Advertisement

ಜನೌಷಧಿ ಕೇಂದ್ರ ಸ್ಥಗಿತ; ರೋಗಿಗಳ ಪರದಾಟ

11:20 AM Jun 14, 2020 | Suhan S |

ಕುಂದಗೋಳ: ಕೋವಿಡ್‌-19ನಿಂದ ಉದ್ಯೋಗ ದೊರೆಯದೆ ಆರ್ಥಿಕ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಈಗ ಗಾಯದ ಮೇಲೆ ಬರೆ ಎಳೆದಿರುವಾಗಲೇ ಪಟ್ಟಣದಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವು ಮುಚ್ಚಿದ್ದರಿಂದ ಬಡ ರೋಗಿಗಳು ಪರದಾಡುವಂತಾಗಿದೆ.

Advertisement

ಈ ಕೇಂದ್ರವು ಬಡ ರೋಗಿಗಳಿಗೆ ಕಲ್ಪವೃಕ್ಷವಾಗಿತ್ತು. ಮಾರುಕಟ್ಟೆಯಲ್ಲಿರುವ ಔಷಧಿ ಅಂಗಡಿಗಳಲ್ಲಿ ದುಬಾರಿ ಬೆಲೆ ತೆತ್ತು ಔಷಧಿ ಖರೀದಿಸಲಾಗದ ಬಹುತೇಕರು ಈ ಕೇಂದ್ರವನ್ನೇ ಅವಲಂಬಿಸಿದ್ದರು. ಶುಗರ್‌, ಬಿಪಿ ಇರುವ ರೋಗಿಗಳು ನಿತ್ಯ ಔಷಧಿ ಸೇವಿಸಬೇಕಿರುವುದರಿಂದ ಇದೇ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಔಷಧಿ ಖರೀದಿಸುತ್ತಿದ್ದರು. ಇದೀಗ ಕಳೆದ ಮೂರು ದಿನಗಳಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ರಾಜೀನಾಮೆ ನೀಡಿದ್ದರಿಂದ ಈ ಕೇಂದ್ರ ಸ್ಥಗಿತಗೊಂಡಿದೆ. ಜನೌಷಧಿ ಕೇಂದ್ರ ತೆರೆಯದೇ ಇರುವುದರಿಂದ ಬಹುತೇಕ ಜನರು ಹುಬ್ಬಳ್ಳಿ ಮತ್ತಿತರ ಕಡೆಗೆ ಈ ಕೇಂದ್ರಕ್ಕೆ ತೆರಳಿ ಔಷಧಿ ಪಡೆಯಲಾಗದೇ ಪರದಾಡುವಂತಾಗಿದೆ. ಮಾರುಕಟ್ಟೆಯಲ್ಲಿರುವ ಅಂಗಡಿಗಳಿಗೆ ತೆರಳಿ ಹೆಚ್ಚು ಹಣ ನೀಡಿ ಔಷಧ ಖರೀದಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬಸಾಪೂರದ ಶಿವಪ್ಪ ಹರಿಜನ. ಬಡ ರೋಗಿಗಳಿಗೆ ಈ ಜನೌಷಧಿ ಕೇಂದ್ರ ಉಪಯುಕ್ತವಾಗಿದೆ. ಈ ಭಾಗದ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೇಂದ್ರ ತೆರೆಯಲು ಪ್ರಯತ್ನಿಸಬೇಕಿದೆ.

ಇಲ್ಲಿರುವ ಸಿಬ್ಬಂದಿ ರಾಜೀನಾಮೆ ನೀಡಿದ್ದರಿಂದ ಭಾರತೀಯ ಜನೌಷಧಿ ಕೇಂದ್ರವು ಸ್ಥಗಿತವಾಗಿದೆ. ಈ ಕೇಂದ್ರವನ್ನು ಎಂಎಸ್‌ಐಎಲ್‌ನವರು ನಿರ್ವಹಿಸುತ್ತಿದ್ದು ಅವರಿಗೆ ಈಗಾಗಲೇ ಈ ಕುರಿತು ಮಾತನಾಡಿದ್ದೇನೆ. ಸಿಬ್ಬಂದಿಯನ್ನು ನೇಮಿಸುತ್ತೇವೆಂದು ಹೇಳಿದ್ದಾರೆ.  ಡಾ|ಭಾಗೀರಥಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ.

 

ಶೀತಲ್‌ ಎಸ್‌ ಮುರಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next