Advertisement

ಬಳ್ಳಾರಿ ಜೈಲು ಹಕ್ಕಿಗಳಿಗೆ ಜನ್‌ಧನ್‌ ಬಲ!

06:00 AM Nov 22, 2018 | Team Udayavani |

ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಜನ್‌ಧನ್‌ ಯೋಜನೆ ಜೈಲುವಾಸಿಗಳಿಗೆ ಬಲ ತಂದುಕೊಟ್ಟಿದೆ!  ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. 

Advertisement

ಇಲ್ಲಿನ ಸಜಾಬಂಧಿ ಕೈದಿಗಳಿಗೆ ಬ್ಯಾಂಕ್‌ ಖಾತೆ ಕೊಡಿಸುವ ಜತೆಗೆ ಜೈಲಿನಲ್ಲೇ ದುಡಿದ ಕೂಲಿ ಹಣವನ್ನೂ ನೇರವಾಗಿ ಖಾತೆಗೆ ಜಮಾ ಮಾಡುವಂತೆಯೂ ಮಾಡಲಾಗಿದೆ. ಇದಕ್ಕಾಗಿ ಕಾರಾಗೃಹದಲ್ಲೇ ನೋಂದಾಯಿಸಲಾಗಿದ್ದ ಆಧಾರ್‌ ಕಾರ್ಡ್‌ ಬಳಸಿಕೊಂಡು ಸಿಂಡಿಕೇಟ್‌ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಮಾಡಿಕೊಡಲಾಗಿದೆ. ಕೈದಿಗಳು ಜೈಲಲ್ಲಿ ಇರುವವರೆಗೂ ಎಟಿಎಂ ಕಾರ್ಡ್‌ ನೀಡಲ್ಲ. ಬಿಡುಗಡೆಯಾದ ಬಳಿಕ ಅಧೀಕ್ಷಕರೇ ಬ್ಯಾಂಕ್‌ನವರಿಗೆ ಪತ್ರ ಬರೆದು ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಿದ್ದಾರೆ.

ದಿನಕ್ಕೆ 100 ರೂ. ಭತ್ಯೆ:
ನಗರದ ಕೇಂದ್ರ ಕಾರಾಗೃಹದಲ್ಲಿ 411 ಸಜಾಬಂಧಿ, 187 ವಿಚಾರಣಾಧೀನ ಕೈದಿ ಸೇರಿದಂತೆ ಒಟ್ಟು 598 ಕೈದಿಗಳು ಇದ್ದಾರೆ. ಇದರಲ್ಲಿ ಸುಮಾರು 100 ರಿಂದ 112 ಕೈದಿಗಳು ಕಾರಾಗೃಹದಲ್ಲಿ ವಿವಿಧ ಕೆಲಸ ಮಾಡುತ್ತಾರೆ. ಈ ಕೈದಿಗಳಿಗೆ ದಿನಕ್ಕೆ 100 ರೂ. ಭತ್ಯೆ ನೀಡಲಾಗುತ್ತಿದ್ದು, ಈ ಹಣ ಇದೀಗ ನೇರವಾಗಿ ಕೈದಿಗಳ ಉಳಿತಾಯ ಖಾತೆಯಲ್ಲಿ ಜಮಾಗೊಳ್ಳಲಿದೆ. ಈ ಹಣವನ್ನು ಅಗತ್ಯವಿದ್ದಾಗ ಮಕ್ಕಳ ವಿದ್ಯಾಭ್ಯಾಸಕ್ಕೆ ಇನ್ನಿತರೆ ಅನಿವಾರ್ಯ ಕೆಲಸಗಳಿಗೆ ಕಾರಾಗೃಹದ ಅಧೀಕ್ಷಕರಿಂದ ಒಪ್ಪಿಗೆ ಮೇರೆಗೆ ಪಡೆಯಬಹುದು.

ಈ ಮೊದಲು ಪುಸ್ತಕದಲ್ಲಿ ಕೈದಿಗಳಿಂದ ಸಹಿ ಪಡೆದು ಹಣ ನೀಡಲಾಗುತ್ತಿತ್ತು. ಈ ಪದ್ಧತಿ ದುರುಪಯೋಗಕ್ಕೂ ಅವಕಾಶ ನೀಡುತ್ತಿತ್ತು. ಇದೀಗ ಬ್ಯಾಂಕ್‌ ಖಾತೆಗೆ ಜಮಾಗೊಳ್ಳುವುದರಿಂದ ಈ ಪದ್ಧತಿಗೆ ಬ್ರೇಕ್‌ ಬೀಳುವ ಜತೆಗೆ ಆಡಳಿತದಲ್ಲಿ ಪಾರದರ್ಶಕತೆ ಇದೆ ಎಂಬುದನ್ನು ಸೂಚಿಸುತ್ತದೆ ಎನ್ನುತ್ತಾರೆ ಅಧೀಕ್ಷಕ ಪಿ.ರಂಗನಾಥ್‌.

ಆಧಾರ್‌ ಕೇಂದ್ರ:
ಕೇಂದ್ರ ಕಾರಾಗೃಹದಲ್ಲೇ ಆಧಾರ್‌ ನೋಂದಣಿ ಕೇಂದ್ರವಿದ್ದು, ಜೈಲಿಗೆ ಬರುವ ಸಜಾಬಂಧಿ ಕೈದಿಗಳಿಗೆ ಮೊದಲು ಆಧಾರ್‌ ನೋಂದಣಿ ಮಾಡಿಸಲಾಗುತ್ತದೆ. ಕಾರ್ಡ್‌ನಲ್ಲಿ ಕಾರಾಗೃಹದ ವಿಳಾಸದ ಬದಲಿಗೆ ಕೈದಿಗೆ ಸಂಬಂಧಿಸಿದ ಊರಿನ ವಿಳಾಸವನ್ನು ನಮೂದಿಸಲಾಗಿರುತ್ತದೆ. ಜೈಲಿನಿಂದ ಬಿಡುಗಡೆಯಾದ ಮೇಲೂ ಈ ಆಧಾರ್‌ ಸಂಖ್ಯೆ ಬಳಸಿಕೊಂಡು ನರೇಗಾ ಸೇರಿದಂತೆ ಬೇರೆ ರೀತಿಯ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. 

Advertisement

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿನ ಸಜಾಬಂಧಿ ಕೈದಿಗಳಿಗೆ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಜನ್‌ಧನ್‌ ಯೋಜನೆಯಡಿ ಜೀರೊ ಬ್ಯಾಲೆನ್ಸ್‌ ಉಳಿತಾಯ ಖಾತೆ ತೆರೆಯಲಾಗಿದೆ. ಅವರ ಕೂಲಿಯ ಹಣವನ್ನೂ ಇದಕ್ಕೆ ಜಮಾ ಮಾಡಲಾಗುತ್ತದೆ. ಹಿಂದೆ ಆಗುತ್ತಿದ್ದ ದುರ್ಬಳಕೆಯನ್ನು ತಪ್ಪಿಸಲು ಇದು ಸಹಕಾರಿಯಾಗಿದೆ.
– ಪಿ.ರಂಗನಾಥ್‌, ಅಧೀಕ್ಷಕರು, ಕೇಂದ್ರ ಕಾರಾಗೃಹ, ಬಳ್ಳಾರಿ

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next