ಚಿತ್ರದುರ್ಗ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿರುವ ಜನತಾ ಕರ್ಫ್ಯೂಗೆ ಕೋಟೆನಾಡು ಚಿತ್ರದುರ್ಗದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಬೆಳಗಿನಿಂದ ಸಂಚರಿಸಬೇಕಾಗಿದ್ದ ರೈಲು, ಬಸ್ಸು ಎಲ್ಲವೂ ಬಂದ್ ಆಗಿವೆ. ಈವರೆಗೆ ಯಾವುದೇ ಕೆಎಸಾರ್ಟಿಸಿ, ಖಾಸಗಿ ಬಸ್ಸುಗಳು ಸಂಚರಿಸಿಲ್ಲ. ಬರಬೇಕಾಗಿದ್ದ ರೈಲುಗಳು ಬಂದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕರೆ ನೀಡಿರುವ ಬಂದ್ ಉದ್ದೇಶವನ್ನು ಅರ್ಥ ಮಾಡಿಕೊಂಡ ಜನತೆ ಮನೆಯಿಂದ ಹೊರ ಬರುತ್ತಿಲ್ಲ. ಇಡೀ ದಿನ ಮನೆಯಲ್ಲಿಯೇ ಇರಲು ತೀರ್ಮಾನಿಸಿರುವುದು ಸ್ಪಷ್ಟವಾಗಿದೆ.
ಆಗಾಗ ಕೆಲ ಆಟೊಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ. ಹಾಲು, ಪತ್ರಿಕೆ, ಹೂ ಖರೀದಿಗೆ ಮನೆಯಿಂದ ಹೊರಗೆ ಬಂದಿದ್ದ ಜನತೆ 7 ಗಂಟೆ ಹೊತ್ತಿಗೆ ಮನೆ ಸೇರಿಕೊಂಡಿದ್ದಾರೆ.
ಸದಾ ಗ್ರಾಹಕರು ಮತ್ತು ವ್ಯಾಪಾರಿಗಳಿಂದ ತುಂಬಿರುತ್ತಿದ್ದ ತರಕಾರಿ ಮಾರುಕಟ್ಟೆ ಜನರಿಲ್ಲದೇ ಬಿಕೋ ಎನ್ನುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಅಪರೂಪವಾಗಿದೆ.
ಹೋಟೆಲ್, ಟೀ ಅಂಗಡಿ ಯಾವುದೂ ತೆರೆಯದ ಕಾರಣ ಕೆಲವರು ಬೆಳಗ್ಗೆ ಪರದಾಡಿದರು.