ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಗೆ ಹೊಂದಿಕೊಂಡು ಇರುವ ಗ್ರಾಮಗಳಲ್ಲಿನ ಜನರಿಗೆ ಸಶಸ್ತ್ರ ತರಬೇತಿ ನೀಡಲು ಮುಂದಾಗಿದೆ. ಜತೆಗೆ ಗ್ರಾಮ ರಕ್ಷಣ ಸಮಿತಿಗಳನ್ನೂ ಮತ್ತೆ ಪುನಃ ಸ್ಥಾಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಈ ಅಂಶ ಪ್ರಸ್ತಾವ ಮಾಡಿದ್ದರು.
ಅದಕ್ಕೆ ಪೂರಕವಾಗಿ ಸಿಆರ್‌ಪಿಎಫ್ನ ಯೋಧರು ಹಾಗೂ ಅಧಿಕಾರಿಗಳು ಜಮ್ಮುವಿನ ಸುಂದರ್‌ಬನಿ ಎಂಬಲ್ಲಿ ಸ್ಥಳೀಯರಿಗೆ ರೈಫಲ್ ಬಳಕೆ ಮತ್ತು ಗುಂಡು ಹಾರಿಸುವುದರ ಬಗ್ಗೆ ತರಬೇತಿ ನೀಡಲು ಆರಂಭಿಸಿದ್ದಾರೆ. ಅಂದ ಹಾಗೆ ಈ ಸ್ಥಳ ಜಮ್ಮು ನಗರದಿಂದ 100 ಕಿಮೀ ದೂರ ಇದೆ. ಜಮ್ಮು ಮತ್ತು ಕಾಶ್ಮೀರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, 2022 ಡಿಸೆಂಬರ್‌ನಿಂದಲೇ ಪ್ರಾಯೋಗಿಕವಾಗಿ ಜಮ್ಮು, ಪೂಂಛ್, ರಜೌರಿ, ಸಾಂಬಾ, ದೋಡಾ, ಕಿಶ್ವರ್ ಗಳಲ್ಲಿ ತರಬೇತಿ ಶುರುವಾಗಿದೆ. 1995ರಿಂದ ಕಣಿವೆ ರಾಜ್ಯದಲ್ಲಿ ಉಗ್ರಗಾಮಿಗಳ ಹಾವಳಿ ಶುರುವಾದ ಬಳಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ನಾಗರಿಕರ ಸಂಖ್ಯೆ 30 ಸಾವಿರ ದಾಟಿದೆ ಎಂದು ಅವರು ಹೇಳಿದ್ದಾರೆ.
ರಜೌರಿ ಜಿಲ್ಲೆಯಲ್ಲಿ ಒಂದರಲ್ಲಿಯೇ 683 ಗ್ರಾಮ ರಕ್ಷಣ ಸಮಿತಿಗಳ ಪೈಕಿ 500ಕ್ಕೆ ಮರು ಜೀವ ನೀಡಲಾಗಿದೆ. ಪೂಂಛ್ ನಲ್ಲಿ ನೋಂದಾಯಿತ 120ರ ಪೈಕಿ 100ನ್ನು ಮತ್ತೆ ಪುನರ್ ಸಂಘಟಿಸಲು ಕ್ರಮ ಕೈಗೊಳ್ಳಲಾಗಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರ ಬೇಕು: ನಿವೃತ್ತ ಯೋಧರೊಬ್ಬರು ಹೇಳುವ ಪ್ರಕಾರ ಸರಕಾರದ ವತಿಯಿಂದ ಶಸ್ತ್ರಾಸ್ತ್ರ ತರಬೇತಿಯ ಜತೆಗೆ ಅತ್ಯಾಧುನಿಕ ಬಂದೂ ಕುಗಳನ್ನೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.