ಮುಂಬೈ: ಹತ್ತು ತಂಡಗಳೊಂದಿಗೆ ಹೊಸ ಮಾದರಿಯಲ್ಲಿ ಈ ಬಾರಿ ಐಪಿಎಲ್ ನಡೆಯಲಿದೆ. ಮಾರ್ಚ್ 26ರಿಂದ ಆರಂಭವಾಗಲಿರುವ ವರ್ಣರಂಜಿತ ಕೂಟಕ್ಕೆ ಬಿಸಿಸಿಐ ಸಿದ್ದತೆ ನಡೆಸುತ್ತಿದೆ. ತಂಡಗಳೂ ತಮ್ಮ ತಯಾರಿಯಲ್ಲಿ ತೊಡಗಿದೆ. ಈ ಮಧ್ಯೆ ಹೊಸ ತಂಡವಾದ ಗುಜರಾತ್ ಟೈಟನ್ಸ್ ನ ಆರಂಭಿಕ ಆಟಗಾರ ಜೇಸನ್ ರಾಯ್ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ.
ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್ ಐಪಿಎಲ್ 2022 ರಿಂದ ಟೂರ್ನಮೆಂಟ್ ಬಬಲ್ ನಲ್ಲಿ ಹೆಚ್ಚು ಅವಧಿಯವರೆಗೆ ಉಳಿಯುವ ಸವಾಲನ್ನು ಉಲ್ಲೇಖಿಸಿ ಹಿಂದೆ ಸರಿದಿದ್ದಾರೆ. ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಜೇಸನ್ ರಾಯ್ ಅವರನ್ನು ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿತ್ತು. ರಾಯ್ ಬದಲಿಗೆ ಯಾವ ಆಟಗಾರನನ್ನೂ ಇದುವರೆಗೆ ಹೆಸರಿಸಲಾಗಿಲ್ಲ.
ಜೇಸನ್ ರಾಯ್ ಇತ್ತೀಚೆಗೆ ಪಿಎಸ್‌ಎಲ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದನ್ನೂ ಬಯೋಸೆಕ್ಯೂರ್ ಬಬಲ್ ನಲ್ಲಿಯೂ ಆಡಲಾಯಿತು. ಪಿಎಸ್ ಎಲ್ ನಲ್ಲಿ ಜೇಸನ್ ರಾಯ್ ಕೇವಲ ಆರು ಪಂದ್ಯಗಳನ್ನು ಆಡಿದ್ದರೂ, ಅವರು ಪಂದ್ಯಾವಳಿಯಲ್ಲಿ ಅಗ್ರ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ರಾಯ್ ಅವರು 170.22 ಸ್ಟ್ರೈಕ್ ರೇಟ್ ನಲ್ಲಿ 50.50 ಸರಾಸರಿಯಲ್ಲಿ 303 ರನ್ ಗಳಿಸಿದರು.
ಇದನ್ನೂ ಓದಿ:ಕಾರು ಅಪಘಾತ: ವೈರಲ್ ಹಾಡು ‘ಕಚಾ ಬಾದಮ್’ ಸಿಂಗರ್ ಭುವನ್ ಬಡ್ಯಾಕರ್ ಆಸ್ಪತ್ರೆಗೆ ದಾಖಲು
ಜೇಸನ್ ರಾಯ್ ಈ ಹಿಂದೆಯೂ ಐಪಿಎಲ್ ನಿಂದ ಹಿಂದೆ ಸರಿದಿದ್ದರು. 2020ರಲ್ಲಿ 1.5 ಕೋಟಿ ರೂ ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಳಯ ಸೇರಿದ್ದ ರಾಯ್ ವೈಯಕ್ತಿಕ ಕಾರಣ ನೀಡಿ ಕೂಟದಿಂದ ಹಿಂದೆ ಸರಿದಿದ್ದರು.
ಗುಜರಾತ್ ಟೈಟಾನ್ಸ್ ತಂಡ: ಹಾರ್ದಿಕ್ ಪಾಂಡ್ಯ , ಶುಭಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್.