Advertisement
ನಗರದ ಹೃದಯಭಾಗ ಕಿತ್ತೂರು ಚನ್ನಮ್ಮ ವೃತ್ತ (ಟ್ರಾಫಿಕ್ ಐಲ್ಯಾಂಡ್) ಬಳಿಯ ಸೂಪರ್ ಮಾರ್ಕೆಟ್ (ಜನತಾ ಬಜಾರ್) ಇನ್ಮುಂದೆ ಅತ್ಯಾಧುನಿಕ ಮಾರುಕಟ್ಟೆಯಾಗಿ ಅಭಿವೃದ್ಧಿ ಹೊಂದಿ ಕಂಗೊಳಿಸಲಿದೆ. ಜನತಾ ಬಜಾರ್ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿದ್ದು, ಈಗಾಗಲೇ ಈ ಮಾರುಕಟ್ಟೆಯಲ್ಲಿದ್ದ ಕಟ್ಟೆ, ಶೆಡ್, ಬೀದಿಬದಿ ಹಾಗೂ ಮಳಿಗೆ ವ್ಯಾಪಾರಿಗಳು ಪರ್ಯಾಯ ಸ್ಥಳಗಳಿಗೆ ತೆರಳಿದ್ದಾರೆ. ಸದಾ ಜನರಿಂದ ಗಿಜಿಗುಡುತ್ತಿದ್ದ, ಜನರೊಂದಿಗೆ ಹಾಸುಹೊಕ್ಕಾಗಿದ್ದ ಜನತಾ ಬಜಾರ್ ಶಾಂತವಾಗಿದೆ.
Related Articles
Advertisement
ಮಾರುಕಟ್ಟೆ ಅಭಿವೃದ್ಧಿಗೆಮುಂದಾಗಿದ್ದ ಮಣಿವಣ್ಣನ್ : ಜನತಾ ಬಜಾರ್ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರಾಗಿದ್ದ ಪಿ. ಮಣಿವಣ್ಣನ್ ಅವರು ಸ್ಥೂಲವಾದ ನಕ್ಷೆ ತಯಾರಿಸಿ ಯೋಜನೆ ಸಿದ್ಧಪಡಿಸಿದ್ದರು. ಜನತಾ ಬಜಾರ್ ಮಧ್ಯದ ಶೆಡ್‌ಗಳನ್ನು ತೆರವುಗೊಳಿಸಿ ಸುತ್ತಲೂ ಶಾಶ್ವತ ಸ್ಟಾಲ್‌ಗಳನ್ನು ನಿರ್ಮಿಸಿ ಸುಂದರ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿದ್ದರು. ವ್ಯಾಪಾರಿಗಳೊಂದಿಗೂ ಚರ್ಚಿಸಿದ್ದರು. ಆದರೆ ಅದು ಕಾರ್ಯಗತವಾಗಲಿಲ್ಲ. ನಂತರ ಈಬಗ್ಗೆ ಆಗಾಗ ಅಭಿವೃದ್ಧಿ ಪರ ಚಿಂತನೆಗಳು ನಡೆದವಾದರೂ ಯಾವುದೂ ಕೈಗೂಡಿರಲಿಲ್ಲ.
ನೂತನ ಯೋಜನೆ ಏನು? : ಸೂಪರ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು 18.35 ಕೋಟಿ ರೂ. ವೆಚ್ಚದಲ್ಲಿ ಜಿ+3, ಬಿ ಮಾದರಿಯ ಅತ್ಯಾಧುನಿಕ ಮಾರುಕಟ್ಟೆನಿರ್ಮಿಸುವ ಯೋಜನೆ ಸಿದ್ಧಗೊಂಡಿದೆ. 7432 ಚದರ್ ಮೀಟರ್ ವಿಸ್ತೀರ್ಣದಲ್ಲಿ ಸಂಕೀರ್ಣ ನಿರ್ಮಾಣವಾಗಲಿದೆ. ಇದರಲ್ಲಿ 3380 ಚದರ್ ಮೀಟರ್ ಕಟ್ಟಡ ಪ್ರದೇಶವಾಗಿದೆ. 18 ಕಟ್ಟೆಗಳು, 72 ಮಳಿಗೆಗಳು ನಿರ್ಮಾಣವಾಗುತ್ತಿವೆ. ನೆಲಮಹಡಿ ವಾಹನಗಳ ನಿಲುಗಡೆ, ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಕಾಯಿಪಲ್ಲೆ, ಹಣ್ಣು-ಹಂಪಲ, ಕಿರಾಣಿ, ಅಡಿಕೆ ಅಂಗಡಿಗಳಿಗೆ ವ್ಯವಸ್ಥೆ ಆಗಲಿದೆ. ಮೆ| ಎಸ್ ಕೆಎಸ್ ಕಾರ್ಕಳ ಇನ್‌ಫ್ರಾ ಪ್ರೊಜೆಕ್ಟ್ ಕಂಪನಿ ಗುತ್ತಿಗೆ ಪಡೆದಿದ್ದು, 18 ತಿಂಗಳ ಕಾಮಗಾರಿ ಅವಧಿಯಾಗಿದೆ.
ಸ್ಮಾರ್ಟ್ ಸಿಟಿ ಅಡಿ ಅಭಿವೃದ್ಧಿ ಸಂತಸ ತಂದಿದೆ. ಎಲ್ಲ 177 ವ್ಯಾಪಾರಿಗಳು ಅಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ. ವ್ಯಾಪಾರಿಗಳ ಸಂಖ್ಯೆಗಿಂತ ಮಳಿಗೆಗಳು ಕಡಿಮೆಯಾಗಿವೆ. ಬಾಸೆಲ್ ಮಿಷನ್ ಹಿಂಭಾಗದ ಹಳೆಯ 9ನೇ ವಲಯ ಕಚೇರಿ ಖುಲ್ಲಾ ಜಾಗದಲ್ಲಿ 30 ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥೆಮಾಡಿಕೊಂಡುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪ್ರೇಮನಾಥ ಚಿಕ್ಕತುಂಬಳ, ಗೌರವಾಧ್ಯಕ್ಷ, ಸೂಪರ್ ಮಾರ್ಕೆಟ್ ಚಿಕ್ಕವರ್ತಕರ ಸಂಘ
ಸ್ಮಾರ್ಟ್ ಸಿಟಿ ಯೋಜನೆಯಡಿ ವ್ಯಾಪಾರಿಗಳಿಗೆ ನಿರ್ಮಿಸಿದ ಪರ್ಯಾಯ ಸ್ಥಳಕ್ಕೆ ಬಹುತೇಕರೆಲ್ಲ ಸ್ಥಳಾಂತರಗೊಂಡಿದ್ದಾರೆ. ಈಗಾಗಲೇ ಕಟ್ಟೆಸ್ಥಳವನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. 3ನೇ ಬ್ಲಾಕ್ ಕಟ್ಟಡದಲ್ಲಿನ ವ್ಯಾಪಾರಿಗಳುಸ್ವಯಂ ಆಗಿ ತೆರವುಗೊಳಿಸಿಕೊಳ್ಳುತ್ತಿದ್ದಾರೆ.ರವಿವಾರ ಇಲ್ಲವೆ ಸೋಮವಾರ ಈ ಬ್ಲಾಕ್ ಕಟ್ಟಡ ತೆರವುಗೊಳಿಸಲಾಗುವುದು. –ಎಸ್.ಎಚ್. ನರೇಗಲ್, ಹು-ಧಾ ಸ್ಮಾರ್ಟ್‌ಸಿಟಿ ವಿಶೇಷ ಅಧಿಕಾರಿ
ಜನತಾ ಬಜಾರ ಪ್ರದೇಶ ಮೊದಲು ಕೆರೆಯಾಗಿತ್ತು. ಜನವಸತಿ ಹೆಚ್ಚಾದಂತೆ ಅದು ಖಾಸಗಿ ಬಸ್ ಹಾಗೂ ಸರಕಾರಿ ನಿಲ್ದಾಣವಾಗಿತ್ತು. ತದನಂತರ ಜನತಾ ಬಜಾರ್ ಆಗಿ ನಿರ್ಮಾಣವಾಯಿತು.ಈಗ ಸ್ಮಾರ್ಟ್ ಸಿಟಿ ಯೋಜನೆಯಡಿನಿರ್ಮಿಸುತ್ತಿರುವ ಕಟ್ಟಡ ಸಮರ್ಪಕವಾಗಿ ಸದ್ಬಳಕೆಯಾದಾಗ ಮಾತ್ರ ಅದು ಸಾರ್ಥಕವಾಗುತ್ತದೆ. –ಪಾಂಡುರಂಗ ಪಾಟೀಲ, ಪಾಲಿಕೆ ಮಾಜಿ ಸದಸ್ಯ
–ಶಿವಶಂಕರ ಕಂಠಿ