ಉತ್ತರಾಖಂಡ್: ಇಲ್ಲಿನ ಪೂರ್ಣಗಿರಿ ಜನಶತಾಬ್ದಿ ರೈಲು ತಾಂತ್ರಿಕ ದೋಷದಿಂದಾಗಿ 20 ಕಿಲೋಮೀಟರ್ ಗೂ ಹೆಚ್ಚು ದೂರ ಹಿಮ್ಮುಖವಾಗಿ ಚಲಿಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರಿ ಪ್ರಮಾಣದ ಅನಾಹುತವೊಂದು ತಪ್ಪಿದೆ.
ರೈಲು ಹಿಮ್ಮುಖವಾಗಿ ಚಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಘಟನೆಯ ಬಳಿಕ ರೈಲಿನ ಲೊಕೊ ಪೈಲಟ್ ಹಾಗೂ ಸಿಬಂದಿಯನ್ನು ಇಲಾಖೆ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ಈ ರೈಲು ದೆಹಲಿಯಿಂದ ತನಕ್ ಪುರಕ್ಕೆ ತೆರಳುತ್ತಿತ್ತು ಎನ್ನಲಾಗಿದ್ದು, ರೈಲಿನಲ್ಲಿ ಸುಮಾರು 60 ರಿಂದ 70 ಜನರು ಪ್ರಯಾಣ ಮಾಡುತ್ತಿದ್ದರು. ಘಟನೆ ಬಳಿಕ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಚಕ್ರಾಪುರಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದು, ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ತಮ್ಮ ಟ್ವೀಟ್ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿರುವ ಈಶಾನ್ಯ ರೈಲ್ವೆ ವಿಭಾಗ, ರೈಲು ಚಲಿಸುತ್ತಿದ್ದ ವೇಳೆ ಖತಿಮಾ- ತನಕ್ಪುರ್ ವಿಭಾಗದ ಬಳಿ ಜಾನುವಾರುಗಳು ಓಡುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ರೈಲನ್ನು ನಿಲ್ಲಿಸಲಾಗಿದೆ. ಈ ಸಮಯದಲ್ಲಿ ರೈಲು ಯಾವುದೇ ವಿಧವಾದ ಅಪಘಾತಕ್ಕೆ ಒಳಗಾಗಿಲ್ಲ ಹಾಗೂ ಎಲ್ಲಾ ಪ್ರಯಾಣಿಕರನ್ನು ಅವರು ತೆರಳಬೇಕಿದ್ದ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಪಶ್ಚಿಮಬಂಗಾಳ; ಬಿಜೆಪಿ ಸಂಸದ ಸಿಂಗ್ ನಿವಾಸದ ಸಮೀಪ ಬಾಂಬ್ ದಾಳಿ, ಆಯೋಗಕ್ಕೆ ದೂರು
ಈ ವಿಚಾರದ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ್ ಸಿಂಗ್, ರೈಲು ಚಲಿಸುತ್ತಿದ್ದ ವೇಳೆ ಜಾನುವಾರುಗಳು ಅಡ್ಡ ಬಂದ ಪರಿಣಾಮ ಜಾನುವಾರುಗಳನ್ನು ರಕ್ಷಿಸಲು ರೈಲನ್ನು ನಿಲ್ಲಿಸಲಾಗಿದೆ. ಆದರೆ ಇದ್ದಕ್ಕಿದ್ದಂತೆ ರೈಲು ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ ಎಂದು ಹೇಳಿದ್ದಾರೆ.
ಕಳೆದ ಒಂದು ವಾರದಿಂದ ಉತ್ತರಾಖಂಡದಲ್ಲಿ ಭಾರಿ ರೈಲು ಅಪಘಾತ ತಪ್ಪಿರುವುದರಲ್ಲಿ ಇದು ಎರಡನೆ ಪ್ರಕರಣವಾಗಿದ್ದು , ಕಳೆದ ಶನಿವಾರ ದೆಹಲಿ- ಡೆಹ್ರಾಡೂನ್ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.