ಬೆಂಗಳೂರು: ಗಾಂಧಿ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಪಾರಂಪರಿಕ ಜನತಾ ಬಜಾರ್ ಕಟ್ಟಡ ಕೆಡವಿ, ಎಂಟು ಮಹಡಿಯ ವಾಣಿಜ್ಯ ಸಂಕೀರ್ಣ ನಿರ್ಮಿಸುವ ವಿಚಾರ ಈಗ ಹೈಕೋರ್ಟ್ ಮೆಟ್ಟಿಲೇರಿದೆ.
ಜನತಾ ಬಜಾರ್, ನಗರದ ಅತ್ಯಂತ ಹಳೆಯ ಕಟ್ಟಡವಾಗಿದ್ದು, ಅದನ್ನು ನೆಲಸಮ ಮಾಡದಂತೆ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲು ಕೋರಿ ಭಾರತೀಯ ಕಲೆ, ಸಾಂಸ್ಕೃತಿಕ, ಹಾಗೂ ಪಾರಂಪರಿಕ ಟ್ರಸ್ಟ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರ ಪರ ವಕೀಲರ ವಾದ ಆಲಿಸಿ, ಈ ಕುರಿತು ಸರ್ಕಾರದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ, ಲೋಕೋಪಯೊಗಿ ಇಲಾಖೆ, ಬಿಬಿಎಂಪಿ, ಬಿಡಿಎ ಸೇರಿ ಇತರೆ ಪ್ರತಿವಾದಿಗಳಿಗೆ ನೊಟೀಸ್ ಜಾರಿಗೊಳಿದ್ದು,, ವಿಚಾರಣೆಯನ್ನು ಎರಡು ವಾರ ಮುಂದೂಡಿತು.
1935ರಲ್ಲಿ ಮೈಸೂರು ಸಂಸ್ಥಾನದ ಯುವರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರ್ ಉದ್ಘಾಟಿಸಿದ್ದ ಈ ಕಟ್ಟಡವನ್ನು ಜರ್ಮನಿಯ ಪ್ರಖ್ಯಾತ ವಾಸ್ತುಶಿಲ್ಪಿ ಕೃಂಬಿಗಲ್ ವಿನ್ಯಾಸಗೊಳಿಸಿದ್ದರು. 2017ರಲ್ಲಿ ಬಿಡುಗಡೆಯಾದ “ಬಿಡಿಎ ಮಾಸ್ಟರ್ ಫ್ಲ್ಯಾನ್ 2031’ರಲ್ಲೂ ಜನತಾ ಬಜಾರ್ ಅನ್ನು ಪಾರಂಪರಿಕ ಕಟ್ಟಡ ಎಂದು ಪರಿಗಣಿಸಲಾಗಿದೆ.
ಹೀಗಿದ್ದರೂ, ಕರ್ನಾಟಕ ಪಟ್ಟಣ ಪಂಚಾಯಿತಿ ಕಾಯಿದೆ (ಕೆಟಿಸಿಪಿ)ನಿಯಮಗಳನ್ನು ಉಲ್ಲಂ ಸಿ ಕಟ್ಟಡ ಕೆಡವಲು ಮುಂದಾಗಿರುವ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ. ಹೀಗಾಗಿ ಕಟ್ಟಡ ನೆಲಸಮಕ್ಕೆ ಅನುಮತಿ ನೀಡಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ 2016ರ ಡಿ.27ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಹಾಗೂ ಈ ಅರ್ಜಿ ಇತ್ಯರ್ಥವಾಗುವ ತನಕ ಕಟ್ಟಡ ತೆರವಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ಬಂಧ ವಿಧಿಸಲು ಅರ್ಜಿಯಲ್ಲಿ ಕೋರಲಾಗಿದೆ.