ಅದು ಹೈವೇ ರಸ್ತೆ. ಪ್ರತಿ ಅಮಾವಾಸ್ಯೆಯ ದಿನ ಅಲ್ಲಿ ಅಪಘಾತ ನಡೆದು ಒಬ್ಬೊಬ್ಬ ಸಾಯುತ್ತಿರುತ್ತಾನೆ. ಇಂತಹ ಅಪಘಾತದಲ್ಲೇ ಪೊಲೀಸ್ ಇನ್ಸ್‌ಪೆಕ್ಟರ್‌ನ ಸಹೋದರ ಸಾಯುತ್ತಾನೆ. ಮೇಲ್ನೋಟಕ್ಕೆ ಯಾವ ವಾಹನ ಕೂಡಾ ಆತನ ಬೈಕ್‌ಗೆ ಡಿಕ್ಕಿ ಹೊಡೆದಿರುವುದಿಲ್ಲ. ಆದರೆ, ಆತ ಸತ್ತಿರುತ್ತಾನೆ. ನಿಗೂಢ… ಇನ್ಸ್ ಪೆಕ್ಟರ್ ಕುತೂಹಲ ಕೆರಳುತ್ತದೆ. ಅಪಘಾತ ಹಾಗೂ ಸತ್ತ ವ್ಯಕ್ತಿಗಳ ಜಾಡು ಹಿಡಿದು ಹೋಗುವ ಇನ್ಸ್‌ಪೆಕ್ಟರ್‌ಗೆ ಒಂದೊಂದೇ ವಿಚಿತ್ರ ಸತ್ಯಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದು ಈ ವಾರ ತೆರೆಕಂಡಿರುವ “ನೈಟ್ ರೋಡ್’ ಸಿನಿಮಾದ ಒನ್‌ಲೈನ್.
ಕೆಲವು ಸಿನಿಮಾಗಳು ಒಂದೊಳ್ಳೆಯ ಪ್ರಯತ್ನವಾಗಿ ಮೂಡಿಬಂದಿರುತ್ತವೆ. ಆದರೆ, ಸರಿಯಾದ ಪ್ರಚಾರದ ಕೊರತೆಯಿಂದ ಬಂದಿದ್ದು, ಹೋಗಿದ್ದು ಗೊತ್ತಾಗುವುದಿಲ್ಲ. “ನೈಟ್ ರೋಡ್’ ಕೂಡಾ ಒಂದೊಳ್ಳೆಯ ಪ್ರಯತ್ನ. ಒಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಕ್ಕೆ ಇರಬೇಕಾದ ಎಲ್ಲಾ ಗುಣಗಳು ಈ ಚಿತ್ರಕ್ಕಿದೆ.
ನಿರ್ದೇಶಕ ಗೋಪಾಲ್ ಹಳೇಪಾಳ್ಯ ಅವರ ಅಚ್ಚುಕಟ್ಟಾದ ಕೆಲಸ ಈ ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ. ಕಥೆಯ ವಿಚಾರದಲ್ಲೂ ಅಷ್ಟೇ, ರೆಗ್ಯುಲರ್ ಶೈಲಿ ಬಿಟ್ಟು ಹೊಸದನ್ನು ಪ್ರಯತ್ನಿಸಿದ್ದಾರೆ. ಹಿಂದಿನ ಜನ್ಮದ ಪಾಪ ಕರ್ಮಗಳು ಈ ಜನ್ಮದಲ್ಲಿ ಹೇಗೆ ಮನುಷ್ಯನನ್ನು ಸುತ್ತಿಕೊಳ್ಳುತ್ತವೆ ಹಾಗೂ ಪಾಸಿಟಿವ್ -ನೆಗೆಟಿವ್‌ಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದು ಈ ಸಿನಿಮಾದ ಪ್ರಮುಖ ಅಂಶ. ಈ ಅಂಶವನ್ನು ತುಂಬಾ ಸ್ಪಷ್ಟವಾಗಿ ಹಾಗೂ ಗೊಂದಲ ಮುಕ್ತವಾಗಿ ಕಟ್ಟಿಕೊಟ್ಟಿದ್ದಾರೆ.
ಸಾಮಾನ್ಯವಾಗಿ ಬಹುತೇಕ ಹೊಸಬರು ಒಂದಷ್ಟು ಕಾಮಿಡಿ, ಫೈಟ್, ಹಾಡು.. ಸೇರಿಸಿ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾವನ್ನೇ ಕೆಡಿಸಿಬಿಡುತ್ತಾರೆ. ಆದರೆ, “ನೈಟ್ ರೋಡ್’ ಅದರಿಂದ ಮುಕ್ತ. ಆ ನಿಟ್ಟಿನಲ್ಲಿ ಚಿತ್ರಕಥೆಗೆ ಹೆಚ್ಚಿನ ಮಾರ್ಕ್ಸ್ ನೀಡಬಹುದು. ಇಲ್ಲಿನ ಕಥೆಯಲ್ಲಿ ಒಂದಷ್ಟು ಕೊಂಡಿಗಳಿವೆ. ಅದರಲ್ಲಿ ಒಂದು ಕೊಂಡಿ ಮಿಸ್ ಆದರೂ ಕಥೆ ಅಪೂರ್ಣವಾಗುತ್ತದೆ. ಆದರೆ, ಇಲ್ಲಿ ಎಲ್ಲಾ ಕೊಂಡಿಗಳು ಸರಿಯಾಗಿ ಸೇರಿಕೊಂಡು ಕಥೆಯನ್ನು ಬಿಗಿಯಾಗಿಸಿವೆ.
ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ಸಾಗಿದವರು ಧರ್ಮ. ಪೊಲೀಸ್ ಆಫೀಸರ್ ಆಗಿ, ಸಸ್ಪೆನ್ಸ್ ಬೆನ್ನು ಬಿದ್ದ ವ್ಯಕ್ತಿಯಾಗಿ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇವರಿಗೆ ಗೋವಿಂದೇ ಗೌಡ ಸಾಥ್ ನೀಡಿದ್ದಾರೆ. ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವನ್ನು ಇಷ್ಟಪಡುವವರು “ನೈಟ್ ರೋಡ್’ನಲ್ಲಿ ಪಯಣಿಸಬಹುದು.
ರವಿಪ್ರಕಾಶ್ ರೈ