ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಮೆಂಟೇಟರ್ ಆಕಾಶ್ ಚೋಪ್ರಾ ರಚಿಸಿದ ಟಿ20 ತಂಡದಲ್ಲಿ ಅಚ್ಚರಿಯೊಂದು ಗೋಚರಿಸಿದೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮೊದಲಾದ ಸ್ಟಾರ್ ಬ್ಯಾಟ್ಸ್‌ಮನ್‌ಗಳ ಬದಲು ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.
ಇತ್ತೀಚಿಗೆ ಐಸಿಸಿ ಒಂದು ಪ್ರಮುಖ ಷರತ್ತಿನೊಂದಿಗೆ ಟಿ20 ವಿಶ್ವ ಇಲೆವೆನ್ ತಂಡವನ್ನು ರಚಿಸುವ ಸವಾಲನ್ನೊಡ್ಡಿತ್ತು. ಈ ತಂಡದಲ್ಲಿ ಪ್ರತೀ ರಾಷ್ಟ್ರದ ಕೇವಲ ಒಬ್ಬ ಆಟಗಾರನಷ್ಟೇ ಇರಬೇಕಿತ್ತು!
ಇದಕ್ಕೆ ಸಂಬಂಧಿಸಿದಂತೆ ವೀಡಿಯೋ ಒಂದನ್ನು ಆಕಾಶ್ ಚೋಪ್ರಾ ಬಿಡುಗಡೆ ಮಾಡಿದ್ದು, ಇದರಲ್ಲಿ ತಾನು ರಚಿಸಿದ ತಂಡದ ಕುರಿತು ಹೇಳಿಕೊಂಡಿದ್ದಾರೆ. ಆರಂಭಿಕರ ಸ್ಥಾನಕ್ಕೆ ಡೇವಿಡ್ ವಾರ್ನರ್ ಮತ್ತು ಜಾಸ್ ಬಟ್ಲರ್ ಆಯ್ಕೆಯಾಗಿದ್ದಾರೆ. ವನ್‌ಡೌನ್‌ನಲ್ಲಿ ಕಾಣಿಸಿಕೊಂಡವರು ಕಾಲಿನ್ ಮುನ್ರೊ. 4ನೇ ಸ್ಥಾನದಲ್ಲಿ ಬಾಬರ್ ಆಜಂ ಇದ್ದಾರೆ.
“5ನೇ ಸ್ಥಾನಕ್ಕೆ ಕೊಹ್ಲಿ ಅಥವಾ ರೋಹಿತ್ ಅವರನ್ನು ಆರಿಸಬೇಕಿತ್ತು. ಒಂದೊಂದು ದೇಶದಿಂದ ಒಬ್ಬ ಆಟಗಾರನಿಗಷ್ಟೇ ಅವಕಾಶ ಇರುವುದರಿಂದ ಇವರಿಬ್ಬರನ್ನೂ ಬಿಡಬೇಕಾಯಿತು’ ಎನ್ನುತ್ತಾರೆ ಚೋಪ್ರಾ.
5ನೇ ಕ್ರಮಾಂಕಕ್ಕೆ ಎಬಿ ಡಿ ವಿಲಿಯರ್, ಬಳಿಕ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಕಾಣಿಸಿಕೊಂಡಿದ್ದಾರೆ. ಮುಂದಿನ ಸ್ಥಾನ ಆಂಡ್ರೆ ರಸೆಲ್ ಪಾಲಾಗಿದೆ. ಪೇಸ್ ಬೌಲರ್‌ಗಳ ಸ್ಥಾನವನ್ನು ಬುಮ್ರಾ ಮತ್ತು ಮಾಲಿಂಗ ಆಕ್ರಮಿಸಿಕೊಂಡಿದ್ದಾರೆ. ಸ್ಪಿನ್ನರ್‌ಗಳ ಯಾದಿಯಲ್ಲಿ ಅಫ್ಘಾನಿಸ್ಥಾನದ ರಶೀದ್ ಖಾನ್ ಮತ್ತು ನೇಪಾಲದ ಸಂದೀಪ್ ಲಮಿಶಾನೆ ಇದ್ದಾರೆ.