Advertisement

“ಮಲ್ಲಿಗೆ ಕೃಷಿ ಉತ್ತೇಜನಕ್ಕೆ  ಕಾರ್ಖಾನೆ ಬೇಕು’

11:44 AM Oct 05, 2017 | Team Udayavani |

ಉಡುಪಿ: ಉಡುಪಿಯಲ್ಲಿ ಹೆಚ್ಚಿನ ಮಲ್ಲಿಗೆ ಬೆಳೆಯುತ್ತಿದ್ದು, ಆದರೆ ಅದಕ್ಕೆ ಸರಿಯಾದ ಮಾರುಕಟ್ಟೆಯ ಕೊರತೆಯಿಂದಾಗಿ ಮಲ್ಲಿಗೆ ಕೃಷಿಗೆ ಉತ್ತೇಜನ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ಮಲ್ಲಿಗೆ ಕಾರ್ಖಾನೆ ನಿರ್ಮಿಸಿದರೆ, ಸುಗಂಧ ದ್ರವ್ಯಗಳನ್ನು ತಯಾರಿಸ ಬಹುದು. ಇದರಿಂದ ಮಲ್ಲಿಗೆ ಕೃಷಿಗೂ ಬೇಡಿಕೆ ಬರುತ್ತದೆ. 

Advertisement

ಇದು ಮಣಿಪಾಲ ಕೆಎಂಸಿಯ ಡಾ| ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ “ನವ ಕರ್ನಾಟಕ 2025(ವಿಷನ್‌ 2025)’ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲೆಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ವರ್ಗದ ಜನರಿಂದ ಕೇಳಿ ಬಂದ ಸಲಹೆ.  “ಪೊಲೀಸ್‌ ವ್ಯವಸ್ಥೆ ಸುಧಾರಿಸಿ’ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್‌ ಸಿಬಂದಿ ನೇಮಕಾತಿ, ಉಡುಪಿಗೆ ಪ್ರತ್ಯೇಕ ಸೈಬರ್‌ ಠಾಣೆ, ತಾಲೂಕಿಗೊಂದು ಮಹಿಳಾ ಪೊಲೀಸ್‌ ಠಾಣೆ, 10 ವರ್ಷಕ್ಕೊಮ್ಮೆ ಪೊಲೀಸ್‌ ಬಲವರ್ಧನೆ, ಆಧುನಿಕ ಶಸ್ತ್ರಗಳು, ಆಯಾ ಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಕೆ, ಏಕರೂಪ ಪೊಲೀಸ್‌ ವ್ಯವಸ್ಥೆ ಜಾರಿಗೆ ಬರಲಿ. ತ್ವರಿತಗತಿಯ ನ್ಯಾಯಾಂಗ ವ್ಯವಸ್ಥೆಗೆ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌, ತಾಲೂಕಿಗೊಂದು ಇ- ಕೋರ್ಟ್‌ ಸ್ಥಾಪನೆ, ಅಪರಾಧಿಗಳಿಗೆ ಜಿಲ್ಲೆ ಗೊಂದು ಪುರ್ನವಸತಿ ಕೇಂದ್ರ ಬೇಕು ಎನ್ನುವ ಸಲಹೆಗಳೂ ಕೇಳಿ ಬಂದವು.

ಅಭಿವೃದ್ಧಿಗೆ ಒತ್ತು :  ಪ್ರಮೋದ್‌ ಕಾರ್ಯಾಗಾರ ಉದ್ಘಾಟಿಸಿ ಮಾತನಾ ಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌, ಕುಡಿಯುವ ನೀರು, ಶಿಕ್ಷಣ, ಒಳಚರಂಡಿ ವ್ಯವಸ್ಥೆಗೆ ಹೆಚ್ಚಿನ ಹಣ ವಿನಿಯೋಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆ, ಐಟಿ-ಬಿಟಿ, ಗ್ಯಾಸ್‌ ಪೈಪ್‌ಲೈನ್‌, ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದರು. 1,800 ಕೋ. ರೂ. ಮಂಜೂರು ಉಡುಪಿಯ “ವಿಷನ್‌ -2025′ ಯಡಿ ಹಾಕಲಾದ ಯೋಜನೆಯಲ್ಲಿ ಶೇ. 50 ಕಾರ್ಯಗತಗೊಂಡಿದ್ದು, 2018 ರೊಳಗೆ ಬಹುತೇಕ ಪೂರ್ಣಗೊಳ್ಳಲಿದೆ. ಕಳೆದ 4 ವರ್ಷಗಳಲ್ಲಿ ಉಡುಪಿಗೆ ಒಟ್ಟು 1800 ಕೋ. ರೂ. ಹಣ ಮಂಜೂರಾಗಿದೆ. ತೆರಿಗೆ ಸಂಗ್ರಹದಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು ಹಾರಾಷ್ಟ್ರವನ್ನು ಹಿಂದಿಕ್ಕಿ 2ನೇ ಸ್ಥಾನ ಕ್ಕೇರಿದೆ ಎಂದು ಸಚಿವರು ಹೇಳಿದರು.

ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌, ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು, ಎಸ್‌ಪಿ ಸಂಜೀವ್‌ ಎಂ. ಪಾಟೀಲ್‌, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ವಿಷನ್‌ -2025 ಯೋಜನೆ ರೂಪಿಸಿದ ಪ್ರಸಾದ್‌ ಉನ್ನಿಕೃಷ್ಣನ್‌ ಉಪಸ್ಥಿತರಿದ್ದರು. 

ಮುಖ್ಯಮಂತ್ರಿಗಳ ಪ್ರ. ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಪ್ರಾಸ್ತವಿಸಿದರು. ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸ್ವಾಗ
ತಿಸಿದರು. ಅಶೋಕ್‌ ಕಾಮತ್‌ ಕಾರ್ಯ ಕ್ರಮ ನಿರೂಪಿಸಿದರು. ಜಿ.ಪಂ. ಸಿಇಒ ಶಿವಾನಂದ ಕಾಪಶಿ ವಂದಿಸಿದರು. 

Advertisement

ಉಡುಪಿ ಅಭಿವೃದ್ಧಿಗೆ  ಕೆಲವು ಸಲಹೆಗಳು
 ಪ್ರತಿ ಗ್ರಾ.ಪಂಚಾಯಿತಿಗೊಂದು ಮಾದರಿ ಶಾಲೆ. ಇ- ಆಡಳಿತಕ್ಕೆ ಆದ್ಯತೆ,  ಪ್ರತಿ ಇಲಾಖೆಯಲ್ಲೂ ತಾಂತ್ರಿಕ ಜ್ಞಾನವಿರುವವರನ್ನು ನೇಮಕ. 
ಕೃಷಿ ಕ್ಷೇತ್ರ ಹಲವು ಸವಾಲುಎದುರಿಸುತ್ತಿದ್ದು ಇರುವಂತಹ ಯೋಜನೆ ಗಳ ಸದ್ಬಳಕೆ ಅತ್ಯಗತ್ಯ, ನೀರು, ನೈರ್ಮಲ್ಯ, ರಸ್ತೆ ಸಂಪರ್ಕಕ್ಕೆ ಒತ್ತು. 
ಖಾಸಗಿ ಶಾಲೆಗಳಿಗೆ ಸರಕಾರ ಅನುಮತಿ ನೀಡಬಾರದು. ಪಿಯುವರೆಗೆ ಕಡ್ಡಾಯ ಶಿಕ್ಷಣ, ಇ-ಲೈಬ್ರೆರಿ, ಸರಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ಕಡ್ಡಾಯ, ಲೈಂಗಿಕ ಶಿಕ್ಷಣ ಕುರಿತು ಮಕ್ಕಳಿಗೆ ಸರಿಯಾದ ಮಾಹಿತಿ. ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆ, ಪ್ರತಿ ಆಸ್ಪತ್ರೆಯಲ್ಲಿ ಎಂಬಿಬಿಎಸ್‌ ಓದಿದ ವೈದ್ಯರು ಕಡ್ಡಾಯ 24 ಗಂಟೆ ಸೇವೆ ಸಲ್ಲಿಸಲಿ.
ಕಚ್ಚಾ ವಸ್ತು ಆಧಾರಿತ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ. ಹೆಬ್ರಿ, ಪೆರ್ಡೂರು, ಬ್ರಹ್ಮಾವರ, ಬೈಂದೂರಿನಂತಹ ಪ್ರದೇಶಗಳಿಗೆ ತಾಂತ್ರಿಕ ಆಧಾರಿತ ಮೂಲ ಸೌಕರ್ಯ ಒದಗಿಸಬೇಕು.
ಆಹಾರ ಉತ್ಪನ್ನ ಪಾರ್ಕ್‌, ಮೀನು ಸಂಸ್ಕರಣಾ ಕೈಗಾರಿಕೆಗೆ ಉತ್ತೇಜನ, ಮೀನು ಉತ್ಪತ್ತಿ ಸಂರಕ್ಷಣೆ, ಕೌಶಲಾಭಿವೃದ್ಧಿಗೆ ಒತ್ತು. 
ಸಣ್ಣ ಹಾಗೂ ದೊಡ್ಡ ಪ್ರಮಾಣದ ಐಟಿ ಪಾರ್ಕ್‌,  ವೈ-ಫೈ ಸೇವೆ.

Advertisement

Udayavani is now on Telegram. Click here to join our channel and stay updated with the latest news.

Next