ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶನಿವಾರ (ಆ.10) ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದಾರೆ. ಕೋಕರ್ನಾಗ್ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ.
ಎನ್‌ಕೌಂಟರ್ ನಲ್ಲಿ, ಹವಾಲ್ದಾರ್ ದೀಪಕ್ ಕುಮಾರ್ ಯಾದವ್ ಮತ್ತು ಲ್ಯಾನ್ಸ್ ನಾಯಕ್ ಪ್ರವೀಣ್ ಶರ್ಮಾ ಹುತಾತ್ಮರಾದರು. ಮತ್ತೊಂದೆಡೆ, ಗುಂಡಿನ ಚಕಮಕಿಯಲ್ಲಿ ಶನಿವಾರ ಗಾಯಗೊಂಡ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
“ಭಾರತೀಯ ಸೇನೆಯು ತನ್ನ ಆಳವಾದ ಸಂತಾಪ ಸಲ್ಲಿಸುತ್ತದೆ. ದುಃಖದ ಈ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ದೃಢವಾಗಿ ನಿಂತಿದೆ” ಎಂದು ಭಾರತೀಯ ಸೇನೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಗುಂಡಿನ ಚಕಮಕಿಯ ಒಂದು ದಿನದ ನಂತರ ಅಂದರೆ ಭಾನುವಾರ (ಆ.11) ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ತಮ್ಮ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪುನರಾರಂಭಿಸಿದವು.
19 ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಪಡೆಗಳ ಹೆಚ್ಚುವರಿ ಪಡೆಗಳನ್ನು ಸಜ್ಜುಗೊಳಿಸಿರುವುದರಿಂದ ಕೊಕರ್ನಾಗ್ ನ ಅಹ್ಲಾನ್ ಗಡೋಲ್ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ದಟ್ಟವಾದ ಕಾಡಿನೊಳಗೆ ಕನಿಷ್ಠ 15 ಕಿಲೋಮೀಟರ್ ಗಳಷ್ಟು ನಡೆಯುತ್ತಿರುವ ಕಾರ್ಯಾಚರಣೆಯು ಭಾರೀ ಮಳೆ ಮತ್ತು ಕಳಪೆ ಗೋಚರತೆಯಿಂದ ನಿಧಾನಗೊಂಡಿದೆ.