ಶ್ರೀನಗರ್: ಪೊಲೀಸ್ ಠಾಣಾಧಿಕಾರಿಯೇ ಮಹಿಳೆಯೊಬ್ಬಳನ್ನು ಬಲವಂತವಾಗಿ ಬೆತ್ತಲೆಗೊಳಿಸಿ ವಿಚಿತ್ರ ರೀತಿಯಲ್ಲಿ ಚಿತ್ರಹಿಂಸೆ ನೀಡಿರುವ ಘಟನೆ ಜಮ್ಮುನಿನಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮಹಿಳೆಯ ಆರೋಪದ ಪ್ರಕಾರ, ಜಮ್ಮು ಠಾಣಾಧಿಕಾರಿ ಮಹಿಳೆಯ ಗುಪ್ತಾಂಗದೊಳಕ್ಕೆ ಬಿಯರ್ ಬಾಟಲಿ ಹಾಗೂ ಮೆಣಸಿನ ಪುಡಿಯನ್ನು ತುರುಕಿರುವುದಾಗಿ ದೂರಿದ್ದಾರೆ. ಸಿಎನ್ಎನ್, ನ್ಯೂಸ್ 18 ಜೊತೆ ಮಾತನಾಡಿರುವ ಸಂತ್ರಸ್ತೆ ಪರ ವಕೀಲರು, ಇದು ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವನ್ನೇ ಹೋಲುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಜಮ್ಮುವಿನ ಕಾನ್ಚಾಕ್ ಪ್ರದೇಶದಲ್ಲಿನ ದಂಪತಿಗಳ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ 25ರ ಹರೆಯದ ಮಹಿಳೆ ಮೇಲೆ ಕಳ್ಳತನದ ಸುಳ್ಳು ಆರೋಪ ಹೊರಿಸಲಾಗಿತ್ತು ಎಂದು ವರದಿ ಹೇಳಿದೆ.
ತನ್ನ ಮೇಲೆ ದಾಖಲಾದ ದೂರಿನಿಂದಾಗಿ ಕಾನಾಚಾಲ್ ಪೊಲೀಸ್ ಠಾಣೆಯ ಹಿರಿಯ ಹೆಡ್ ಕಾನ್ಸ್ ಸ್ಟೇಬಲ್ ರಾಕೇಶ್ ಶರ್ಮಾ ತನಗೆ ಒಂದು ವಾರ ಕಾಲ ಕಿರುಕುಳ ಕೊಟ್ಟಿರುವುದಾಗಿ ಆಕೆ ದೂರಿದ್ದಾರೆ. ಕಸ್ಟಡಿಯಲ್ಲಿದ್ದಾಗ ಆಕೆಯ ಊಟ, ತಿಂಡಿ ಸೇರಿದಂತೆ ಕುಡಿಯಲು ನೀರೂ ಕೂಡಾ ಕೊಟ್ಟಿರಲಿಲ್ಲವಂತೆ. ಆಕೆ ಕೊನೆಗೆ ಕುಡಿಯಲು ನೀರು ಕೊಡಿ ಎಂದಾಗ, ನಿನಗೆ ನೀರು ಕೊಡಲ್ಲ, ಮೂತ್ರ ಕುಡಿ ಎಂದು ಹೇಳಿರುವುದಾಗಿ ಚಾನೆಲ್ ವೊಂದರ ಜೊತೆ ಮಾತನಾಡುತ್ತ ತಿಳಿಸಿದ್ದಾಳೆ.
ಸುಳ್ಳು ದೂರಿನಿಂದಾಗಿ ತಾಯಿ, ಪತಿ ಹಾಗೂ ಮಗುವಿಗೂ ಪೊಲೀಸರು ಹೊಡೆದಿರುವುದಾಗಿ ಹೇಳಿದ್ದಾಳೆ. ಬಂಧಿತ ಸಂತ್ರಸ್ತೆ ಮೇ 6ರಂದು ಜಾಮೀನು ಸಿಕ್ಕಿತ್ತು.