ಅಮರಾವತಿ: ಆಂಧ್ರಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎದುರಿಸಲಿದ್ದೇವೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥ, ಖ್ಯಾತ ನಟ ಪವನ್ ಕಲ್ಯಾಣ್ ಗುರುವಾರ ಘೋಷಿಸಿದ್ದಾರೆ.
ಬಹುಕೋಟಿ ಕೌಶಲಾಭಿವೃದ್ಧಿ ನಿಗಮದ ಹಗರಣದಲ್ಲಿ ಬಂಧಿತರಾಗಿರುವ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ನಂತರ ಅವರು ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದ ಹೊರಗೆ ಈ ಘೋಷಣೆ ಮಾಡಲಾಗಿದೆ.
ನಾಯ್ಡು ಅವರ ಪುತ್ರ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಹಿಂದೂಪುರ ಶಾಸಕ, ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಮೈತ್ರಿ ಮಾತುಕತೆಯಲ್ಲಿ ಭಾಗಿಯಾಗಿ ಪವನ್ ಕಲ್ಯಾಣ್ ಜತೆಗಿದ್ದರು.
“ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿಯನ್ನು ಸೋಲಿಸಲು ನಾನು ಇಂದು ನಿರ್ಧಾರ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಜನಸೇನಾ ಮತ್ತು ಟಿಡಿಪಿ ಒಟ್ಟಿಗೆ ಹೋಗಲಿವೆ” ಎಂದು ಮೈತ್ರಿ ಕುರಿತಾಗಿನ ಮಾತುಕತೆಯ ಬಳಿಕ ಎನ್ ಡಿಎ ಮಿತ್ರ ಪಕ್ಷವಾಗಿರುವ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಟಿಡಿಪಿ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಮಂಡಿಸಲಾಗಿದೆ ಎಂದು ಜನಸೇನಾ ನಾಯಕ ಪವನ್ ಕಲ್ಯಾಣ್ ಹೇಳಿದ್ದಾರೆ.
ನಾಯ್ಡು ಅವರ ಬಂಧನವನ್ನು ಖಂಡಿಸಿದ ಕಲ್ಯಾಣ್, ”ಸುಮ್ಮನೆ ಇರುವುವುದಿಲ್ಲ” ಎಂದು ಹೇಳಿ ತಮ್ಮ ನಿಲುವನ್ನು ಪ್ರಕಟಿಸಿದರು.