ಬೈಂದೂರು: ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಸಂಸದರ ಜನಸಂಪರ್ಕ ಸಭೆ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆಯಿತು. ವಿಧಾನಪರಿಷತ್ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನಸಂಪರ್ಕ ಸಭೆಯ ಮೂಲಕ ಜನಪ್ರತಿನಿಧಿಗಳಿಗೆ ಜನರ ಅಹವಾಲುಗಳನ್ನು ಹತ್ತಿರದಿಂದ ಕೇಳಲು ಸಾಧ್ಯವಾಗುತ್ತದೆ. ಸರಕಾರದ ಯೋಜನೆಗಳು ಸಮರ್ಪಕ ವಾಗಿ ಜನರಿಗೆ ತಲುಪಬೇಕಾದರೆ ಅಧಿಕಾರಿಗಳ ಸ್ಪಂದನೆ ಮುಖ್ಯ. ಕರಾವಳಿ ಭಾಗದ ಸಮಸ್ಯೆಗಳ ಬಗ್ಗೆ ಸಾಕಷ್ಟು ಅನುಭವ ಇರುವ ಸಂಸದರು ಜನಸ್ಪಂದನೆಯ ಮೂಲಕ ಇನ್ನಷ್ಟು ಸೇವೆ ನೀಡಲು ಅವಕಾಶ ದೊರೆತಂತಾಗಿದೆ ಎಂದರು.
ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ ಹಾಗೂ ಹೆದ್ದಾರಿ ಸಮಸ್ಯೆ ಬಹಳ ಪ್ರಮುಖವಾಗಿದೆ. ಮರಳುಗಾರಿಕೆ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದಾರೆ. ರಾಜ್ಯ ಸರಕಾರ ಸ್ಪಂದಿಸದಿದ್ದರೆ ಧರಣಿ ಸತ್ಯಾಗ್ರಹ ಕೈಗೊಳ್ಳುತ್ತೇನೆ. ಬೈಂದೂರಿನಲ್ಲಿ ಸಂಸದರ ಕಚೇರಿ ಆರಂಭವಾಗುವ ಮೂಲಕ ಜನರಿಗೆ ಇನ್ನಷ್ಟು ಸೇವೆ ದೊರೆಯಲಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರಕಾರದಿಂದ ದೊರೆಯುವ ಯೋಜನೆಗಳಲ್ಲಿ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೇ ಯೋಜನೆಗಳತ್ತ ಗಮನ ನೀಡುವುದರ ಜತೆಗೆ ಮೂಲ ಸೌಕರ್ಯಗಳಿಗೂ ಆದ್ಯತೆ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಪರಿಷತ್ ಸದಸ್ಯ ರುದ್ರೆಗೌಡ, ಕುಂದಾಪುರ ಸಹಾಯಕ ಕಮಿಷನರ್ ಭೂಬಾಲನ್, ಜಿ.ಪಂ. ಸಿಇಒ ಸಿಂಧು, ಜಿ.ಪಂ ಸದಸ್ಯ ಬಾಬು ಶೆಟ್ಟಿ, ಕುಂದಾಪುರ ಡಿ.ವೈ.ಎಸ್.ಪಿ. ದಿನೇಶ್ ಕುಮಾರ್, ಕುಂದಾಪುರ ತಹಶೀಲ್ದಾರ ತಿಪ್ಪೇಸ್ವಾಮಿ, ತಾಲೂಕು ಸ್ಥಾಯೀ ಸಮಿತಿಯ ನಾರಾಯಣ ಗುಜ್ಜಾಡಿ, ತಾ.ಪಂ. ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಉಮೇಶ ಕಲ್ಲಗದ್ದೆ, ಸುಜಾತಾ ದೇವಾಡಿಗ, ಗಿರಿಜಾ ಖಾರ್ವಿ, ಮಾಲಿನಿ ಕೆ. ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ ಸ್ವಾಗತಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್. ಪ್ರಕಾಶ್ ವಂದಿಸಿದರು.