Advertisement

ಜೇಬಿಗೆ ಭಾರವಾದ ಮಲ್ಲಿಗೆ, ಕನಕಾಂಬರ!

11:42 AM Sep 27, 2017 | |

ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್‌.ಮಾರುಕಟ್ಟೆ, ಹೊಸೂರಿನ ಸಿಂಗನ ಅಗ್ರಹಾರದ ಹಣ್ಣಿನ ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹಬ್ಬದ ವ್ಯಾಪಾರ ಭರ್ಜರಿಯಾಗಿದ್ದು, ಗ್ರಾಹಕರಿಗೆ ಎಂದಿನಂತೆ ಬೆಲೆ ಏರಿಕೆ ಬಿಸಿ, ತಟ್ಟಲಾರಂಭಿಸಿದೆ.

Advertisement

ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬಕ್ಕೆ ಇನ್ನು ಮೂರ್‍ನಾಲ್ಕು ದಿನಗಳು ಬಾಕಿಯಿದ್ದು, ದಿನದಿಂದ ದಿನಕ್ಕೆ ಹೂವು ಮತ್ತು ಹಣ್ಣುಗಳ ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತಿವೆ. ಒಂದು ಕೆಜಿ ಮಲ್ಲಿಗೆ ಹೂವಿಗೆ 500ರಿಂದ 600 ರೂ.ಗಳಿದ್ದು, ಕನಕಾಂಬರ ಕೆಜಿಗೆ 600 ರೂ.ಗಳಿವೆ.

“ಗುರುವಾರದ ವಹಿವಾಟಿನಲ್ಲಿ ಹೂವಿನ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮಂಗಳವಾರದಿಂದಲೇ ಚೆಂಡು ಹೂವು, ಬಟನ್ಸ್‌, ಸೇವಂತಿಗೆ ಹೂವಿನ ಮಾರಾಟದ ಪ್ರಮಾಣ ಹೆಚ್ಚಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ. 20ಕ್ಕಿಂತ ಹೆಚ್ಚು ಹೂವಿನ ಮಾರಾಟ ನಡೆದಿದೆ,’ ಎನ್ನುತ್ತಾರೆ ಹೂವಿನ ವ್ಯಾಪಾರಿ ಚಂದ್ರಶೇಖರ್‌.

ಶುಕ್ರವಾರ ಮತ್ತು ಶನಿವಾರ ಕ್ರಮವಾಗಿ ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬಗಳು ಇದ್ದು, ವಾಹನಗಳು, ಯಂತ್ರೋಪಕರಣಗಳು, ಅಂಗಡಿ ಇತ್ಯಾದಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದ ಬೇಡಿಕೆ ಹೆಚ್ಚುವ ಮುನ್ನವೇ ಹೂವಿನ ಖರೀದಿ ಮಾಡಿ ಮುಗಿಸುವ ಧಾವಂತ ಗ್ರಾಹಕರಿಗಿದ್ದು, ಮಂಗಳವಾರ ಕೆ.ಆರ್‌.ಮಾರುಕಟ್ಟೆಯ ಹೂವಿನ ಸಂತೆ ದಟ್ಟಣೆಯಿಂದ ಕೂಡಿತ್ತು. ಇದೇ ವಾತಾವರಣ ಗುರುವಾರದ ವರೆಗೂ ಮುಂದುವರೆಯುವ ಸಾಧ್ಯತೆ ಇದೆ.

ಸಗಟು ದರದಲ್ಲಿ ಹೂವಿನ ದರ ಮಂಗಳವಾರದವರೆಗೆ ಯಥಾಸ್ಥಿತಿಯಿದ್ದರೂ, ಬುಧವಾರ-ಗುರುವಾರ ಬೆಲೆಗಳು ಏರಿಕೆಯಾಗಲಿವೆ. ಆದರೆ ಚಿಲ್ಲರೆ ಮಾರಾಟಗಾರರು ಈಗಾಗಲೇ ಬೆಲೆಗಳನ್ನು ಏರಿಸಿದ್ದಾರೆ. ಮಲ್ಲಿಗೆ ಹೂವು ಒಂದು ಮೊಳಕ್ಕೆ 30-40 ರೂ.ವರೆಗೆ ಮಾರಿದರೆ, ಸೇವಂತಿಗೆ ಹೂವು ಮಾರಿಗೆ 80-100 ರೂ.ವರೆಗೆ ಇದೆ. ಬಟನ್ಸ್‌ಗೆ ಮಾರಿಗೆ 30ರಿಂದ 40 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. 

Advertisement

ನಿಂಬೆ, ಬೂದಗುಂಬಳಕ್ಕೆ ಬೇಡಿಕೆ: ಕೆ.ಆರ್‌.ಮಾರುಕಟ್ಟೆ, ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ವಿವಿದೆಡೆಗಳಲ್ಲಿ ಈಗಾಗಲೇ ಬೂದಗುಂಬಳಕಾಯಿ ರಾಶಿ ಹಾಕಲಾಗಿದ್ದು, ಗಾತ್ರದ ಮೇಲೆ ಬೆಲೆ ನಿಗದಿ ಮಾಡಲಾಗಿದೆ. ಸಣ್ಣ ಗಾತ್ರದ ಬೂದಗುಂಬಳಕ್ಕೆ 35 ರೂ.ನಿಂದ 40 ರೂ.ವರೆಗೆ ಬೆಲೆ ಇದೆ. ದೊಡ್ಡ ಗಾತ್ರಕ್ಕೆ 50ರಿಂದ 70 ರೂ.ವರೆಗೂ ಬೆಲೆ ನಿಗದಿ ಮಾಡಲಾಗಿದೆ. 

ಆಯುಧ ಪೂಜೆಯಲ್ಲಿ ಪ್ರಮುಖವಾಗಿ ದೃಷ್ಟಿ ತೆಗೆಯಲು ಬೂದುಗುಂಬಳಕಾಯಿ ಮತ್ತು ನಿಂಬೆ ಹಣ್ಣನ್ನು ಹೆಚ್ಚಾಗಿ ಬಳಸುವುದರಿಂದ ಇವುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ನಿಂಬೆಹಣ್ಣಿಗೂ ದರ ಏರಿಕೆಯಾಗಿದ್ದು, 2 ನಿಂಬೆ ಹಣ್ಣಿಗೆ 10ರೂ., ಸಣ್ಣ ಗಾತ್ರದ 3 ನಿಂಬೆಗೆ 10 ರೂ.ಇದೆ. ಹೆಚ್ಚಾಗಿ ಖರೀದಿಸಿದರೆ ಬೆಲೆಯಲ್ಲಿ ಸ್ವಲ್ಪ ಹೆಚ್ಚುಕಡಿಮೆ ಮಾಡುತ್ತೇವೆ. 100 ನಿಂಬೆಹಣ್ಣು ಖರೀದಿ ಮಾಡಿದರೆ 50ರಿಂದ 100 ರೂ.ಗಳಷ್ಟು ರಿಯಾಯಿತಿ ನೀಡುತ್ತೇವೆ ಎನ್ನುತ್ತಾರೆ ನಿಂಬೆಹಣ್ಣು ವ್ಯಾಪಾರಿ ಹನುಮಣ್ಣ. 

ಕಡ್ಲೆಪುರಿಗೂ ಭಾರಿ ಬೆಲೆ: ಹೆಬ್ಟಾಳ, ಸಂಜಯನಗರ, ಮಹಾಲಕ್ಷ್ಮೀಲೇಔಟ್‌, ನಂದಿನಿ ಲೇಔಟ್‌, ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ, ಮಡಿವಾಳ, ಪೀಣ್ಯ ಕೈಗಾರಿಕಾ ಪ್ರದೇಶ, ದಾಸರಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೇ ರಸ್ತೆಯ ಇಕ್ಕೆಲುಗಳಲ್ಲಿ ಬಾಳೆಕಂಬ, ಮಾವಿನ ಸೊಪ್ಪು, ಹೂವಿನ ಮಿನಿ ಮಾರುಕಟ್ಟೆ ತೆರೆದುಕೊಂಡಿದೆ. ಪೂಜಾ ಸಾಮಗ್ರಿಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿವೆ. 

ಹಲವಡೆ ತೆಂಗಿನಕಾಯಿ, ಕಡ್ಲೆಪುರಿ ಮಾರಾಟದ ಅಂಗಡಿಗಳು ರಾರಾಜಿಸುತ್ತಿವೆ. ಆಂಧ್ರ, ಚಿಂತಾಮಣಿ ಮತ್ತಿತರ ಭಾಗಗಳಿಂದ ಗರಿಗರಿಯಾದ ಕಡ್ಲೆಪುರಿ ಲೋಡುಗಟ್ಟಲೆ ಆಗಮಿಸಿದೆ. ಒಂದು ಸೇರು ಪುರಿಗೆ 6-7 ರೂ.ನಂತೆ ಮಾರಲಾಗುತ್ತಿದೆ. ಬೆಲ್ಲ, ಚೋಚೋ, ಕಲ್ಯಾಣಸೇವೆ ಇತ್ಯಾದಿಗಳ ಮಾರಾಟದ ಭರಾಟೆಯೂ ಜೋರಾಗಿದೆ. 

ಕೆ.ಆರ್‌. ಮಾರುಕಟ್ಟೆಯಲ್ಲಿ ಹೂವಿನ ದರ (ಕೆ.ಜಿ.ಗಳಲ್ಲಿ)
-ಮಲ್ಲಿಗೆ ಹೂವು    500-600 ರೂ.
-ಕನಕಾಂಬರ ಹೂವು     600 ರೂ.
-ಚೆಂಡು ಹೂವು    300-400 
-ಸೇವಂತಿಗೆ    160-200
-ಸುಗಂಧರಾಜ್‌    140-160
-ಬಟನ್ಸ್‌    300-400
-ಸಣ್ಣ ಗುಲಾಬಿ    250ರಿಂದ 350 
-ರೋಸ್‌    80-120 ರೂ.
-ಕಾಕಡ    300 ರೂ.
-ಮಳ್ಳೆ ಹೂವು    300 ರೂ.
-ಕಣಿಗಲೆ    200 ರೂ.

ಚಿಲ್ಲರೆ ಮಾರುಕಟ್ಟೆಯಲ್ಲಿ ಹಣ್ಣು ದುಬಾರಿ: ಸಿಂಗನ ಅಗ್ರಹಾರ ಹಣ್ಣಿನ ಮಾರುಕಟ್ಟೆಯಲ್ಲಿ ಸಗಟು ಮಾರಾಟ ದರದಲ್ಲಿ ದಾಳಿಂಬೆ 10 ಕೆ.ಜಿ ಬ್ಯಾಗ್‌ಗೆ 400ರಿಂದ 1000 ರೂ.ಇದ್ದು, ಪ್ರತಿ ಕೆಜಿಗೆ ಗಾತ್ರಕ್ಕೆ ತಕ್ಕಂತೆ 40ರಿಂದ 120 ರೂ.ಇದೆ. ಸೇಬು ಹಣ್ಣಿಗೆ ಸಣ್ಣ ಗಾತ್ರಕ್ಕೆ 60 ಇದ್ದು, ಮಧ್ಯಮ ಗಾತ್ರಕ್ಕೆ 80 ರೂ. ಮತ್ತು ದೊಡ್ಡ ಗಾತ್ರಕ್ಕೆ 120 ರೂ.ಬೆಲೆ ನಿಗದಿ ಮಾಡಲಾಗಿತ್ತು.

ಅನಾನಸ್‌ಗೆ ಪ್ರತಿ ಕೆಜಿಗೆ 25ರಿಂದ 30 ರೂ., ಪಪ್ಪಾಯಿಗೆ 12ರಿಂದ 14 ರೂ. ಮತ್ತು ಕಲ್ಲಂಗಡಿಗೆ 10ರಿಂದ 12 ರೂ.ಗಳಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಗಟು ಮಾರಾಟಕ್ಕಿಂತ ಶೇ.25ರಿಂದ 40ರಷ್ಟು ಹೆಚ್ಚಿಗೆ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಾಗುತ್ತದೆ ಎಂದು ಬೆಂಗಳೂರು ಫ‌ೂÅಟ್‌ ಕಮಿಷನ್‌ ಏಜೆಂಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸಿದ್ದಾರೆಡ್ಡಿ ಹೇಳಿದ್ದಾರೆ.

ವಿಶೇಷ ವ್ಯವಸ್ಥೆ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಹಡ್ಸನ್‌ ಸರ್ಕಲ್‌, ಕಸ್ತೂರಿ ನಗರದ ಹಾರ್ಟಿಬಜಾರ್‌, ಹಾಪ್‌ಕಾಮ್ಸ್‌ ಪ್ರಧಾನ ಕಚೇರಿ (ಡಬ್ಬಲ್‌ ರೋಡ್‌)ಯಲ್ಲಿ ಬೂದುಗುಂಬಳ, ನಿಂಬೆಹಣ್ಣು ಹಾಗೂ ಇತರೆ ಹಣ್ಣುಗಳ ಮಾರಾಟಕ್ಕೆಂದೇ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಹಾಪ್‌ಕಾಮ್ಸ್‌ ಪ್ರಧಾನ ವ್ಯವಸ್ಥಾಪಕ ವಿಶ್ವನಾಥ್‌ ತಿಳಿಸಿದ್ದಾರೆ.

ಹಾಪ್‌ಕಾಮ್ಸ್‌ ದರ:
ಹಣ್ಣು-ತರಕಾರಿ    ಕೆ.ಜಿ ದರ
-ಸೇಬು    125-135 ರೂ.
-ಏಲಕ್ಕಿ ಬಾಳೆ    85 ರೂ.
-ಪಚ್ಚಬಾಳೆ    33 ರೂ.
-ಬೀನ್ಸ್‌    66 ರೂ.
-ಸೌತೆಕಾಯಿ    29 ರೂ.
-ಮೂಲಂಗಿ    40 ರೂ.
-ಟೊಮೇಟೊ    20 ರೂ.
-ತೆಂಗಿನಕಾಯಿ    24-35 ರೂ.

Advertisement

Udayavani is now on Telegram. Click here to join our channel and stay updated with the latest news.

Next