Advertisement

ಇಂದಿರಾಗೆ ಕಾಸು, ರಾಜೀವ್‌ ಜತೆ ಜಗಳ, ಗೌಡರಿಗೆ ಧಮಕಿ!

10:54 AM Jan 30, 2018 | |

…ಅವರು ಹೇಳಬೇಕಾದ ಅನೇಕ ವಿಷಯಗಳು ಇನ್ನು ಬಾಕಿ ಇವೆ. ಪ್ರಣಬ್‌ ಮುಖರ್ಜಿಯವರಂತೆ ಪೂಜಾರಿ ಅವರೂ ಸಂಪುಟಗಳಲ್ಲಿ ಆತ್ಮಚರಿತ್ರೆ ಬರೆಯುವಷ್ಟು ವಿಷಯ ಸಾಮಗ್ರಿ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಅವರು ಮುಂದುವರಿ ಯುತ್ತಾರೆಯೇ ಎಂಬುದು ಕಾಲಕ್ಕೆ ಬಿಟ್ಟ ವಿಷಯ.

Advertisement

ಸರಳ ಮಾತುಗಳಲ್ಲಿ ಭಾಷಣ ಮುಗಿಸುತ್ತಿದ್ದ ಹಿರಿಯ ರಾಜಕಾರಣಿ ಕಾಂಗ್ರೆಸಿನ ಬಿ.ಜನಾರ್ದನ ಪೂಜಾರಿಯವರು ಆಂತರ್ಯದಲ್ಲಿ ಯಾವ ಚಿಂತನೆಯನ್ನು ಹೊಂದಿದ್ದರು ಎಂಬು ದಕ್ಕೆ ದರ್ಪಣದಂತಿದೆ ಅವರ ಆತ್ಮಕಥೆ “ಸಾಲ ಮೇಳದ ಸಂಗ್ರಾಮ’. ದೇಶ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ ದಲ್ಲಿ  ರುವಾಗ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಡುಗಡೆಯಾದ 210 ಪುಟಗಳ ಈ ಹೊತ್ತಗೆ ಜನಾರ್ದನ ಪೂಜಾರಿಯವರ ಜೀವನ ಸಂಗ್ರಾಮದ ದಾಖಲೆ. ಬೊಕ್ಕಪಟ್ನದ ಶಾಲೆಗೆ ಸರಿಯಾದ ಅಂಗಿ ಇಲ್ಲದೆ ಹೋಗುತ್ತಿದ್ದ ದಿನಗಳಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಸಾಧನೆಗಳನ್ನು ತುಲನೆ ಮಾಡುವಲ್ಲಿವರೆಗೆ ಪೂಜಾರಿ ತಮ್ಮ ನೆನಪುಗಳಿಗೆ ಇಲ್ಲಿ ರೂಪಕೊಟ್ಟಿದ್ದಾರೆ. 82 ವರ್ಷ ಪ್ರಾಯದಲ್ಲಿ ಬರೆಯುವಾಗ ಕೆಲವೆಡೆ ನನಗೆ ನೆನಪು ಕೈಕೊಟ್ಟಿದೆ, ಅದನ್ನು ಮತ್ತೆ ಮತ್ತೆ ನನ್ನ ಆಪ್ತ ಮಿತ್ರರ ಜತೆ ಮಾತಾಡಿ, ನೆನಪು ಮಾಡಿಕೊಂಡು ಬರೆದಿದ್ದೇನೆ ಎಂದವರು ಮೌಖೀಕವಾಗಿ ಹೇಳಿರುವರಾದರೂ ಕೃತಿ ಓದಿದವರಿಗೆ ಮತ್ತು ಅವರ ಬದುಕನ್ನು ಬಲ್ಲವರಿಗೆ ಅನೇಕ ವಿಷಯಗಳ ಗೈರು ಹಾಜರಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಸಮಕಾಲೀನ ರಾಜಕಾರಣದ ಬಗ್ಗೆ ಅವರು ಅಧಿಕೃತವಾಗಿ ಬರೆಯಬಲ್ಲವ ರಾಗಿದ್ದರೂ ಸಹ ಇಲ್ಲಿ ಮೌನವೇ ಉಳಿದಿದೆ…

ರಾಜಕೀಯಕ್ಕೆ ಪ್ರವೇಶಿಸುವ ಆಕಾಂಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ ಅವಕಾಶ ಬಂದಾಗ ಸರಿಯಾದ ಸಮಯದಲ್ಲಿ ಸರಿ ಯಾದ ನಿರ್ಧಾರ ಕೈಗೊಂಡರು. ಅದು ಅವರನ್ನು ಕೇಂದ್ರದಲ್ಲಿ ಹಣಕಾಸು ಇಲಾಖೆಗೆ ಕೊಂಡೊಯ್ದಿತು. ಅಧ್ಯಾಯ 1 ರಲ್ಲಿ ಅವರು ತಾವು ಇಂದಿರಾ ಗಾಂಧಿಯವರ ಜತೆ ನೇರ ದೂರ ವಾಣಿಯಲ್ಲಿ ಮಾತನಾಡಿದ ಸಂದರ್ಭವನ್ನು ನೆನಪಿಸಿಕೊಂಡಿ ದ್ದಾರೆ. ಇಡೀ ಕೃತಿಯಲ್ಲಿ ಬಡತನದ ವಿಚಾರ ಬಂದಾಗ ಅವರು ತಮ್ಮ ಬಾಲ್ಯದ ದಿನಗಳನ್ನು ಕನಿಷ್ಟ ನಾಲ್ಕು ಕಡೆ ಪುನರುಕ್ತಿ ಮಾಡಿರುವುದು ಅವರನ್ನು ಬಡತನ ಮತ್ತು ಅಸ್ಪೃಶ್ಯತೆ ಯಾವ ರೀತಿ ಕಾಡುತ್ತಲೇ ಬಂತು ಎಂಬುದಕ್ಕೆ ಒಂದು ಒಳನೋಟವನ್ನು ಒದಗಿಸುತ್ತದೆ. “ಹರಿದ ಚಡ್ಡಿಯಲ್ಲಿ ಶಾಲೆ ಕಲಿತವನು ಲೋಕಸಭೆ ಮೇಟ್ಟಲೇರಿದಾಗ’ ಎಂದು ದಾಖಲಿಸುವಲ್ಲಿ ಅವರಲ್ಲೊಂದು ಆತ್ಮವಿಶ್ವಾಸದ ದನಿ ಇದೆ. ಹಟ ಹಿಡಿದರೆ ಸಾಧಿಸಬಹುದು ಎಂಬ ಸಂದೇಶವೂ ಇದೆ.

ಎರಡನೇ ಅಧ್ಯಾಯದಲ್ಲಿ ತಮ್ಮ ತಂದೆಯ ಬಗ್ಗೆ ಪೂಜಾರಿ ಯವರು ಬಹಳ ಆಪ್ತವಾಗಿ ಹೇಳಿಕೊಂಡಿದ್ದಾರೆ. ತನ್ನ ತಂದೆ ಓದಿದ್ದು “ಅರ್ಧ ಕ್ಲಾಸು’, ಆದರೆ ಅವರಿಗೆ ಹೈಕೋರ್ಟ್‌ ತೀರ್ಪನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ಪಾಂಡಿತ್ಯವಿತ್ತು. ಮದ್ರಾಸ್‌ ಹೈಕೋರ್ಟಿನ ತೀರ್ಪಿನ ಇಂತಹ ಪುಟದಲ್ಲಿ ಇಂತಹ ಅಡ್ಡಗೆರೆಯಲ್ಲಿರುವ ವಾಕ್ಯವನ್ನು ಓದಿ ಹೇಳು ಎಂದು ಮಗ ಜನಾರ್ದನ ಪೂಜಾರಿಯವರಿಗೆ ಹೇಳುತ್ತಿದ್ದ ದೃಶ್ಯ ಚಿತ್ರಣದಲ್ಲಿ ಅವರ ತಂದೆಯ ಬುದ್ಧಿವಂತಿಕೆ ಜತೆ ಮಗನ ಮುಂದಿನ ದಾರಿಯ ನಕಾಶೆಯೂ ಸಿದ್ಧಗೊಂಡಂತಿದೆ. ಯಕ್ಷಗಾನದವರೂ ಪ್ರಸಂಗದ ಬಗ್ಗೆ ಅವರಲ್ಲಿ ಅಭಿಪ್ರಾಯ ಕೇಳುತ್ತಿದ್ದರು ಎಂಬ ಮಾತಿದೆ. ಪಾಣೆಮಂಗಳೂರಿನಲ್ಲಿ ಹೊಟೇಲು ಪ್ರವೇಶಿಸದಂತೆ ತಡೆದ, ತೆಂಗಿನ ಗೆರಟೆಯಲ್ಲಿ ಚಹಾ ಕೊಟ್ಟ ಮತ್ತು ಅದನ್ನು ತಿರಸ್ಕರಿಸಿದ ಚಿತ್ರಣವಿದೆ. ಇದು ಆ ಕಾಲದಲ್ಲಿ ಬಿಲ್ಲವ ಸಮುದಾಯ ಎದುರಿಸುತ್ತಿದ್ದ ಅಸ್ಪೃಶ್ಯತೆಯ ಪ್ರಾತಿನಿಧಿಕ ವಸ್ತುಸ್ಥಿತಿಯೂ ಹೌದು. ಕೆನರಾ ಶಾಲೆ ಉಚಿತ ಶಿಕ್ಷಣ ಒದಗಿಸಿದ್ದು, ಅಲ್ಲಿ ಪರೀಕ್ಷೆ ಕಟ್ಟಲು ವಿಕ್ಟರ್‌ ಡಿ.ಸೋಜಾ ಹಣ ಕೊಟ್ಟದ್ದು, ಮುಂದೆ ಐ.ಎ.ಎಸ್‌. ಮಾಡಬೇಕೆಂಬ ಬಯಕೆ ಇದ್ದರೂ ಪರಿಸ್ಥಿತಿ ಅನುಕೂಲಕರವಾಗಿರದ್ದರಿಂದ ಮುಂಬಯಿ ಹಾದಿ ಹಿಡಿದ ವಿವರಗಳಿವೆ. 

 ಇಂದಿರಾಗಾಂಧಿಗೆ ಹಣ ಕೊಟ್ಟದ್ದು
ಮೂರನೆಯ ಅಧ್ಯಾಯದಲ್ಲಿ ತಾವು ಪಾರ್ಲಿಮೆಂಟ್‌ ಪ್ರವೇಶಿಸಿದಾಗ ಮಾಡಿದ “ಮೇಡನ್‌ ಸ್ಪೀಚ್‌’ನ ಪ್ರಸ್ತಾವ ಇದೆ. ಅಂದು ತಾವು 45 ನಿಮಿಷ ಕಾಲ ಇಂದಿರಾಗಾಂಧಿಯವರನ್ನು ಸಮರ್ಥಿಸಿ ಮಾತನಾಡಿದ್ದು ತಮಗೆ ಉತ್ತಮ ವಾಗ್ಮಿ ಎಂಬ ಹೆಗ್ಗಳಿಕೆ ತಂದುಕೊಟ್ಟದ್ದರ ಬಗ್ಗೆ ಪೂಜಾರಿ ವಿವರಿಸಿದ್ದಾರೆ. ಇದೇ ಅಧ್ಯಾಯ ಚಿಕ್ಕ ಮಗಳೂರಿನಲ್ಲಿ ಉಪಚುನಾವಣೆಗೆ ಇಂದಿರಾ ಗಾಂಧಿ ಸ್ಪರ್ಧಿಸಿದ ಸಂದರ್ಭದ ವಿವರವನ್ನು ಒಳಗೊಂಡಿದೆ. ಪ್ರಧಾನಿಯಾಗಿ ಅಧಿಕಾರ ಸಂಭಾಳಿಸಿದ್ದ ಇಂದಿರಾ ಗಾಂಧಿ ಬಳಿ ಕಾಸಿಲ್ಲದ ಸ್ಥಿತಿಯನ್ನು ಅದು ದಾಖಲಿಸುತ್ತದೆ. ಪೂಜಾರಿ ತಮ್ಮ ಸಮುದಾಯದವರಿಂದ 90,000 ರೂ. ಸಂಗ್ರಹಿಸಿ ಧರ್ಮಸ್ಥಳ ಗೆಸ್ಟ್‌ ಹೌಸಿನಲ್ಲಿ ತಂಗುತ್ತಿದ್ದ ಇಂದಿರಾ ಗಾಂಧಿ ಅವರಿಗೆ ಕೊಟ್ಟ ಭಾವನಾತ್ಮಕ ಕ್ಷಣಗಳಿವೆ. (ಪುಟ-37). ಜಾರ್ಜ್‌ ಫೆರ್ನಾಂಡೀಸ್‌ ಕೆಂಡದುಂಡೆಯಂತೆ ಮಾತನಾಡುತ್ತಿದ್ದರು, ಅದರಿಂದ ಜನ ಪ್ರಚೋದನೆಗೆ ಒಳಗಾಗುತ್ತಿದ್ದ ಮಾಹಿತಿ ಇಲ್ಲಿ ಸಿಗುತ್ತದೆ. ಗೂಢಚಾರರಿಂದ ತಪ್ಪಿಸಿಕೊಳ್ಳಲು ಇಂದಿರಾ ಮನೆಗೆ ಬೇಲಿ ದಾಟಿ ಹೋಗುತ್ತಿದ್ದ, ಹಾಗೊಮ್ಮೆ ಬಂಗಾರಪ್ಪರನ್ನು ಕರೆದೊಯ್ದು ಭೇಟಿ ಮಾಡಿಸಿದ, ಇದೇ ಬಂಗಾರಪ್ಪ ಅವರು ಸಿಟ್ಟಿನಿಂದ ಇಂದಿರಾ ಗಾಂಧಿಯವರಿಗೆ ಹೊಡೆಯಲು ಹೋದ, ನೊಂದ ಇಂದಿರಾ ಗಾಂಧಿ ನನ್ನ ಮಕ್ಕಳು ಕೂಡಾ ಈ ರೀತಿ ಮಾಡಲಿಲ್ಲ…ಎಂದು ಹೇಳಿಕೊಂಡ ವಿವರಗಳಿವೆ. (ಪುಟ-40) ಪ್ರಣಬ್‌ಗಾಗಿ ತ್ಯಾಗ, ಡಾ.ಸಿಂಗ್‌ಗೆ ಎದುರುತ್ತರ
ಬೆಂಚು ಹೊತ್ತು ತಂದ ಅಸ್ಕರ್‌ ಅವರಿಗೆ ಟಿಕೇಟ್‌ ಕೊಡಿಸಿದ, ಗುಂಡೂರಾವ್‌ ಉಡುಪಿಯಲ್ಲಿ ಕೆ.ಜೆ. ಜಾರ್ಜ್‌ ಅವರನ್ನು ನಿಲ್ಲಿಸಲು ಉದ್ದೇಶಿಸಿದ್ದನ್ನು ತಡೆದ, ಅದಕ್ಕಾಗಿ ನಿಮ್ಮ ರಾಜಕೀಯ ಜೀವನವನ್ನು ಮುಗಿಸಿಬಿಡುತ್ತೇನೆ ಎಂದ ವಿವರಗಳೂ ಈ ಅಧ್ಯಾಯದಲ್ಲಿವೆ (ಪುಟ 43). 1980ರ ಚುನಾವಣೆಯಲ್ಲಿ ಸೋತಿದ್ದ ಪ್ರಣಬ್‌ ಮುಖರ್ಜಿಯವರನ್ನು ಮಂತ್ರಿ ಮಾಡಲು ತಮಗೆ ಲಭಿಸುತ್ತಿದ್ದ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ ಸೂಕ್ಷ್ಮ ನೋಟ, ಅದಕ್ಕೆ ಪ್ರತಿಯಾಗಿ ವಾಣಿಜ್ಯ, ಉಕ್ಕು, ಮತ್ತು ಗಣಿ ಇಲಾಖೆ ಸಚಿವಾರಾದಾಗ ಪ್ರಣಬ್‌ ಮಂಗಳೂರಿಗೆ ಕುದುರೆ ಮುಖ ಕಬ್ಬಿಣದ ಅದಿರು ಕಾರ್ಖಾನೆ ಘಟಕ ಮಂಜೂರು ಮಾಡಿದ್ದನ್ನು ದಾಖಲಿಸಲಾಗಿದೆ. ಅರ್ಥ ಖಾತೆಗೆ ಮಂತ್ರಿಯಾ ದದ್ದು, ಇಂದಿರಾ ಹತ್ಯೆ, ಹಿರಿಯ ಸೊಸೆ ಸೋನಿಯಾ ಬಗ್ಗೆ ಅತ್ತೆ ಇಂದಿರಾಗೆ ಇದ್ದ ಮಮತೆ, ಕಾಂಗ್ರೆಸ್ಸಿನಲ್ಲಿ ರಾಜೀವ್‌ ಶಕೆಯ ಆರಂಭ, ಜಯಲಲಿತಾ ನೀಡಿದ ಖಾರ ಊಟ, ರಾಜೀವ್‌ ಯುಗಾಂತ್ಯದ ಘಟ್ಟ, ನರಸಿಂಹ ರಾವ್‌ ಆಡಳಿತದ ಆರಂಭ, ಮನಮೋಹನ ಸಿಂಗ್‌ ಅವರು “ಸಾಲ ಮೇಳ ಮಾಡಬೇಕಿತ್ತೇ’ ಎಂದು ವ್ಯಂಗ್ಯ ಮಾಡಿದ ಸಂದರ್ಭದಲ್ಲಿ ಪ್ರಧಾನಿ ನರಸಿಂಹ ರಾವ್‌ ಎದುರೇ ನೀಡಿದ ಖಡಕ್‌ ಉತ್ತರ ಕೃತಿಯ ಈ ಅಧ್ಯಾಯ ದಲ್ಲಿದೆ. ಸೀತಾರಾಮ ಕೇಸರಿಯವರು ಎ.ಐ.ಸಿ.ಸಿ. ಅಧ್ಯಕ್ಷರಾಗಿ ದ್ದಾಗ ಬೆಳಿಗ್ಗೆ ಪೂಜಾರಿ “ಯು ಆರ್‌ ಗ್ರೇಟ್‌ ಮ್ಯಾನ್‌’ ಎಂದು ತಾರೀಫ‌ು ಮಾಡಿ ಮಧ್ಯಾಹ್ನ ಪಕ್ಷದ ಜವಾಬ್ದಾರಿಯಿದ ತೆಗೆದುಹಾಕಿದ್ದನ್ನು ಇಲ್ಲಿ ನಿರೂಪಿಸಲಾಗಿದೆ. ಪ್ರಧಾನಿಯಾದರೆ ಒಂದು ತಿಂಗಳೊಳಗೆ ಕುದ್ರೋಳಿಗೆ ಬರುತ್ತೇನೆ ಎಂದ ದೇವೇಗೌಡರು ವಚನ ಭಂಗ ಮಾಡಿದ್ದರಿಂದ ಕ್ರುದ್ಧರಾಗಿ ತಿಂಗಳೊಳಗೆ ಅವರನ್ನು ಪ್ರಧಾನಿ ಸ್ಥಾನದಿಂದ ತೆಗೆಸುವ ಶಪಥ ಹಾಕಿದ್ದು ಮತ್ತು ದೇವೇಗೌಡರು ಮಾಜಿ ಪ್ರಧಾನಿಯಾದ ವಿವರಗಳು ಇಲ್ಲಿವೆ (ಪುಟ 64.) ಗೋಬ್ಯಾಕ್‌ ಪೂಜಾರಿ ಎಂದರು

Advertisement

ಅಧ್ಯಾಯ 4 ರಲ್ಲಿ ಸಾಲ ಮೇಳದ ಬಗ್ಗೆ ವಿಸ್ತತವಾಗಿ ಬರೆ ಯಲು ಪೂಜಾರಿಯವರು 20 ಪುಟಗಳನ್ನು ವಿನಿಯೋಗಿಸಿ ದ್ದಾರೆ. ಬ್ಯಾಂಕುಗಳ ಸಿಬಂದಿ ಕೆಲಸ ಹೆಚ್ಚಾಗುತ್ತದೆ ಎಂದು ಸಾಲ ನೀಡಲು ನಿರಾಕರಿಸುವುದು, ಉದ್ಯಮಿಗಳಿಗೆ ಕೋಟ್ಯಂತರ ರೂ. ಸಾಲ ಕೊಟ್ಟು ವಸೂಲಾಗದಿದ್ದರೂ ಸುಮ್ಮನಿರುವುದು, ಸಾಲ ಮೇಳ ಮಾಡಿದಾಗ ಬ್ಯಾಂಕ್‌ ನೌಕರರ ಸಂಘಟನೆಗಳಿಂದ ಎದುರಾದ ವಿರೋಧ, ವಿವಿಧ ರಾಜ್ಯಗಳಲ್ಲಿ ಸಾಲಮೇಳ ನಡೆಸುವಾಗ ಎದುರಾದ ಪ್ರಾದೇಶಿಕ ವಿರೋಧಗಳನ್ನು ದಾಖಲಿ ಸಿದ್ದಾರೆ. ಸಾಲ ಮೇಳದ ಪರಿಣಾಮ ಬ್ಯಾಂಕ್‌ ಅಧಿಕಾರಿಗಳು ಪಾರ್ಟಿಯ ಮಜಾ ಬಿಟ್ಟು ರಾತ್ರಿ ಮನೆಯಲ್ಲಿರಬೇಕಾದ ಅನಿವಾರ್ಯತೆ, ತಾವು ಅಗತ್ಯ ಬಿದ್ದರೆ ರಾತ್ರಿ 12 ಗಂಟೆಗೂ ಫೋನು ಮಾಡುತ್ತಿದ್ದುದನ್ನು ಪೂಜಾರಿ ನೆನಪಿಸಿಕೊಂಡಿದ್ದಾರೆ. ಇದರ ಪರಿಣಾಮ ಬ್ಯಾಂಕ್‌ ಅಧಿಕಾರಿಗಳ ಪತ್ನಿಯರು ತಮ್ಮ ಗಂಡಂದಿರು ಕಚೇರಿ ಕೆಲಸ ಮುಗಿದ ನಂತರ ಕುಡಿದು ಬರುವುದನ್ನು ಬಿಟ್ಟು ಮನೆಯಲ್ಲಿಯೇ ಇರುವಂತಾದುದರ ಬಗ್ಗೆ ವ್ಯಕ್ತಪಡಿಸಿದ ಶ್ಲಾಘನೆಯೂ ಪುಟ 78ರಲ್ಲಿ ನಮೂದಾಗಿದೆ. ಆಂಧ್ರ ಪ್ರದೇಶದ ಮೆಹಬೂಬ್‌ ನಗರದಲ್ಲಿ ಗೋ ಬ್ಯಾಕ್‌ ಪೂಜಾರಿ ಬೊಬ್ಬೆ ಜತೆಗೆ ಗುಂಪಿನಲ್ಲಿದ್ದವರು ಚೂರಿಯಿಂದ ಹೊಟ್ಟೆಗೆ ಇರಿದ ಘಟನೆ ಸಂದರ್ಭ ರಕ್ತ ಸುರಿಯುತ್ತಿದ್ದರೂ ಜಿಲ್ಲಾಧಿಕಾರಿಗಳ ಆಸ್ಪತ್ರೆ ಸೇರುವ ಸಲಹೆ ಧಿಕ್ಕರಿಸಿ ‘ಸತ್ತರೆ ಇಲ್ಲೆ ಸಾಯುತ್ತೇನೆ, ಸಾಲ ವಿತರಿಸಿಯೇ ಸಾಯುತ್ತೇನೆ’ ಎಂದಿದ್ದನ್ನು ಪುಟ 84ರಲ್ಲಿ ದಾಖಲಿಸಿದ್ದಾರೆ. ಸಾಲ ಮೇಳದಿಂದ ದೇಶದ ಆರ್ಥಿಕತೆ ದಿವಾಳಿಯಾಗುತ್ತಿದೆ ಎಂದು ಸಂಸತ್ತಿನಲ್ಲಿ ವಿಪಕ್ಷ ವಾಗ್ಧಾಳಿ ಮಾಡಿದಾಗ ಇಂದಿರಾ ಗಾಂಧಿಯವರು ಮೇಜು ಬಡಿದು “ಬಡವರ ಸಾಲಕ್ಕೆ ಇಂದಿರಾ ಗಾಂಧಿಯೇ ಜಾಮೀನು’ ಎಂದದ್ದು ಈ ಅಧ್ಯಾಯದಲ್ಲಿದೆ.

ರಾಜೀವ್‌ ಜತೆ ಜಗಳ
ಸಾಲ ಮೇಳದ ಸಂದರ್ಭ ತಾವು ನೀರನ್ನು ಕೂಡಾ ತೆಗೆದು ಕೊಂಡು ಹೋಗುತ್ತಿದ್ದುದನ್ನು, ಗಣ್ಯರ ಊಟದ ಆಹ್ವಾನವನ್ನು ನಿರಾಕರಿಸಿ ಬಿಸ್ಕತ್ತುಗಳೊಂದಿಗೆ ಹಸಿವು ಹಿಂಗಿಸಿಕೊಳ್ಳುತ್ತಿದುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಇಂದಿರಾ ಗಾಂಧಿ ಕೊಟ್ಟ ಮೆಚ್ಚುಗೆ ಏಟನ್ನು ಕೃತಜ್ಞತೆಯ ಭಾವದಿಂದ ಸ್ಮರಿಕೊಂಡಿ ದ್ದಾರೆ. ತಮ್ಮ ಖಾತೆ ಬದಲಿಸಿದಾಗ ವಿಮಾನದಲ್ಲಿ ಪ್ರಧಾನಿ ರಾಜೀವ್‌ ಗಾಂಧಿಯವರ ಜತೆ ಜಗಳ ಆಡಿದ ಸಂದರ್ಭವನ್ನೂ ನೆನಪಿಸಿಕೊಂಡಿದ್ದಾರೆ. ಇದರಿಂದ ರೋಷಾವಿಷ್ಟರಾದ ರಾಜೀವ್‌ ಗಾಂಧಿ ಮೇಜು ಕುಟ್ಟಿ ಎದ್ದು ನಿಂತದ್ದನ್ನೂ, ಖಾತೆ ಬದಲಾವಣೆಗೆ ನೀಡಿದ ಕಾರಣವನ್ನೂ ನಿರ್ವಿಕಾರವಾಗಿ ದಾಖಲಿಸಿದ್ದಾರೆ.

ನಕ್ಕರು ಇಂದಿರಾಗಾಂಧಿ
ನಾಲ್ಕು ಬಾರಿ ಒಲಿದು ಬಂದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟ ಬಗ್ಗೆ ಅಧ್ಯಾಯ 5ರಲ್ಲಿ ವಿವರಗಳಿವೆ. ವೀರೇಂದ್ರ ಪಾಟೀಲ್‌ ಮುಖ್ಯ ಮಂತ್ರಿಯಾಗಿದ್ದಾಗ ಮೂರ್ತೆ ದಾರರ ಸಮಸ್ಯೆ ಬಗೆಹರಿಸುವಂತೆ ಸೂಚನೆ ಕೊಟ್ಟರೂ ಅದನ್ನು ಸತತ ಉಪೇಕ್ಷಿಸಿದಾಗ “ನಿಮ್ಮನ್ನು ಕೆಳಗಿಳಿಸದೇ ಬಿಡುವುದಿಲ ಎಂದು ಸವಾಲು ಹಾಕಿದ್ದನ್ನೂ, ಅದನ್ನು ರಾಜೀವ್‌ ಗಾಂಧಿ ಬಳಿ ಹೇಳಿದಾಗ ಚಿಂತೆ ಮಾಡಬೇಡಿ, ನಾನಿದ್ದೇನೆ ಎಂದ ಅವರ ಭರವಸೆಯ ನುಡಿಗಳೂ, ಅದರ ಪರಿಣಾಮ ಬಂಗಾರಪ್ಪ ಮುಖ್ಯ ಮಂತ್ರಿಯಾದುದರ ಚಿತ್ರಣವಿದೆ. ಬಂಗಾರಪ್ಪ ಭ್ರಷ್ಟಾ ಚಾರದ ಆರೋಪ ಹೊತ್ತು ಮುಖ್ಯಮಂತ್ರಿ ಸ್ಥಾನ ಬಿಡಲು ನಿರಾಕರಿಸಿದಾಗ ಪ್ರಧಾನಿ ನರಸಿಂಹ ರಾವ್‌ ಹಾಕಿದ ಬಂಧನದ ಬೆದರಿಕೆ, ಶಾಸಕರ ಬೆಂಬಲ ಇಲ್ಲದಿದ್ದರೂ ಕರುಣಾಕರನ್‌ ಲಾಬಿಯಿಂದ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾದ ಬಗೆ, ಮೊಯಿಲಿಯಿಂದಾಗಿ ನೀನು ಪಶ್ಚಾತಾಪ ಪಡಬೇಕಾಗು ತ್ತದೆ ಎಂದು ಇಂದಿರಾಗಾಂಧಿ ನೀಡಿದ ಎಚ್ಚರಿಕೆ, ಮೊಯಿಲಿ ಯವರು ಪಕ್ಷಕ್ಕೋಸ್ಕರ ಅವರ ಹೆಂಡತಿಯ ಮಂಗಳಸೂತ್ರವನ್ನು ಅಡವಿಟ್ಟಿದ್ದಾರೆ ಎಂದಾಗ ಇಂದಿರಾ ಗಾಂಧಿಯವರು ನಕ್ಕ ಪರಿ ಈ ಅಧ್ಯಾಯದ ಪುಟಗಳಲ್ಲಿದೆ. 

ಅಧ್ಯಾಯ 6ರಲ್ಲಿ ಕುದ್ರೋಳಿ ದೇವಾಲಯದ ನವೀಕರಣ ವನ್ನು ಸಾದ್ಯಂತವಾಗಿ ವಿವರಿಸಲಾಗಿದೆ. ದೇವರಿಲ್ಲದವರಿಗೆ ದೇವ ರನ್ನು ಕೊಟ್ಟ ಬ್ರಹ್ಮ ಶ್ರೀ ನಾರಾಯಣಗುರುಗಳಿಂದ ಸ್ಥಾಪಿತವಾದ ಕುದ್ರೋಳಿ ಕ್ಷೇತ್ರದ ಜೀಣೊದ್ದಾರ, ನಡೆಸಿದ ಕರಸೇವೆ/ಶ್ರಮದಾನ, 5 ಪೈಸೆ ಭಿಕ್ಷೆಯ ಪವಾಡ, ಮಂಗಳೂರಿನ ದಸರಾ, ಸಮಾಜ ಪರಿವರ್ತನೆಯ, ನಟಸಾರ್ವಭೌಮ ರಾಜಕುಮಾರ್‌ ಸಂಪರ್ಕ, ತಮ್ಮ ಒಡನಾಡಿಗಳು/ಗೆಳೆಯರು, ಸಾಮಾಜಿಕ ಪರಿವರ್ತನೆ ಕಾರ್ಯಕ್ಕೆ ಕರ್ಮಭೂಮಿಯಾದ ಕುದ್ರೋಳಿ ಕುರಿತಂತೆ ನಿರೂಪಿಸಲಾಗಿದೆ. ಚಿತ್ರ ಸಂಪುಟದ ಮೂಲಕ ಇಲ್ಲಿಗೆ ಭೇಟಿ ನೀಡಿದ ಗಣ್ಯಾತಿಗಣ್ಯರ ವಿವರಗಳನ್ನು ಸಂಕಲಿಸಲಾಗಿದೆ.

ಅಧ್ಯಾಯ 7ರಲ್ಲಿಗೆ ಜನಾರ್ದನ ಪೂಜಾರಿಯವರು ಇದು ವರೆಗೆ ಸಾರ್ವಜನಿಕಗೊಳಿಸದ ವೈಯಕ್ತಿಕ ಬದುಕಿನ ಪುಟ
ಗಳಿವೆ. ತನ್ನ ಹಟ ಮತ್ತು “ದಡ್ಡತನ’ದಿಂದ (ಪುಟ-156) ಮಗನನ್ನು ಕಳೆದುಕೊಂಡೆ ಎಂಬ ಶೋಕತಪ್ತ ಪದಗಳು ಅಲ್ಲಿ ಮೂಡಿವೆ. ಮಕ್ಕಳಿಗಾಗಿ ತಾನು ಯಾವತ್ತೂ ಪ್ರಭಾವ ಬೀರಿಲ್ಲ, ಅವರವರ ದಾರಿಯನ್ನು ಅವರವರು ಹುಡುಕಿಕೊಂಡರು ಎಂದು ಬರೆಯುವಾಗ ಪೂಜಾರಿ ಕಿರಿ ಮಗನ ಬದುಕಿನಲ್ಲಿ ಎದ್ದ ವಿಪ್ಲವವನ್ನು ತಾವು ದೈವ ಶಕ್ತಿಯಲ್ಲಿಟ್ಟ ನಂಬಿಕೆಯಿಂದ ಪರಿಹರಿಸಿದ ಪರಿಯನ್ನು ಅನನ್ಯವಾಗಿ ನಿರೂಪಿಸಿದ್ದಾರೆ. ಇಲ್ಲಿ ಅವರ ಮಾತುಗಳು ಅಪ್ಪಟ ದಾರ್ಶನಿಕನ ಮಾತುಗಳಂತಿವೆ. ತಾಳ್ಮೆ, ಸಮಾಧಾನ, ನಂಬಿದ ದೇವರು ನನ್ನ ಕೈಬಿಡಲಿಲ್ಲ ಎಂಬ ಸಮಾಧಾನದ ನಿಟ್ಟುಸಿರು ಅವರ ಈ ಅಧ್ಯಾಯದ ಬರವಣೆಗೆಯಲ್ಲಿ ಕಾಣುತ್ತದೆ. ಅಧ್ಯಾಯ 8ರಲ್ಲಿ ಅವರು ತಮ್ಮ ರಾಷ್ಟ್ರವ್ಯಾಪ್ತಿಯ ರಾಜಕೀಯ ನೆನಪುಗಳನ್ನು, ದೊಡªವರ ಸಣ್ಣತನಗಳನ್ನು ನೆನಪಿಸಿಕೊಂಡಿದ್ದಾರೆ.

ಸಮಕಾಲೀನ ರಾಜ್ಯ ರಾಜಕೀಯದ ಬಗ್ಗೆ ಈ ಆತ್ಮಚರಿತ್ರೆಯಲ್ಲಿ ವಿವರಗಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸರಣಿ ಸುದ್ದಿಗೋಷ್ಟಿ ನಡೆಸಿ ರಾಜೀನಾಮೆ ಕೊಡಬೇಕು, ನೀವು ಕಾಂಗ್ರೆಸ್ಸಿನ ಮಾನ ಮರ್ಯಾದೆ ತೆಗೆಯುತ್ತಿದ್ದೀರಿ ಎಂದು ಹೇಳಿದ ಅವರು ಪುಸ್ತಕದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಜನ ಪ್ರಿಯ ವ್ಯಕ್ತಿಗಳ ಆತ್ಮಚರಿತ್ರೆ ಬಗ್ಗೆ ಸಮಾಜ ಬಹಳ ಕುತೂಹಲ ಹೊಂದಿರುತ್ತದೆ. ಆತ್ಮಚರಿತ್ರೆಗಳನ್ನು ಬರೆಯುವಾಗ ಅವುಗಳು ಬರಹಗಾರನಿಗೆ ಆತನನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊ ಳ್ಳಲು ಇರುವ ಮಾರ್ಗ ಎಂಬುದಾಗಿ ಕ್ಲೇರ್‌ ಟೋಮ್ಲಿನ್‌ ತನ್ನ “ಎ ಲೈಫ್ ಆಫ್ ಮೈ ಓನ್‌’ ಕೃತಿಯಲ್ಲಿ ಹೇಳಿಕೊಂಡದ್ದುಂಟು. ಆತ್ಮಚರಿತ್ರೆಗಳು ಆ ಬರಹಗಾರರೇ ತಾವಾಗಿಯೇ ಹೇರಿಕೊಂಡ ಕೆಲಸಗಳಾಗಿರುತ್ತವೆ. ಬಹುಶಃ ಟೋಮ್ಲಿನ್‌ ಹೇಳಿದಂತೆ ಅವು ಬರಹಗಾರನಿಗೆ ತನ್ನನ್ನು ತಾನು ಸರಿಯಾಗಿ ಅರ್ಥ ಮಾಡಿ ಕೊಳ್ಳಲು ಇರುವ ಮಾರ್ಗವೂ ಹೌದೇನೋ? ಆತ್ಮಚರಿತ್ರೆ ಬರೆಯುವಾಗ ಬಹುಮಂದಿ ಎದುರಿಸುವ ಸಮಸ್ಯೆ “ನಾನು ನನ್ನ ಬಗ್ಗೆ ಬರೆಯುವುದು ಸುಲಭವೇ?’ ಎಂಬುದು. ಅಲ್ಲಿ ಹರ್ಷಕ್ಕೂ ಜಾಗವಿದೆ, ದೌರ್ಭಾಗ್ಯಕ್ಕೂ ಸ್ಥಳವಿದೆ, ವಂಚನೆಗೂ ಅವಕಾಶವಿದೆ. ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಜನನಾಯಕ ಆಗಿರಲಿಲ್ಲ. ಅವರು ತಾವು ಕಾಂಗ್ರೆಸಿನ ಕೆಲವು ನಿರ್ಧಾರಗಳನ್ನು ವಿರೋಧಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇದು ಅವರ “ಕೊಲಿಶನ್‌ ಇಯರ್ಸ್‌ 1996-2012′ ಕೃತಿಯಲ್ಲಿ ದಾಖಲಾಗಿದೆ. 2003ರಲ್ಲಿ ನಡೆದ ಸಿಮ್ಲಾ ಸಮಾವೇಶದಲ್ಲಿ ಅವರು ಬಿಜೆಪಿಯನ್ನು ಎದುರಿಸಲು ಕಾಂಗ್ರೆಸು ಇತರ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದನ್ನು ವಿರೋಧಿಸಿದ್ದರು. ಬಹುತೇಕ ನಾಯಕರು ಇದೇ ಅಭಿಪ್ರಾಯವನ್ನು ಹೊಂದಿದ್ದರು, ಆದರೆ ಅವರು ವರಿಷ್ಟ$ನಾಯಕತ್ವವನ್ನು ಎದುರು ಹಾಕಿಕೊಳ್ಳಲು ಸಿದ್ಧರಿರಲಿಲ್ಲ. ಇವಿಷ್ಟು ಟಿಪ್ಪಣಿಗಳ ಹಿನ್ನೆಲೆಯಲ್ಲಿ ಪೂಜಾರಿ ಯವರ ಆತ್ಮಚರಿತ್ರೆಯ ಬಗ್ಗೆ ಹೇಳುವುದಾದರೆ ಅವರದು ನಿಜ ಜೀವನದಲ್ಲಿದ್ದಂತೆ ಇಲ್ಲಿಯೂ ಓಡು ನಡಿಗೆ. ಈ ಬರವಣಿಗೆ ಅವರನ್ನು ಅವರೇ ಸರಿಯಾಗಿ ಅರ್ಥ ಮಾಡಿಕೊಳ್ಳಲು ಒದಗಿಬಂದ ಅವಕಾಶ. 

ಇಡೀ ಕೃತಿಯ ಬಗ್ಗೆ ಗಮನಿಸುವಾಗ ಭಾಷೆ ಗಂಭೀರ ವಾಗಿಯೇ ಸಾಗುತ್ತದೆ, ಎಲ್ಲೂ ಆವೇಶ ಇಲ್ಲ. ಒಂದು ನಿರ್ಲಿಪ್ತ ಭಾವ, ಸಮಾಧಾನ ಚಿತ್ತವಿದೆ. ಕಾಂಗ್ರೆಸನ್ನು ಸಮರ್ಥಿಸಿಕೊಳ್ಳು ವಾಗ ಅಲ್ಲೊಂದು ದೃಢತೆ ಇದೆ. ತಾವು ನಂಬಿದ ಸಿದ್ಧಾಂತಗಳನ್ನು ಸಮರ್ಥಿಸುವಾಗ ಅವರಲ್ಲಿ ಅತ್ಯಂತ ನಿರ್ದಿಷ್ಟತೆ ಇದೆ. ತಮ್ಮ ಪಕ್ಷದಲ್ಲಿಯೂ, ಅದರಲ್ಲೂ ಇಂದಿರಾ ಗಾಂಧಿಯವರ ಉಕ್ಕಿನ ಕೈಯ ಹಿಡಿತ ಪಕ್ಷದ ಮೇಲಿದ್ದಾಗಲೂ ಅವರನ್ನು ಪದಚ್ಯುತ ಮಾಡಲು ಸೋವಿಯತ್‌ ಒಕ್ಕೂಟದ ನೆರವು ಕೋರಿದ, ಪಕ್ಷದೊಳಗೇ ನಾಯಕರು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆ ಯು ವಂತಹ ಸ್ಥಿತಿ ಇದ್ದುದನ್ನು ಪೂಜಾರಿ ಇಲ್ಲಿ ನಿರ್ವಿಕಾರವಾಗಿ ದಾಖಲಿಸಿದ್ದಾರೆ. ಅವರು ಹೇಳಬೇಕಾದ ಅನೇಕ ವಿಷಯಗಳು ಇನ್ನು ಬಾಕಿ ಇವೆ. ಪ್ರಣಬ್‌ ಮುಖರ್ಜಿಯವರಂತೆ ಪೂಜಾರಿ ಯವರೂ ಸಂಪುಟಗಳಲ್ಲಿ ಆತ್ಮಚರಿತ್ರೆ ಬರೆಯುವಷ್ಟು ವಿಷಯ ಸಾಮಗ್ರಿ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಅವರು ಮುಂದುವರಿ ಯುತ್ತಾರೆಯೇ ಎಂಬುದು ಕಾಲಕ್ಕೆ ಬಿಟ್ಟ ವಿಷಯ.

ಕೃತಿಯ ಪ್ರಶ್ನಾರ್ಹ ನಡೆ ಇರುವುದು ತುರ್ತು ಸ್ಥಿತಿಯನ್ನು ಪೂಜಾರಿಯವರು ಹಿಂಜರಿಕೆ ಇಲ್ಲದೆ ಬೆಂಬಲಿಸಿರುವುದರಲ್ಲಿ. ವಕೀಲರಾಗಿದ್ದ, ರಾಜತಾಂತ್ರಿಕ ಭಾಷಣಗಳನ್ನು ವಿದೇಶಗಳಲ್ಲಿ ಮಾಡಿರುವವರಿಗೆ, ಸಂವಿಧಾನ ನಾಗರಿಕರಿಗೆ ಕೊಡಮಾಡಿದ ಸ್ವಾತಂತ್ರ ಮೊಟಕಾದ ಬಗ್ಗೆ ಯಾಕೆ ಮರುಕ ಹುಟ್ಟಲಿಲ್ಲ ಎಂಬ ಪ್ರಶ್ನೆ ಕೃತಿಯ ಓದು ಮುಗಿದಾಗ ಎದುರು ನಿಲ್ಲುತ್ತದೆ. ಬಹುಶಃ ನಿಷ್ಠೆ ಅವರನ್ನು ಕಟ್ಟಿ ಹಾಕಿರಬಹುದು.

ಎಸ್‌. ಜಯರಾಮ 

Advertisement

Udayavani is now on Telegram. Click here to join our channel and stay updated with the latest news.

Next