Advertisement

ಜನತಾ ಕರ್ಫ್ಯೂ: ಕಾಸರಗೋಡು ಜಿಲ್ಲೆ ಸಂಪೂರ್ಣ ಸ್ತಬ್ಧ

10:02 AM Mar 28, 2020 | Sriram |

ಕಾಸರಗೋಡು : ವಿಶ್ವಾದ್ಯಂತ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೋವಿಡ್‌ 19 ವೈರಸ್‌ ನಿಯಂತ್ರಿಸುವ ಸಂಕಲ್ಪದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ “ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ರವಿವಾರ ಕಾಸರಗೋಡು ಜಿಲ್ಲೆ ಸಂಪೂರ್ಣ ಸ್ತಬ್ದವಾಗಿದೆ.

Advertisement

ವೈರಸ್‌ ಬಡಿದೋಡಿಸುವ ಮಹತ್ವದ ಸಂಕಲ್ಪಕ್ಕೆ ಜಿಲ್ಲೆಯಲ್ಲಿ ಈ ಹಿಂದೆ ಎಂದೂ ಇಲ್ಲದ ಸ್ಪಂದನ ಲಭಿಸಿದೆ. ಇಲ್ಲಿನ ಜನತೆ ಸ್ವಯಂಪ್ರೇರಿತರಾಗಿ ಮನೆ ಯಿಂದ ಹೊರಗಿಳಿಯದೆ ಮನೆಯಲ್ಲಿ ಉಳಿದು ಕೊಂಡು ಕೋವಿಡ್‌ 19 ವೈರಸ್‌ ಹರಡ ದಂತೆ ನೋಡಿ ಕೊಳ್ಳುವ ಜವಾಬ್ದಾರಿ ನಮಗೂ ಇದೆ ಎಂದು ಈ ಮೂಲಕ ತಮ್ಮ ಕರ್ತವ್ಯ ಪಾಲಿಸಿದರು.

ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಅಂದರೆ 14 ಗಂಟೆಗಳ ಜನತಾ ಕರ್ಫ್ಯೂ ಕರೆ ನೀಡಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ಮಾ.21 ರಂದು ಸಂಜೆ 5 ಗಂಟೆಯಿಂದಲೇ ಕರ್ಫ್ಯೂ ಪ್ರತೀತಿ ಗೋಚರಿಸಿತು. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆಗಳು ಸಂಪೂರ್ಣ ವಾಗಿ ಸ್ಥಗಿತಗೊಂಡವು.

ಕಾಸರಗೋಡು ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗ‌ಳನ್ನು ತೆರೆಯದೆ ವ್ಯಾಪಾರಿಗಳು ಜನತಾ ಕರ್ಫ್ಯೂಗೆ ಸಂಪೂರ್ಣ ಸಹಕರಿಸಿದರು. ರಾಜ್ಯ ರಸ್ತೆ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು, ಕಾರು, ಆಟೋ ರಿಕ್ಷಾ ಮೊದಲಾದ ಯಾವುದೇ ವಾಹನಗಳು ರಸ್ತೆಗಿಳಿ ಯಲಿಲ್ಲ. ಖಾಸಗಿ ವಾಹನಗಳೂ ರಸ್ತೆಗಿಳಿಯದೆ ತಮ್ಮ ಜವಾಬ್ದಾರಿಯನ್ನು ನೆರವೇರಿಸಿದವು. ರೈಲು ಗಾಡಿಗಳಲ್ಲೂ ಪ್ರಯಾಣಿಕರ ಸಂಖ್ಯೆ ಬಹಳಷ್ಟು ವಿರಳವಾಗಿತ್ತು. ಹಲವು ರೈಲು ಗಾಡಿಗಳು ಈ ಮೊದಲೇ ಸರ್ವಿಸ್‌ ಮೊಟಕುಗೊಳಿಸಿದ್ದವು.

ಕಾಸರಗೋಡು ಮಾರುಕಟ್ಟೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ ಮೊದಲಾದೆಡೆ ಜನರ ಸಂಚಾರವೇ ಇರಲಿಲ್ಲ. ಸದಾ ಬ್ಯುಸಿ ಆಗಿರುತ್ತಿದ್ದ ಇಲ್ಲೆಲ್ಲ ಜನರಿಲ್ಲದೆ ಬಿಕೋ ಎನ್ನುತಿತ್ತು. ಪೊಲೀಸರು ಎಲ್ಲೆಡೆ ತಮ್ಮ ಕರ್ತವ್ಯ ಪಾಲಿಸುತ್ತಿದ್ದುದರಿಂದ ಖಾಸಗಿ ವಾಹನಗಳೂ ರಸ್ತೆಗಿಳಿಯಲಿಲ್ಲ. ಆರಾಧನಾ ಲಯಗಳನ್ನು ಮುಚ್ಚಿರುವುದರಿಂದ ಅಲ್ಲೂ ಜನರಿರಲಿಲ್ಲ. ಹೊಟೇಲ್‌, ಶಾಪಿಂಗ್‌ ಮಾಲ್‌, ಥಿಯೇ ಟರ್‌ ಬಾಗಿಲು ತೆರೆಯಲಿಲ್ಲ.

Advertisement

ಪೆಟ್ರೋಲ್‌ ಬಂಕ್‌ಗಳು ಮುಚ್ಚಿದ್ದವು. ಬೇಕರಿ, ಜ್ಯೂಸ್‌ ಅಂಗಡಿ, ಟೀ ಅಂಗಡಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಆಭರಣ ಅಂಗಡಿಗಳು, ಕ್ಯಾಂಟೀನ್‌ಗಳು ತೆರೆಯಲಿಲ್ಲ.

ಕಾಸರಗೋಡು ಜಿಲ್ಲೆಯ ನಗರ, ಪೇಟೆ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಜನತಾ ಕರ್ಫ್ಯೂ ಪರವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶದ ಜನರೂ ಮನೆಗಳಿಂದ ಹೊರಗೆ ಬಂದಿಲ್ಲ. ಪೇಟೆ, ಪಟ್ಟಣಗಳಲ್ಲೂ ಅಂಗಡಿ, ಮುಂಗಟ್ಟುಗಳನ್ನು ತೆರೆಯಲಿಲ್ಲ. ಜಿಲ್ಲೆಯ ಬಹುತೇಕ ರಸ್ತೆಗಳೆಲ್ಲ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್‌ 19 ವೈರಸ್‌ ಸೋಂಕಿತರೆಲ್ಲರೂ ಕೊಲ್ಲಿ ದೇಶಗಳಿಂದ ಬಂದವರಾಗಿದ್ದಾರೆ. ಇವರನ್ನು ಆಸ್ಪತ್ರೆಗಳ ಐಸೋಲೇಷನ್‌ ವಾರ್ಡ್‌ಗಳಲ್ಲಿ ದಾಖಲಿಸಲಾಗಿದೆ. ವೈರಸ್‌ ಸೋಂಕಿತರ ರೂಟ್‌ ಮ್ಯಾಪ್‌ ರಚಿಸಲಾಗುತ್ತಿದೆ. ಈಗಾಗಲೇ ಮೂವರ ರೂಟ್‌ ಮ್ಯಾಪ್‌ ರಚಿಸಲಾಗಿದೆ. ಈ ವ್ಯಕ್ತಿಗಳು ಸಂಪರ್ಕಿಸಿದ ಜನರನ್ನು ನಿಗಾದಲ್ಲಿರಿಸಲಾಗಿದೆ.

ದೇಶಕ್ಕೇ ದೇಶವೇ ಎದುರಿಸುತ್ತಿರುವ ಸಂಕಷ್ಟಮಯ ಸನ್ನಿವೇಷವನ್ನು ನಿಭಾಯಿಸುವ ನಿಟ್ಟಿನಲ್ಲಿ ಸರಕಾರದೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕಾದುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಜನರು ಸಂಪೂರ್ಣ ಸಹಕರಿಸಿದರು.

ಸ್ವಯಂಪ್ರೇರಿತ ಸಹಕಾರ
ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಕಾಸರಗೋಡು ಜಿಲ್ಲೆಯ ಜನರು ಸ್ವಯಂ ಪ್ರೇರಿತರಾಗಿ ಸಂಪೂರ್ಣ ಸಹಕಾರ ನೀಡಿದರು. ತುರ್ತು ಅಗತ್ಯ ಹೊರತುಪಡಿಸಿ ಇಡೀ ದಿನ ಮನೆಗಳಿಂದ ಯಾರೂ ಹೊರಗೆ ಬಂದಿಲ್ಲ. ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗದೆ, ರವಿವಾರದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿದರು. ಮನೆಯಲ್ಲೇ ಕುಳಿತು ಟಿ.ವಿ. ವೀಕ್ಷಣೆ, ಪತ್ರಿಕೆ, ಪುಸ್ತಕ ಓದುವುದರಲ್ಲೇ ದಿನವನ್ನು ಕಳೆದರು. ಕೆಲವರಂತೂ ಮನೆಯಲ್ಲಿ ಧ್ಯಾನದಲ್ಲಿ ದೇವರನ್ನು ಪ್ರಾರ್ಥಿಸಿದರು. ರಸ್ತೆಯಲ್ಲಿ ಸುಮ್ಮನೆ ಓಡಾಡುವುದು, ವಾಹನಗಳಲ್ಲಿ ತಿರುಗಾಡುವುದು, ಗುಂಪು ಸೇರುವುದು ಎಲ್ಲೂ ಕಾಣಿಸಿಲ್ಲ. ಹತ್ತಿರದ ಮನೆಗಳಿಗೂ ಜನರು ಹೋಗಿಲ್ಲ. ದಿನಾ ಹೊಟೇಲ್‌ಗ‌ಳಲ್ಲಿ ಆಹಾರ ಸೇವಿಸುವವರೂ, ರವಿವಾರ ಅವರವರ ಮನೆಗಳಲ್ಲೇ ಆಹಾರಗಳನ್ನು ತಯಾರಿಸಿದರು.

ಜಿಲ್ಲೆಯಾದ್ಯಂತ ಪೊಲೀಸರು ತೀವ್ರ ನಿಗಾ ಇರಿಸಿದ್ದರು. ರಸ್ತೆಯಲ್ಲಿ ಕಂಡ ವಾಹನಗಳನ್ನು ತಪಾಸಣೆ ಮಾಡಿಯೇ ಬಿಡುತ್ತಿದ್ದರು. ಸರಕು ವಾಹನಗಳ ಚಾಲಕರಿಗೆ ವಾಹನಗಳನ್ನು ನಿಲ್ಲಿಸಿ ಜಾಗರೂಕತೆಯನ್ನು ಪಾಲಿಸಲು ಮನವಿ ಮಾಡಿಕೊಂಡರು. ದ್ವಿಚಕ್ರ ಮತ್ತು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರಿಗೆ ಪೊಲೀಸರು ಕೋವಿಡ್‌ 19 ವೈರಸ್‌ ಬಗೆಗಿನ ಮಾಹಿತಿ ನೀಡಿ ಮನೆಗಳಿಗೆ ಕಳುಹಿಸಿಕೊಟ್ಟರು.

3ನೇ ಹಂತ ತಲುಪಿದರೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಕಷ್ಟ
ದೇಶದಲ್ಲಿ ಸದ್ಯ ಎರಡನೇ ಹಂತದಲ್ಲಿರುವ ಕೋವಿಡ್‌ 19 ವೈರಸ್‌ ಮೂರನೇ ಹಂತ ತಲುಪಿದರೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಕಷ್ಟ ಎಂಬ ನೆಲೆಯಲ್ಲಿ ಜನತಾ ಕರ್ಫ್ಯೂಗೆ ಕರೆ ನೀಡಲಾಗಿತ್ತು. ಕಾಸರಗೋಡು ಜಿಲ್ಲೆಯಲ್ಲಂತೂ ಕೋವಿಡ್‌ 19 ಭಯಾಂತಕವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 14 ಮಂದಿಗೆ ಕೋವಿಡ್‌ 19 ದೃಢೀಕರಿಸಿರುವುದರಿಂದ ಸಹಜವಾಗಿಯೇ ಜನರು ಭಯಭೀತರಾಗಿದ್ದಾರೆ. ಈ ಕಾರಣದಿಂದ ಜನರು ಜನತಾ ಕರ್ಫ್ಯೂಗೆ ಸಂಪೂರ್ಣ ಸಹಕಾರ ನೀಡಿದ್ದು, ಯಶಸ್ವಿಯಾಗಿದೆ. ಮೊದಲೇ ಕಾಸರಗೋಡು ಜಿಲ್ಲೆಯಲ್ಲಿ ಭಯದ ವಾತಾವರಣವಿದೆ. 694 ಮಂದಿ ನಿಗಾದಲ್ಲಿದ್ದು ಸೋಂಕು ಹಬ್ಬದಂತೆ ಅತ್ಯಂತ ಜಾಗರೂಕತೆ ಅಗತ್ಯ ಎಂಬುದು ಜನರಿಗೆ ಮನವರಿಕೆಯಾಗಿದೆ. ಈ ಮಹಾಮಾರಿಯನ್ನು ತೊಲಗಿಸಲು ಅತ್ಯಂತ ಜಾಗರೂಕತೆಯಿಂದ ಇರಬೇಕೆಂಬ ಬಗ್ಗೆ ಜಿಲ್ಲಾಡಳಿತ ಮಾಹಿತಿಗಳನ್ನು ನೀಡುತ್ತಲೇ ಎಚ್ಚರಿಸುತ್ತಿದ್ದುದರಿಂದ ಜನತಾ ಕರ್ಫ್ಯೂಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.

ಮಾ. 31 ರ ವರೆಗೆ ರೈಲು ಯಾನ ಇಲ್ಲ
ಕಾಸರಗೋಡು: ಕೋವಿಡ್‌ 19 ವೈರಸ್‌ ಸೋಂಕು ಹಿನ್ನೆಲೆಯಲ್ಲಿ ಮಾ. 31ರ ವರೆಗೆ ರೈಲು ಗಾಡಿಗಳ ಸೇವೆ ನಿಲುಗಡೆಗೊಳಿಸಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಲಾಗಿದೆ.

ರೈಲ್ವೇ ಬೋರ್ಡ್‌ ಚೆಯರ್‌ಮನ್‌ ವಿ.ಕೆ. ಯಾದವ್‌ ವಲಯ ಜನರಲ್‌ ಮ್ಯಾನೇಜರ್‌ಗಳ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಸರ್ವಿಸ್‌ ನಿಲುಗಡೆಗೊಳಿಸಲು ತೀರ್ಮಾನಿಸಲಾಯಿತು.

ಪ್ರಸ್ತುತ ರೈಲು ಸಾರಿಗೆ ನಿಯಂತ್ರಣ ರವಿವಾರ ರಾತ್ರಿ 10 ಗಂಟೆಗೆ ಮುಗಿದಿರುವುದರಿಂದ ಮಾ. 31ರ ರಾತ್ರಿ ವರೆಗೆ ರೈಲು ಸೇವೆಯನ್ನು ಪೂರ್ಣವಾಗಿ ನಿಲುಗಡೆಗೊಳಿಸಲಾಗುವುದು. ರವಿವಾರ ರಾತ್ರಿ 12ರಿಂದ ರೈಲು ಸರ್ವೀಸ್‌ ನಿಲುಗಡೆಗೆ ತೀರ್ಮಾನಿಸಲಾಗಿದೆ. ಪ್ರಸ್ತುತ ಓಡುತ್ತಿರುವ ರೈಲುಗಾಡಿಗಳು ನಿಗದಿತ ಸ್ಥಳಕ್ಕೆ ತಲುಪಿದ ಬಳಿಕ ಸರ್ವಿಸ್‌ ಕೊನೆಗೊಳ್ಳಲಿದೆ. ರೈಲು ಪ್ರಯಾಣದ ಮೂಲಕ ಕೋವಿಡ್‌ 19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next