ಚಾಮರಾಜನಗರ: ಜಿಲ್ಲೆಯಲ್ಲಿ ಪ್ರತಿಭಾನ್ವಿತ ಜನಪದ ಕಲಾವಿದರಿದ್ದು, ಜಾನಪದ ಕಲೆಗಳಿಗೆ ಹೆಚ್ಚು ಒತ್ತು ಹಾಗೂ ಪ್ರೋತ್ಸಾಹ ನೀಡಬೇಕೆ ಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗ ಮಂದಿರದಲ್ಲಿ, ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಜನೆ, ತತ್ವಪದಗಳು, ಸೋಬಾನೆ ಸೇರಿದಂತೆ ಅನೇಕ ಜನಪದ ಕಲೆಗಳಿಗೆ ಜಿಲ್ಲೆ ಹೆಸರುವಾಸಿಯಾಗಿದೆ. ಇಲ್ಲಿನ ಕಲಾವಿದರ ಜನಪದ ಹಾಡುಗಳನ್ನು ಎಷ್ಟು ಆಸ್ವಾದಿಸಿದರು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಸ್ಥಳೀಯ ಜಾನಪದ ಕಲೆ ಸಂಸ್ಕೃತಿ ಬೆಳೆಯಲು ಉತ್ತೇಜನ ಮುಂದುವರೆಸಬೇಕಿದೆ ಎಂದರು. ಜಾನಪದ ಕಲೆಗಳ ಸಾರ ಹೆಚ್ಚು ಅರ್ಥಪೂರ್ಣವಾಗಿವೆ. ಇವುಗಳಲ್ಲಿ ಒಳ್ಳೆಯ ಅಂಶಗಳು ಇವೆ. ಕಲಾವಿದರಿಗೆ ಅವಕಾಶ ನೀಡುವ ಕಾರ್ಯಕ್ರಮಗಳು ಸಹಕಾರಿಯಾಗ ಲಿದೆ. ಹೀಗಾಗಿ ಇಲ್ಲಿನ ಕಲೆ, ಸಂಸ್ಕೃತಿಗೆ ವಿಶೇಷ ಮಹತ್ವ ನೀಡಬೇಕೆಂದು ಅವರು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಮಾತನಾಡಿ, ಜನಪದ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಜನಪದ ಸಂಸ್ಕೃತಿ ಉಳಿಸಿ ಪೋಷಿಸಬೇಕು. ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯನ್ನ ಮರೆತು ಅನ್ಯ ಸಂಸ್ಕೃತಿಯ ಪ್ರಭಾವಕ್ಕೆ ಹೆಚ್ಚು ಒಳಗಾಗುತ್ತಿದ್ದೇವೆ. ಯಾವುದೇ ಅರಿವು ಇಲ್ಲದ ಮುಂದಿನ ಪೀಳಿಗೆಯವರಿಗೆ ಸ್ಥಳೀಯ ಪರಂಪರೆ ಬಗ್ಗೆ ತಿಳಿಸಿಕೊಡಬೇಕಿದೆ. ಇಲ್ಲಿನ ಸಂಸ್ಕೃತಿ, ಜಾನಪದ ಕಲೆಗಳನ್ನ ಪ್ರೀತಿಸ ಬೇಕು ಮತ್ತು ಬೆಳೆಸಬೇಕು ಎಂದು ಹೇಳಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ. ನಿಜಗುಣರಾಜು ಮಾತನಾಡಿ, ಚಾಮರಾಜನಗರ ಎಂದ ಕೂಡಲೇ ಜಾನಪದ ತವರೂರು ಎಂದು ತಕ್ಷಣವೇ ನೆನಪಾಗುತ್ತದೆ. ಮಲೆ ಮಹದೇಶ್ವರರು, ಸಿದ್ದಾಪ್ಪಾಜಿಯವರ ನೆಲೆಯಾ ಗಿರುವ ಜಿಲ್ಲೆ ಜಾನಪದ ಕಲೆಗಳಿಂದ ಗುರುತಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜನಪದ ಗಾಯಕ ಸಿ.ಎಂ. ನರಸಿಂಹ ಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ್, ಕನ್ನಡಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಗುರು ಲಿಂಗಯ್ಯ ಇತರರು ಇದ್ದರು.
ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗಣ್ಯರು ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು.
ದೇವಸ್ಥಾನದಿಂದ ಹೊರಟ ಕಲಾತಂಡಗಳ ಮೆರವಣಿಗೆ ಬಿ ರಾಚಯ್ಯ ಜೋಡಿ ರಸ್ತೆಯ ಮೂಲಕ ಸಾಗಿ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರಕ್ಕೆ ತಲುಪಿತು.