Advertisement

ಬಿಜೆಪಿ, ಕೇಂದ್ರದ ವಿರುದ್ಧ ಮತ್ತೆ ವಾಗ್ಧಾಳಿ

07:05 AM Apr 09, 2018 | |

ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ,
ಬಿಜೆಪಿಯವರು ದೇಶದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದರೆ, ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಪಕ್ಷಗಳ
ನಾಯಕರನ್ನು ನಾಯಿ, ಬೆಕ್ಕುಗಳಿಗೆ ಹೋಲಿಸುತ್ತಾರೆ. ಇಂಥವರಿಗೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನತೆ ತಕ್ಕ
ಪಾಠ ಕಲಿಸಬೇಕೆಂದು ಹೇಳಿದ್ದಾರೆ.

Advertisement

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭವನ್ನು ಭಾನುವಾರ ಅರಮನೆ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಅಮಿತ್‌ ಶಾ ಅವರು ಪ್ರತಿಪಕ್ಷ ನಾಯಕರನ್ನು ನಾಯಿ, ಬೆಕ್ಕುಗಳಿಗೆ ಹೋಲಿಸಿದ್ದಾರೆ. ಸುದೀರ್ಘ‌ ಇತಿಹಾಸ ಹೊಂದಿರುವ ಕಾಂಗ್ರೆಸ್‌ನ ಯಾವ ನಾಯಕರೂ ಇದುವರೆಗೆ ಇಂತಹ ಹೇಳಿಕೆ ನೀಡಿಲ್ಲ. ಪ್ರತಿಪಕ್ಷ ನಾಯಕರನ್ನು ಗೌರವಿಸುವ ಗುಣವೂ ಬಿಜೆಪಿಯವರಿಗೆ ಇಲ್ಲವೆಂದು ಕಿಡಿ ಕಾರಿದರು.

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಎಂದು ಮಾತನಾಡುತ್ತಾರೆ. ಈ ರೀತಿ ಮಾತನಾಡುವಾಗ ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಮೋದಿ ಅವರ ಪಕ್ಕದಲ್ಲೇ ಕುಳಿತಿರುತ್ತಾರೆ. ತನ್ನಲ್ಲಿದ್ದ 50 ಕೋಟಿ ರೂ.ಅನ್ನು ಮೂರು ತಿಂಗಳಲ್ಲಿ 80 ಸಾವಿರ ಕೋಟಿ ರೂ.ಗೆ ಹೆಚ್ಚಿಸಿಕೊಂಡ ಅಮಿತ್‌ ಶಾ ಪುತ್ರ ಜೈ ಶಾ ಬಗ್ಗೆ ಅವರು ಚಕಾರವೆತ್ತುವುದಿಲ್ಲ. ಇದು ಭ್ರಷ್ಟಾಚಾರದ ಕುರಿತಂತೆ ಪ್ರಧಾನಿಯವರ ಇಬ್ಬಗೆ ಧೋರಣೆಯಲ್ಲವೇ ಎಂದು ಪ್ರಶ್ನಿಸಿದರು.

ವಿಶ್ವ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕುಸಿದಿದೆ. ಕಚ್ಚಾ ತೈಲದ ಬ್ಯಾರಲ್‌ ಬೆಲೆ ಅಂತಾರಾಷ್ಟ್ರೀಯ
ಮಾರುಕಟ್ಟೆಯಲ್ಲಿ 110 ಡಾಲರ್‌ನಿಂದ 63 ಡಾಲರ್‌ಗೆ ಕುಸಿದಿದೆ.

ಆದರೆ, ದೇಶದಲ್ಲಿ ಮಾತ್ರ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುತ್ತಲೇ ಇದೆ. ಇನ್ನೊಂದೆಡೆ ಪ್ರಧಾನಿ ಮೋದಿ ದಲಿತರ ಬಗ್ಗೆ
ಮಾತನಾಡುತ್ತಾರೆ. ಆದರೆ, ರೋಹಿತ್‌ ವೇಮುಲಾ ಸಾವು, ಉತ್ತರ ಪ್ರದೇಶ, ಬಿಹಾರ್‌ನಲ್ಲಿ ದಲಿತರ ಹತ್ಯಾಕಾಂಡ ನಡೆಯುತ್ತಿದ್ದರೂ ಅವರು ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಸವಣ್ಣನ ತತ್ವದಂತೆ ಕಾಂಗ್ರೆಸ್‌: ಬಸವಣ್ಣನ ತತ್ವದಲ್ಲಿಯೇ ಕಾಂಗ್ರೆಸ್‌ ನಡೆಯುತ್ತಿದ್ದು, ಅದನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕರೆಲ್ಲ ಒಂದುಗೂಡಿದ್ದಾರೆ. ಬಿಜೆಪಿಯನ್ನು ಸೋಲಿಸಲು ಎಲ್ಲರೂ ಕೈಜೋಡಿಸಿದ್ದಾರೆ. ರಾಜ್ಯದಲ್ಲಿ ವಿಚಾರಗಳ ಸಂಘರ್ಷ ನಡೆದಿದ್ದು, ಬಿಜೆಪಿಯವರ ಸಮಾಜ ಒಡೆಯುವ ವಿಚಾರಧಾರೆಗೆ
ಜನಬೆಂಬಲವಿಲ್ಲ. ಎಲ್ಲ ಜನರನ್ನು ಒಗ್ಗೂಡಿಸುವ ಕಾಂಗ್ರೆಸ್‌ ವಿಚಾರಧಾರೆಗೆ ಜನಬೆಂಬಲ ಸಿಕ್ಕಿದೆ. ಬಸವಣ್ಣ, ಕೆಂಪೇಗೌಡರ
ರೀತಿಯಲ್ಲೇ ಕಾಂಗ್ರೆಸ್‌ ಮುಂದುವರಿದಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್‌, ಎಸ್‌.ಆರ್‌.ಪಾಟೀಲ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿ ಹಲವಾರು ನಾಯಕರು ಉಪಸ್ಥಿತರಿದ್ದರು. ರಾಹುಲ್‌ ಗಾಂಧಿಯವರ ಭಾಷಣವನ್ನು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಅನುವಾದ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next