Advertisement

Janandolana Convention: ಮೈತ್ರಿ ಪಕ್ಷಗಳ ವಿರುದ್ಧ ಇಂದು ಕಾಂಗ್ರೆಸ್‌ ಶಕ್ತಿ ಪ್ರದರ್ಶನ

12:10 AM Aug 09, 2024 | Team Udayavani |

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ-ಜಾತ್ಯತೀಯ ದಳ ನಡೆಸುತ್ತಿರುವ ಪಾದಯಾತ್ರೆಯ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್‌ ಶುಕ್ರವಾರ ಮೈಸೂರಿನಲ್ಲಿ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ತಯಾರಿ ಮಾಡಿಕೊಂಡಿದೆ.

Advertisement

ಮೈತ್ರಿಕೂಟದ ಪಾದಯಾತ್ರೆಯ ಅಂತ್ಯದ ಮುನ್ನ ದಿನವಾದ ಶುಕ್ರವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ ಆಯೋಜಿಸಿರುವ ಬಿಜೆಪಿ- ಜೆಡಿಎಸ್‌ ಸರಕಾರಗಳ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ವಿರುದ್ಧದ ಜನಾಂದೋಲನ ಸಮಾವೇಶದಲ್ಲಿ ಶಕ್ತಿ ಪ್ರದರ್ಶಿಸುವ ಮೂಲಕ ಎದುರಾಳಿಗಳಿಗೆ ಖಡಕ್‌ ಸಂದೇಶ ರವಾನಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

ಬಿಜೆಪಿ-ಜೆಡಿ ಎಸ್‌ ಪಾದ ಯಾತ್ರೆ ಮೈಸೂರು ನಗರಕ್ಕೆ ಆ. 9ರ ರಾತ್ರಿ ಆಗಮಿಸಿ ವಾಸ್ತವ್ಯ ಹೂಡಿದರೂ ಮರುದಿನ 10ರಂದು ಬೃಹತ್‌ ಸಮಾವೇಶ ನಡೆಸುತ್ತಿದೆ. ಇದಕ್ಕೆ ಮುಂಚಿತವಾಗಿಯೇ ಶುಕ್ರವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್‌ ಸಮಾವೇಶವನ್ನು ನಡೆಸಿ ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿರುವ 21ಕ್ಕೂ ಹೆಚ್ಚು ಹಗರಣಗಳ ದಾಖಲೆಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ.

3 ಹಂತದ ವೇದಿಕೆ ನಿರ್ಮಾಣ
ಮಹಾರಾಜ ಕಾಲೇಜು ಮೈದಾನದಲ್ಲಿ 3 ಹಂತದ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದ್ದು, ವಾಟರ್‌ ಪ್ರೂಫ್ ವ್ಯವಸ್ಥೆ ಮಾಡಲಾಗಿದೆ. 300 ಮಂದಿ ಕುಳಿತುಕೊಳ್ಳುವಂತೆ ಮುಖ್ಯ ವೇದಿಕೆ ಇದ್ದು, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಸಂಪುಟ ಸದಸ್ಯರು, ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು, ನಿಗಮ ಮಂಡಳಿಗಳ ಅಧ್ಯಕ್ಷರು ಕುಳಿತುಕೊಳ್ಳಲಿದ್ದಾರೆ. ಎಡಭಾಗದಲ್ಲಿ ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಎಡಭಾಗದ ವೇದಿಕೆಯಲ್ಲಿ ಜಿಲ್ಲಾ, ಬ್ಲಾಕ್‌ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಆಸೀನರಾಗಲಿದ್ದಾರೆ. ಮುಂದುಗಡೆ 2 ಲಕ್ಷ ಮಂದಿ ಕುಳಿತುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಶಾಮಿಯಾನ ಹಾಕಲಾಗಿದೆ. ಹತ್ತಿರದಲ್ಲಿ ವೀಕ್ಷಿಸುವಂತೆ ಪರದೆಗಳನ್ನು ಅಳವಡಿಸಲಾಗಿದೆ.

2 ಲಕ್ಷ ಜನರು ಭಾಗಿ
2 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸು ವಂತೆ ಸಿಎಂ ಗುರಿ ನೀಡಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ನಗರದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ರಾಮನಗರ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ನಡೆಸಿ ಜವಾಬ್ದಾರಿ ನೀಡಿದ್ದಾರೆ. ಆರು ಜಿಲ್ಲೆಗಳಿಂದ ಜನರನ್ನು ಕರೆತರುವ ವ್ಯವಸ್ಥೆ ಮಾಡಿದರೂ ಮೈಸೂರು ಜಿಲ್ಲೆಯವರೇ ಒಂದು ಲಕ್ಷ ಜನರನ್ನು ಸೇರಿಸುವುದಕ್ಕೆ ಶಾಸಕರಿಗೆ ಟಾರ್ಗೆಟ್‌ ನೀಡಲಾಗಿದೆ. ಅಹಿಂದ ಸಂಘಟನೆಗಳ ಒಕ್ಕೂಟದಿಂದಲೂ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾಕ ಸಮುದಾಯದವರನ್ನು ಕರೆತರಲು ತಯಾರಿ ಮಾಡಿಕೊಳ್ಳಲಾಗಿದೆ.

Advertisement

ಒಂದೇ ವೇದಿಕೆಯಲ್ಲಿ 2 ಸಮಾವೇಶ
ಸಾಂಸ್ಕೃ ತಿಕ ನಗರಿ ಮೈಸೂರು ರಾಜಕೀಯ ಶಕ್ತಿ ಕೇಂದ್ರ ವಾಗಿ ಮಾರ್ಪಟ್ಟಿದ್ದು, ಶುಕ್ರವಾರ ಮತ್ತು ಶನಿವಾರ 2 ಬೃಹತ್‌ ಸಮಾವೇಶಗಳು ಒಂದೇ ಸ್ಥಳದಲ್ಲಿ ನಡೆಯುತ್ತಿವೆ. ವಿಶೇಷ ಎಂದರೆ ಎರಡು ರಾಜಕೀಯ ಪಕ್ಷಗಳ ಕಾರ್ಯಕ್ರ ಮಕ್ಕೆ ಒಂದೇ ವೇದಿಕೆ ಬಳಕೆಯಾಗುತ್ತಿದೆ. ಆ. 9ರಂದು ಕಾಂಗ್ರೆಸ್‌, 10ರಂದು ಬಿಜೆಪಿ ಬೃಹತ್‌ ಸಮಾವೇಶ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಿಲುವುಗಳು, ತತ್ವ , ಸಿದ್ಧಾಂತ, ಸಂಘಟನೆ ಬೇರೆಯಾದರೂ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗುತ್ತಿರುವ ಒಂದೇ ವೇದಿಕೆಯಲ್ಲಿ ಒಬ್ಬರಾದ ಅನಂತರ ಮತ್ತೂಬ್ಬರು ಬೃಹತ್‌ ಸಮಾವೇಶ ಮಾಡುತ್ತಿದ್ದಾರೆ.

ಒಂದು ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಕುಳಿತಿದ್ದ ಅದೇ ಆಸನದಲ್ಲಿ ಮಾರನೇ ದಿನ ಅದೇ ಆಸನಗಳಲ್ಲಿ ಮತ್ತೂಂದು ಪಕ್ಷದ ಕಾರ್ಯಕರ್ತರು ಹಾಗೂ ಜನರು ಆಸೀನರಾಗಿ ರಾಜ್ಯದ ರಾಜಕೀಯ ಮುಖಂಡರು ಮಾಡುವ ಭಾಷಣ ಆಲಿಸಲಿ ದ್ದಾರೆ. ಕಾಂಗ್ರೆಸ್‌ ಮೊದಲಿಗೆ ತನ್ನ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದರೆ, ಬಿಜೆಪಿ ಮತ್ತು ಜೆಡಿಎಸ್‌ನವರು ಆರೋಪ, ಪ್ರತ್ಯಾರೋಪ ಟೀಕೆ ಟಿಪ್ಪಣಿಗಳನ್ನು ಜನರ ಮುಂದಿಡಲಿದ್ದಾರೆ.

ಒಂದೇ ವೇದಿಕೆಯಲ್ಲಿ 2 ಸಮಾವೇಶ: ಅಡಕತ್ತರಿಗೆ ಸಿಲುಕಿದ ಗುತ್ತಿಗೆದಾರ
ಮಹಾರಾಜ ಕಾಲೇಜು ಮೈದಾನದಲ್ಲಿ ಸಜ್ಜಾಗಿರುವ ಒಂದೇ ವೇದಿಕೆಯಲ್ಲಿ ಆ. 9ರಂದು ಕಾಂಗ್ರೆಸ್‌ ಜನಾಂದೋಲನ ಮತ್ತು ಆ. 10ರಂದು ಮೈಸೂರು ಚಲೋ ಪಾದಯಾತ್ರೆ ಸಮಾರೋಪ ನಡೆಯಲಿದ್ದು, ಹಣದ ವಿಚಾರಕ್ಕೆ ಪೆಂಡಾಲ್‌ ಗುತ್ತಿಗೆ ಪಡೆದಿರುವ ಶರೀಫ್ ಇಕ್ಕಟ್ಟಲ್ಲಿ ಸಿಲುಕಿದ್ದಾರೆ.

ಪೆಂಡಾಲ್‌ ಹಾಕಿ ಕೊಡುವಂತೆ ಕಾಂಗ್ರೆಸ್‌ನವರು ಮೊದಲಿಗೆ ತಿಳಿಸಿದ್ದರಿಂದ ತಯಾರಿ ಮಾಡಿಕೊಂಡಿದ್ದೆವು. ಬಳಿಕ ಬಿಜೆಪಿಯವರು, ನಾವೂ ಮರುದಿನ ಅಲ್ಲೇ ಸಮಾವೇಶ ನಡೆಸುತ್ತೇವೆ. ಅದೇ ಪೆಂಡಾಲ್‌ ಹಾಗೂ ವೇದಿಕೆ ಬಿಟ್ಟುಕೊಡಿ ಎಂದು ಕೇಳಿದ್ದರಿಂದ ಒಪ್ಪಿಲ್ಲ. ಆದರೆ ಈಗ ಎರಡೂ ಪಕ್ಷದವರು ಸಂಪೂರ್ಣ ವೆಚ್ಚ ಕೊಡಲು ನಿರಾಕರಿಸುತ್ತಿದ್ದಾರೆ. ಅವರ ಬಳಿಯೂ ಹಣ ಪಡೆದುಕೊಳ್ಳುತ್ತೀರಲ್ಲ, ನಾವೇಕೆ ಸಂಪೂರ್ಣ ವೆಚ್ಚ ಕೊಡಬೇಕು ಎಂದು ಎರಡು ಪಕ್ಷದವರೂ ಪ್ರಶ್ನಿಸುತ್ತಿದ್ದಾರೆ. ಇದರಿಂದ ನನಗೆ ನಷ್ಟವಾಗುತ್ತಿದೆ ಎಂದು ಪೆಂಡಾಲ್‌ ಶರೀಫ್ ಸುದ್ದಿಗಾರರಲ್ಲಿ ಬೇಸರ  ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next