಡು ಕಾರ್ಖಾನೆಗಳಿದ್ದವು. ಅಪ್ಪನ ವ್ಯವಹಾರವನ್ನು ಜಸ್‌ಪ್ರೀತ್ ತಂದೆ ಜಸಿºàರ್ ನೋಡಿಕೊಳ್ಳುತ್ತಿದ್ದರು. ಈ ವೇಳೆ ಬುಮ್ರಾ ತಂದೆ ಜಸಿºàರ್ ನಿಧನರಾದರು. ಬಳಿಕ ಸಂತೋಕ್ ವ್ಯಾಪಾರದಲ್ಲಿ ಬಾರೀ ನಷ್ಟಕ್ಕೆ ಒಳಗಾಗುತ್ತಾರೆ.
ಹೊಟ್ಟೆಪಾಡಿಗಾಗಿ ಉತ್ತರಾಖಂಡ್‌ನಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಾರೆ. ಇಲ್ಲಿಯೂ ಕೈಸುಟ್ಟುಕೊಳ್ಳುತ್ತಾರೆ. ತನ್ನ ಮೊಮ್ಮಗ ಕ್ರಿಕೆಟ್ ಆಡುತ್ತಿರುವುದನ್ನು ಟೀವಿಯಲ್ಲಿ ನೋಡಿದ್ದಾಗ ಆತನನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಇದು ಈ ಹಿಂದೆಯೂ ಒಮ್ಮೆ ಭಾರೀ ಸುದ್ದಿಯಾಗಿದ್ದನ್ನು ಸ್ಮರಿಸಬಹುದು.