ಆ ದೇಶದ ಯುವರಾಜನಿಗೆ ಮದುವೆಯ ವಯಸ್ಸಾಗಿತ್ತು. ತನ್ನನ್ನು ಮದುವೆಯಾಗುವ ಹುಡುಗಿ ರಾಜಕುಮಾರಿಯಾಗಬೇಕಿಲ್ಲ, ಹಳ್ಳಿಯ ರೈತನ ಮಗಳಾದರೂ ಅಡ್ಡಿಯಿಲ್ಲ. ಅವಳು ರೂಪವತಿಯಾಗಿರಬೇಕು, ಗುಣಸಂಪನ್ನೆಯಾಗಿರಬೇಕು ಎಂಬುದು ಅವನ ಆಶಯ. ಹಾಗಿರುವ ವಳನ್ನು ಹುಡುಕಿಕೊಂಡು ಬರಬೇಕೆಂದು ಸೇವಕರನ್ನು ಎಲ್ಲ ಕಡೆಗೂ ಕಳುಹಿಸಿದ್ದ. ಅವರು ಅಂಥವಳನ್ನು ಅರಸಿಕೊಂಡು ಹಳ್ಳಿಗೆ ಬಂದರು. ಅಲ್ಲಿ ರೇಷ್ಮೆ ನೂಲಿನಿಂದ ಬಟ್ಟೆ ನೇಯುತ್ತಿದ್ದ ನಿಕಿಷಾ ಎಂಬ ಯುವತಿಯಿದ್ದಳು. ಚಿಕ್ಕಂದಿನಲ್ಲೇ ತಾಯಿ, ತಂದೆಯನ್ನು ಕಳೆದುಕೊಂಡಿದ್ದ ಅವಳೆಂದರೆ ಹಳ್ಳಿಯ ಎಲ್ಲರಿಗೂ ಪ್ರೀತಿ ಇತ್ತು. ಸೇವಕರು ಯುವತಿಯನ್ನು ನೋಡಿದರು. ಅವಳಷ್ಟು ರೂಪವತಿ ದೇಶದಲ್ಲಿಯೇ ಇನ್ನೊಬ್ಬರಿಲ್ಲ ಅನಿಸಿತು ಅವರಿಗೆ. ಮಾತನಾಡಿಸಿದರು. ಅವಳು ಪ್ರೀತಿಯಿಂದ ನೀಡಿದ ಅಕ್ಕಿಯ ಖಾದ್ಯವನ್ನು ಸವಿದರು. ಎಲ್ಲ ಬಗೆಯಿಂದಲೂ ಅವಳನ್ನು ಪರೀಕ್ಷಿಸಿ ಯುವರಾಜನಿಗೆ ಹೆಂಡತಿಯಾಗಲು ಇವಳು ತಕ್ಕವಳು ಎಂದು ನಿರ್ಧರಿಸಿದರು. “”ನಿನಗೆ ರಾಜಕುಮಾರನ ಕೈ ಹಿಡಿಯಲು ಇಷ್ಟವಿದೆಯೇ?” ಎಂದು ಕೇಳಿದರು. ನಿಕಿಷಾ ತಲೆತಗ್ಗಿಸಿ, “”ನಾನು ಬಡವರ ಮನೆಯವಳು. ಯುವರಾಜರು ಒಪ್ಪಿಕೊಳ್ಳುವುದಾದರೆ ನನ್ನ ಅಭ್ಯಂತರವಿಲ್ಲ” ಎಂದು ಹೇಳಿದಳು. ಕೆಲವೇ ದಿನಗಳಲ್ಲಿ ಅವಳ ಮನೆಗೆ ಯುವರಾಜನು ಬರುತ್ತಾನೆಂದು ಹೇಳಿ ಸೇವಕರು ಹೊರಟುಹೋದರು.
Advertisement
ಮುದುಕಿಗೆ ಈ ವಿಷಯ ತಿಳಿಯಿತು. ನೇರವಾಗಿ ನಿಕಿಷಾ ಮನೆಗೆ ಬಂದಳು. “”ಸುದ್ದಿ ಕೇಳಿದೆ, ನೀನು ಯುವರಾಜನ ಹೆಂಡತಿ ಯಾಗುವೆಯಂತೆ! ಅದು ಹೇಗೆ ಸಾಧ್ಯ? ಅವನಿಗೆ ನೀನು ಮುಖ ತೋರಿಸು. ಆದರೆ ಕುದುರೆಯ ಮೇಲೆ ಕುಳಿತು ವಧುವಾಗಿ ಅವನ ಬಳಿಗೆ ಹೋಗುವವಳು ನಾನು. ಅವನು ನನ್ನನ್ನು ಒಪ್ಪಿಕೊಳ್ಳದಿದ್ದರೆ ಅವನನ್ನು ಕೊಂದುಹಾಕುತ್ತೇನೆ” ಎಂದು ಹೆದರಿಸಿದಳು. ಯುವರಾಜ ನಿಕಿಷಾಳನ್ನು ನೋಡಲು ಬಂದ. ಅವಳ ರೂಪಾತಿಶಯ, ಗುಣ-ನಡತೆಗಳಿಂದ ಅವನಿಗೆ ಆನಂದವಾಯಿತು. ಆದರೆ ನಿಕಿಷಾಳ ಮುಖದಲ್ಲಿ ಸಂತೋಷ ಇರಲಿಲ್ಲ. “”ಯಾಕೆ ಸೊರಗಿದ್ದೀ? ನಿನಗೆ ಅರಮನೆಯ ಸಂಬಂಧ ಇಷ್ಟವಿಲ್ಲವೆ?’ ಎಂದು ಕೇಳಿದ.
Related Articles
Advertisement
ಮುದುಕಿ ಸಿಟ್ಟಿಗೆದ್ದಳು. “”ಏನಿದು, ಇಷ್ಟು ವಯಸ್ಸಾಗಿರುವ ನಾನು ಯುವತಿಯಾಗಲು ಸಾಧ್ಯವೇ? ಕಬ್ಬಿಣದ ಕಡಗಗಳಿರುವ ನನ್ನಲ್ಲಿ ಚಿನ್ನದ ಒಡವೆಗಳು ಹೇಗೆ ಬರುತ್ತವೆ? ಸುಮ್ಮನೆ ತಲೆಹರಟೆ ಮಾಡಬೇಡ” ಎಂದು ಗದರಿದಳು.
“”ತಲೆಹರಟೆ ಅಲ್ಲ, ಮನಸ್ಸಿದ್ದರೆ ಮಾರ್ಗವಿದೆ. ದಟ್ಟ ಅರಣ್ಯದ ನಡುವೆ ಒಂದು ಮರವಿದೆ. ಕಾಡಿನಲ್ಲಿ ಈ ಜಾತಿಯ ಬೇರೆ ಮರಗಳು ಇಲ್ಲವಾದ ಕಾರಣ ಅದನ್ನು ಗುರುತಿಸುವುದು ಕಷ್ಟವೇನಲ್ಲ. ಅದು ಸಾಧಾರಣವಾದುದಲ್ಲ, ಅದ್ಭುತ ಶಕ್ತಿಯನ್ನು ಪಡೆದಿದೆ. ಅದರ ಕೆಳಗೆ ಅಮಾವಾಸ್ಯೆಯ ದಿನ ರಾತ್ರೆ ಬೆಳಗಾಗುವ ವರೆಗೂ ಕುಳಿತುಕೊಳ್ಳಬೇಕು. ತೂಕಡಿಸಬೇಕು. ಆಗ ಏನು ಬೇಕೋ ಕನಸು ಕಾಣಬೇಕು. ಕನಸು ಕಂಡ ಎಲ್ಲ ವಸ್ತು ದೊರಕುತ್ತದೆ. ಅಲ್ಲಿ ಒಂದು ರಾತ್ರೆ ಕಳೆದು ಬೇಕಾದುದನ್ನು ಪಡೆದುಕೊಂಡು ಬಾ. ಹಾಗಿದ್ದರೆ ನನಗೆ ತಕ್ಕ ರಾಣಿಯಾಗುವೆ’ ಎಂದು ಹೇಳಿದ ಯುವರಾಜ.
“”ಅಂತಹ ಶಕ್ತಿಯಿರುವ ಮರವಿದ್ದರೆ ನಾನು ಖಂಡಿತ ಅಲ್ಲಿಗೆ ಹೋಗಿ ನಿನಗೆ ಇಷ್ಟವಾಗುವ ಹಾಗೆ ಸುಂದರಿಯಾಗಿ ಬರುತ್ತೇನೆ’ ಎಂದು ಮುದುಕಿ ಒಪ್ಪಿಕೊಂಡಳು. ಕೆಲವು ದಿನಗಳಲ್ಲಿ ಅಮಾವಾಸ್ಯೆ ಬಂದಿತು. ಮುದುಕಿ ಮರವನ್ನು ಹುಡುಕಿಕೊಂಡು ದಟ್ಟ ಕಾಡಿಗೆ ಹೋದಳು. ವಿಶೇಷವಾಗಿರುವ ಮರವನ್ನು ಹುಡುಕುವುದು ಕಷ್ಟವಾಗಲಿಲ್ಲ. ತನಗೆ ಬೇಕಾದುದನ್ನೆಲ್ಲ ಪಡೆದು ಹಳ್ಳಿಯವರನ್ನು ಮೀರಿಸುವ ಶ್ರೀಮಂತಳಾಗ ಬೇಕು, ಮನ ಮೆಚ್ಚಿಸುವ ಸುಂದರಿಯಾಗಬೇಕು ಎಂದು ಯೋಚಿಸುತ್ತ ಮರದ ಕೆಳಗೆ ಕುಳಿತುಕೊಂಡಳು.
ಕುಳಿತಲ್ಲಿಯೇ ಮುದುಕಿಗೆ ತೂಕಡಿಕೆ ಆರಂಭವಾಯಿತು. ಆಗ ಮರದ ಮೇಲಿಂದ ಒಂದು ದೊಡ್ಡ ಹಣ್ಣು ತೊಟ್ಟು ಕಳಚಿ ನೇರ ವಾಗಿ ಅವಳ ನೆತ್ತಿಯ ಮೇಲೆ ಬಿದ್ದಿತು. ಮುದುಕಿ ಕನಸಿನಲ್ಲಿ, “”ಈ ಹಣ್ಣಿನ ಬದಲು ನನ್ನ ಮುಂದೆ ಒಂದು ಚೀಲ ತುಂಬ ಬೆಳ್ಳಿಯ ಗಟ್ಟಿಗಳು ಬಂದುಬೀಳಬಹುದಿತ್ತಲ್ಲವೆ?” ಎಂದು ಯೋಚಿಸುತ್ತಿದ್ದಳು. ಮರುಕ್ಷಣವೇ ಆಕಾಶದಿಂದ ಚೀಲ ತುಂಬ ಬೆಳ್ಳಿಯ ಗಟ್ಟಿಗಳು ಅವಳ ಬಳಿಯಲ್ಲಿ ಬಿದ್ದಿತು.
ಯುವರಾಜ ಹೇಳಿದ ಮಾತಿನ ಮೇಲೆ ಮುದುಕಿಗೆ ನಂಬಿಕೆ ಬಂತು. ಈ ಮರ ಕನಸು ಕಂಡುದನ್ನೆಲ್ಲ ಕೊಡುವುದರಲ್ಲಿ ಅನುಮಾನವಿಲ್ಲ ಎನಿಸಿತು. ಮತ್ತೆ ತೂಕಡಿಕೆ ಆರಂಭಿಸಿದಳು. ಆಗ ಒಂದು ತರಗೆಲೆ ಬಂದು ಅವಳ ಬೆನ್ನಿನ ಮೇಲೆ ಬಿದ್ದಿತು. ಮುದುಕಿ ಕನಸು ಕಾಣುತ್ತಿದ್ದಳು. “”ಒಣಗಿದ ಎಲೆಯ ಬದಲು ಬಂಗಾರದ ನಾಣ್ಯಗಳಿರುವ ಚೀಲ ಕೆಳಗೆ ಬೀಳಬಹುದಿತ್ತಲ್ಲವೆ?” ಎಂದು ಅವಳ ಯೋಚನೆ. ಕನಸಿನಿಂದ ಎಚ್ಚರ ವಾದ ಕೂಡಲೇ ಚೀಲವೊಂದು ಬಳಿಗೆ ಬಂದುಬಿದ್ದಿತು. ಅದನ್ನು ಮುಟ್ಟಿ ನೋಡಿ ನಾಣ್ಯಗಳಿರುವುದನ್ನು ಖಚಿತಪಡಿಸಿಕೊಂಡಳು.
ಚಿನ್ನ ಮತ್ತು ಬೆಳ್ಳಿ ಕೈ ಸೇರಿದ ಕೂಡಲೇ ಮುದುಕಿಗೆ ತಾನು ಸುಂದರಿ ಯಾಗಿ ಯುವರಾಜನ ಕೈ ಹಿಡಿಯಬೇಕೆಂಬ ವಿಷಯ ಮರೆತು ಹೋಯಿತು. ಬೆಳಗಾಗುವ ಮೊದಲು ಇದನ್ನೆಲ್ಲ ತೆಗೆದುಕೊಂಡು ಮನೆ ಸೇರಬೇಕು, ಯಾರ ಕಣ್ಣಿಗೂ ಬೀಳದ ಹಾಗೆ ಸುರಕ್ಷಿತವಾಗಿಡಬೇಕು. ಮುಂದಿನ ಅಮಾವಾಸ್ಯೆಗೆ ಮತ್ತೆ ಬಂದು ಬೇಕಾದುದನ್ನೆಲ್ಲ ಪಡೆಯ ಬೇಕು ಎಂದು ಯೋಚಿಸಿದಳು. ಮೆಲ್ಲಗೆ ಬೆಳ್ಳಿಯ ಗಟ್ಟಿಗಳಿರುವ ಚೀಲವನ್ನು ತಲೆಯ ಮೇಲಿಟ್ಟುಕೊಂಡಳು. ಬಂಗಾರದ ನಾಣ್ಯಗಳ ಚೀಲವನ್ನು ಬೆನ್ನಿಗೆ ಕಟ್ಟಿಕೊಂಡಳು. ಮನೆಯ ದಾರಿ ಹಿಡಿಯಲು ಮುಂದಾದಳು. ಆಗ ತೂಕಡಿಕೆ ಬಂದಿತು.
ಆಗ ದೂರದಲ್ಲಿ ತೋಳವೊಂದು ಕೂಗುವ ಧ್ವನಿ ಕೇಳಿಸಿತು.ಮುದುಕಿ ಕನಸಿನಲ್ಲಿ ಭಯಗೊಂಡು, “”ತೋಳ ಈ ಕಡೆಗೆ ಬಂದು ನನ್ನ ಮೇಲೆ ಎರಗಿ ಕೊಂದುಬಿಟ್ಟರೆ?” ಎಂದು ನೆನೆದಳು. ಅವಳಿನ್ನೂ ಕನಸಿನ ಮರದ ಕೆಳಗೆ ಕುಳಿತುಕೊಂಡಿದ್ದ ಕಾರಣ ತೋಳ ಅವಳೆದುರಿಗೆ ಬಂದೇ ಬಿಟ್ಟಿತು. ಮುದುಕಿಯ ಮೈಮೇಲೆ ಹಾರಿ ಅವಳನ್ನು ಕೊಂದು ಹಾಕಿತು. ಮುದುಕಿಯ ಕಾಟದಿಂದ ಹಳ್ಳಿ ಮುಕ್ತವಾಯಿತು. ನಿಕಿಷಾ ಯುವರಾಜನ ಕೈಹಿಡಿದು ಅರಮನೆಯಲ್ಲಿ ಸುಖವಾಗಿದ್ದಳು.
ಪ. ರಾಮಕೃಷ್ಣ ಶಾಸ್ತ್ರಿ