ಪ್ರಧಾನ ಮಂತ್ರಿಗಳು ನೋಟ್ ಬ್ಯಾನ್ ಘೋಷಣೆ ಬಳಿಕ ನಡೆದ ಘಟನೆಗಳು ಅನೇಕ. ಆ ಕುರಿತು ಈಗಾಗಲೇ ಒಂದಷ್ಟು ಚಿತ್ರಗಳಲ್ಲು ಪ್ರಸ್ತಾಪವೂ ಆಗಿದೆ. ಆದರೆ, ಡಿಮಾನಿಟೇಜಶನ್ ಆದ ನಂತರ ಕಪ್ಪು ಹಣವನ್ನು ಹೇಗೆಲ್ಲಾ ಬಿಳಿ ಹಣವನ್ನಾಗಿಸಿ, ಯಾರನ್ನೆಲ್ಲಾ ಬಳಸಿಕೊಂಡು, ಯಾರ್ಯಾರಿಗೆ ಪಂಗನಾಮ ಹಾಕಿದರು ಎಂಬ ಸ್ವಾರಸ್ಯಕರ ವಿಷಯ ಇಟ್ಟುಕೊಂಡು ಮಾಡಿದ ಚಿತ್ರ “ಜನ್‌ಧನ್’ ಜನವರಿ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮರಡಿಹಳ್ಳಿ ನಾಗಚಂದ್ರ ನಿರ್ದೇಶನದ ಈ ಚಿತ್ರ ಶ್ರೀ ಸಿದ್ಧಿವಿನಾಯಕ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿದ್ದು, ಇದು ಕಾಮನ್ ಮ್ಯಾನ್ ಮತ್ತು ರಾಯಲ್ ಮ್ಯಾನ್ ಕುರಿತಾದ ಕಥೆ ಹೊಂದಿದೆ. “ಪ್ರಧಾನ ಮಂತ್ರಿಗಳು ನೋಟ್ ಬ್ಯಾನ್ ಘೋಷಣೆ ಮಾಡಿದ ಬಳಿಕ ಆದಂತಹ ಘಟನೆಗಳೇ ಚಿತ್ರದ ಜೀವಾಳ. ಅದೆಷ್ಟೋ ಜನರು ಕಪ್ಪುಹಣ ಕಳೆದುಕೊಂಡರು, ಆ ಮೂಲಕ ಮುಗ್ಧರನ್ನು ಹೇಗೆಲ್ಲಾ ಬಳಸಿಕೊಂಡರು ಎಂಬ ಸುತ್ತ ಸಿನಿಮಾ ಮೂಡಿ ಬಂದಿದೆ.
ಇಲ್ಲೂ ಪ್ರೀತಿ, ಪ್ರೇಮ ವಿಷಯದ ಜೊತೆಗೆ ಒಂದಷ್ಟು ಮಾನವೀಯ ಅಂಶಗಳಿವೆ. ಸಂದರ್ಭಕ್ಕೆ ತಕ್ಕ ಫೈಟ್‌ಗಳೂ ಇವೆ. ಸುನೀಲ್ ಶಶಿ ಚಿತ್ರದ ಹೀರೋ. ಅವರಿಗೆ ಇದು ಮೊದಲ ಚಿತ್ರ. ಇನ್ನು ಅವರಿಗೆ ರಚನಾ ದಶರಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಿಗೂ ಇದು ಹೊಸ ಅನುಭವ ಕಟ್ಟಿ ಕೊಟ್ಟ ಚಿತ್ರವಂತೆ. “ಜನ್‌ಧನ್’ ಚಿತ್ರ ಜರ್ನಿಯಲ್ಲಿ ನಡೆಯುವಂತಹ ಕಥೆಯಾಗಿದ್ದು, ಸಾಮಾನ್ಯ ಜನರ ಬದುಕು,
ಬವಣೆ ಜೊತೆಯಲ್ಲಿ ಒಂದು ಸಣ್ಣ ಸಂದೇಶ ಸಾರುವ ಚಿತ್ರ ಇದಾಗಿದ್ದು, ಎಲ್ಲಾ ವರ್ಗ ನೋಡುವಂತಹ ಚಿತ್ರ ಎಂಬುದು ಅವರ ಮಾತು. ಲಹರಿ ಆಡಿಯೋ ಸಂಸ್ಥೆ ಮೂಲಕ ಹೊರಬಂದಿರುವ ಹಾಡುಗಳಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಚಿತ್ರಕ್ಕೆ ಟಾಪ್‌ಸ್ಟಾರ್ ರೇಣು ಅವರು ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮೊದಲ ಸಲ “ಗೊರವನಹಳ್ಳಿ’ ಲಕ್ಷ್ಮೀ ಪ್ರಸಾದ್ ಹಾಡಿದ್ದಾರೆ. ಚಿತ್ರದಲ್ಲಿ ಸುಮನ್ ಶರ್ಮ ಸಾಯಿ ಲಕ್ಷ್ಮಣ್, ಅರುಣ್ ಮೇಷ್ಟ್ರು, ವಿನಾಯಕ ಇತರರು ನಟಿಸಿದ್ದಾರೆ.