ತಂದೆ ಮಗನ ಸುತ್ತ ನಡೆಯುವ ಕಥಾ ಹಂದರ ಹೊಂದಿರುವ ಸಿನಿಮಾ “ಜನಕ’. ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅಕ್ಟೋಬರ್ 4ರಂದು ತೆರೆಕಾಣುತ್ತಿದೆ. ನವಪ್ರತಿಭೆ ಮನು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜೊತೆಗೆ ಚಿತ್ರದ ನಾಯಕನಾಗಿಯೂ ಅಭಿನಯಿಸಿದ್ದಾರೆ.
ಈ ಚಿತ್ರದಲ್ಲಿ ತಂದೆ ಮತ್ತು ಮಗನ ಸಂಬಂಧ ಮತ್ತು ಪ್ರೀತಿಯ ಕುರಿತು ಹೇಳಲಾಗಿದ್ದು, ಮಗ ತನ್ನ ತಂದೆಯ ಹೆಸರನ್ನು ಉಳಿಸಲು ಮತ್ತು ಅವನ ಕನಸನ್ನು ನನಸಾಗಿಸಲು ಹೋಗಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆಂಬುದನ್ನು ವಿವರಿಸಲಾಗಿದೆ.
ಓಂ ಶಕ್ತಿ ಕ್ರಿಯೇಶನ್ಸ್ ಎ.ಪ್ರೇಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಕುರಿತಂತೆ ಮಾತನಾಡಿದ ನಾಯಕ ಕಮ್ ನಿರ್ದೇಶಕ ಮನು, ನನ್ನ ತಾಯಿಯ ಆಸೆಯಂತೆ ನಾನು ಜನಕ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಅಲ್ಲದೆ ಚಿತ್ರದ ನಾಯಕನಾಗಿಯೂ ಸಹ ಅಭಿನಯಿಸಿದ್ದೇನೆ. ಹೀಗೆ ಮೊದಲ ಚಿತ್ರದಲ್ಲೇ ಎರಡೂ ಕೆಲಸ ನಿಭಾಯಿಸುವುದು ನನಗೆ ಸ್ವಲ್ಪ ಕಷ್ಟವಾಯಿತು ಎನ್ನುತ್ತಾರೆ.
ಚಿತ್ರದಲ್ಲಿ 5 ಹಾಡುಗಳಿದ್ದು, ರಾಘವ ಸುಭಾಷ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಂಪಿ, ಹೊಸಪೇಟೆ, ಮಲ್ಲಾಪುರದ ಸುತ್ತ ಮುತ್ತ ಸುಮಾರು 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಇನ್ನು ಈ ಚಿತ್ರದಲ್ಲಿ ರಕ್ಷಾ ಹಾಗೂ ಶಾಲಿನಿ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸುರೇಶ್ ಬಾಬು, ರಾಜಲಕ್ಷ್ಮೀ ಆನಂದ್ ಈ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ. ರಣಧೀರ ಅವರ ಛಾಯಾಗ್ರಹಣ, ಕೌರವ್ ವೆಂಕಟೇಶ್ ಅವರ ಸಾಹಸ ಸಂಯೋಜನೆ, ಸಲಾಂ ವೀರೋಲಿ ಅವರ ಹಿನ್ನೆಲೆ ಸಂಗೀತ ಜನಕ ಚಿತ್ರಕ್ಕಿದೆ.