ಗುತ್ತಲ: ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಔಷಧ ಹಾಗೂ ಮಾತ್ರೆಗಳು ದೊರೆಯುವುದರಿಂದ ಬಡ-ಮಧ್ಯಮ ಕುಟುಂಬದ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನೌಷಧ ಕೇಂದ್ರ ತೆರೆದಿದೆ. ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಶಿಫಾರಸು ಮಾಡಿರುವ ಔಷಧಿ ನೀಡುತ್ತಿದ್ದು, ಔಷ ಧ ಕೊಳ್ಳಲು ಹಿಂಜರಿಯಬಾರದು ಎಂದರು.
ಮಾಜಿ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಜನೌಷಧಿ ಕೇಂದ್ರಗಳು ಬಡವರ ಪಾಲಿಗೆ ಆಶಾಕಿರಣವಾಗಿವೆ. ಗುತ್ತಲ ಪಟ್ಟಣದಲ್ಲಿ ಕೇಂದ್ರ ಅವಶ್ಯಕವಿತ್ತು. ಅದು ಇಂದು ಉದ್ಘಾಟನೆಯಾಗಿರುವುದು ಬಡವರಿಗೆ ಸುದೈವವಾಗಿದೆ. ಪ್ರಸ್ತುತ ಕೋವಿಡ್ ರೋಗ ತೀವ್ರವಾಗಿ ಕಾಡುತ್ತಿದ್ದು, ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಿ, ಔಷಧಿ ಖರೀದಿಸುವ ಸಂದರ್ಭಗಳಲ್ಲಿ ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು. ಕೋವಿಡ್ ಮುಕ್ತ ಭಾರತಕ್ಕೆ ಎಲ್ಲ ಇಲಾಖೆಗಳೊಂದಿಗೆ ಕೈಜೋಡಿಸಬೇಕು ಎಂದರು.
ಶಾಸಕ ಅರುಣಕುಮಾರ ಪೂಜಾರಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಉತ್ತಮ ಔಷಧ ಒದಗಿಸುವ ಮಹತ್ವದ ಯೋಜನೆ ಇದಾಗಿದೆ. ಡಯಾಬಿಟಿಸ್, ರಕ್ತದೊತ್ತಡ, ಕ್ಯಾನ್ಸರ್, ಗ್ಯಾಸ್ಟ್ರಿಕ್, ವಿಟಮಿನ್, ಅಂಟಿಬಯೋಟಿಕ್ ಸೇರಿದಂತೆ ವಿವಿಧ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಮೂಲಕ ರೋಗಮುಕ್ತರಾಗುವ ಮಹತ್ತರ ಉದ್ದೇಶ ಇಟ್ಟುಕೊಂಡು ಪ್ರಧಾನಿ ಮೋದಿಯವರು ಇಂತಹ ಕೇಂದ್ರಗಳನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ಸುಮಾರು 6 ಸಾವಿರ ಜನೌಷ ಧ ಕೇಂದ್ರ ತೆರೆಯಲಾಗಿದ್ದು ಹೆಮ್ಮೆಯ ವಿಷಯ ಎಂದರು.
ಈ ವೇಳೆ ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ಪೀರಸಾಬ ಹಾನಗಲ್, ನಿರಂಜನ ದತ್ತೂರಿ, ಬೀರೇಶ ಪೂಜಾರ, ಪೂಜಾರ, ನವೀನ ದಾಮೋದರ, ಕುಮಾರ ಚಿಗರಿ, ಅಜಯ ಬಂಡಿವಡ್ಡರ, ಹನುಮಂತ ಅಗಸಿಬಾಗಿಲದ, ಧನರಾಜ ಹಾವೇರಿ, ಬಸವರಾಜ ನಾಯಕರ, ಕಿರಣ ದತ್ತೂರಿ, ಬಸವರಾಜ ಹುಲ್ಲತ್ತಿ, ಚಿದಾನಂದ ಬಡಿಗೇರ, ಸಿದ್ಧರಾಜ ಸಾಲಗೇರಿ, ವೀರೇಶ, ಚಂದ್ರು ಬಿಲ್ಲಾಳ, ಮಂಜುನಾಥ, ಲೋಕೇಶ ಪೂಜಾರ, ಸಿದ್ಧು ಕೂನಬೇವು ಇದ್ದರು.