ಮೂರು ರೇಖೆಯಲಿ ಚಿತ್ರ ಬಿಡಿಸಿದರೂ ಗಾಂಧಿ ಮೂಡಲಿಲ್ಲ ಮೂರು ಮುನ್ನೂರು ಶಬ್ದ ಬರೆದರೂ ಆತನು ಸಿಗಲಿಲ್ಲ ಮೂರು ಮಂಗಗಳ ಆಡಿ ತೋರಿದರು ಆತ ಕಾಣಲಿಲ್ಲ
ಮೂರು ಬಣ್ಣಗಳ ಬಳಿದು ತಂದರು ನಕ್ಕಂತಾಯಿತೆ ಉದ್ದ? ಟೊಪ್ಪಿ ತೊಟ್ಟರೂ ಕಳಚಿ ಇಟ್ಟರೂ ಆತನೆಲ್ಲಿ ಇದ್ದ?
ಸರ್ತ ಕುಳಿತರು ಚರಕ ಸುತ್ತಿದರೂ ಮಂದಿ ಮಾಗಧವಂದಿ ಖಾದಿ ತೊಟ್ಟರೂ ಭಾಷಣ ಮಳೆಯಲಿ ತೋಯಿಸಿ ನೆನೆದರೂ ತಾತನ ಸುಳಿವಿಲ್ಲ. ಉಪವಾಸಕೆ ಹಾ! ಅಪಹಾಸವೆ ಗತಿ ಗಾಂಧಿ ದಕ್ಕಲಿಲ್ಲ ರಾಮ ರಾಮ ಹೇ ರಾಮ ಪ್ರಾರ್ಥನಾ ಮಂತ್ರಕುದುರಲಿಲ್ಲ ಯಂತ್ರ ತಂತ್ರಕೂ ಕಂಪ್ಯೂಟರಿಗೂ ವೈಷ್ಣವ ಜನತೋ ಪತಿತ ಪಾವನಕೂ ಭಜನೆ ಹಾರ್ಮನೀ ತಾಳ ತಂಬೂರಿಗೂ ಸಿಗುವ ಸಿದ್ಧನಲ್ಲ
ಬೋಳುತಲೆ ಮತ್ತು ಬೊಚ್ಚುಬಾಯಿಯೂ ತುಂಡು ಉಡುಗೆ ಜೊತೆ ಮೇಲು ಹೊದಿಕೆಯೂ ದಂಡ ಕನ್ನಡಕ ಧಾಪು ನಡಿಗೆಯೂ ಆಚೆಗೀಚೆಗಿನ ಅನುಯಾಯಿನಿಯರು ನಾಡಿನುತ್ಸವದಿ ಸ್ತಬ್ದ ಚಲಿಸಿದರೂ ಗಾಂಧಿ ನಾಡಿ ಇಲ್ಲ.
ಹುಡುಕುತ ಹುಡುಕುತ ದೇಶ ತಿರುಗಿದರೂ ಸಂಶೋಧಿಸುತಾ ಲೋಕ ಅಲೆದರೂ ಆತನು ಸಿಗಲಿಲ್ಲ.
ನಮ್ಮನೆಯಲ್ಲೇ ನಮ್ಮೊಳಗಿರುವವ ಆ ಮಹಾತಮ ಜೀವ ಕದ ತೆರೆದರೆ ಸೈ ಬಂದೇ ಬರುವವ ಗರುವವೆ ಇಲ್ಲದವ ಕರೆಗೋ ಕೊಡುವವ ಕಂಬನಿ ತಿಳಿವವ ಎಂದೆಲ್ಲಾ ಖ್ಯಾತನವ ಎಲ್ಲಿ ಕರಗಿ ಹೋದ?
ಮರುಗಿದನೇ ಅವ ಕರಗಿದನೇ ಒರಗಿದನೇ ಅವ ಶಾಶ್ವತದಲ್ಲಿ ನಮ್ಮೊಡಲಿನ ಒಳಸಂಚಿನಲಿ? ಒಳಗಿದ್ದೇ ಒಳ ಬೇಗೆಯಲಿ? ಸರಳ ಕಾಣುವ ಸುಲಭ ಕಾಣುವ ಸರಳ ಸುಲಭವಲ್ಲ ಸರಳ ಮಾತ್ರನೇ? ಮರುಳನು ಗಾಂಧಿ ಮರುಳು ಸರಳವಲ್ಲ ಮರುಳೆ, ಗಾಂಧಿ ಸರಳನಲ್ಲ
ವೈದೇಹಿ