Advertisement

ಕಣಿವೆಗೆ ಸರ್ಪಗಾವಲು; ಸೇನೆ ಸರ್ವಸನ್ನದ್ಧ

02:53 AM Aug 05, 2019 | Team Udayavani |

ಶ್ರೀನಗರ: ಭಯೋತ್ಪಾದಕರ ದಾಳಿ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೂ ಅದಕ್ಕೆ ಪೂರಕವಾಗಿ ಜಮ್ಮು – ಕಾಶ್ಮೀರದ ಕೆಲವೆಡೆ ನುಸುಳುಕೋರರ ಗುಂಪುಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿರುವ ಕಾರಣ, ಕಣಿವೆ ರಾಜ್ಯದಲ್ಲಿ ಕೈಗೊಳ್ಳಲಾ ಗಿದ್ದ ಬಿಗಿಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

Advertisement

ಪ್ರಮುಖ ತಾಣಗಳು, ಕಟ್ಟಡಗಳು ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಮತ್ತಷ್ಟು ಭದ್ರತೆ ಒದಗಿಸಲಾಗಿದೆ. ಗಡಿಯಲ್ಲಿ ಪಾಕಿಸ್ಥಾನ ಸೇನೆಯ ಪುಂಡಾಟಿಕೆಯನ್ನೂ ಮೊದಲೇ ಊಹಿ ಸಲಾಗಿದ್ದು, ಅದಕ್ಕೂ ಸರ್ವರೀತಿಯಲ್ಲಿ ಸೇನೆಯನ್ನು ಸನ್ನದ್ಧ ಗೊಳಿಸಲಾಗಿದೆ. ಶ್ರೀನಗರದ ಎಲ್ಲಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಆ ರಸ್ತೆಯ ಮೂಲಕ ಸಾಗುವ ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಕಳುಹಿಸಲಾಗುತ್ತಿದೆ.

ಮತ್ತೂಂದೆಡೆ, ರಾಜ್ಯದಲ್ಲಿರುವ ವಸತಿ ಸೌಲಭ್ಯವುಳ್ಳ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ತಾವಿರುವ ಹಾಸ್ಟೆಲ್ಗಳನ್ನು ಆದಷ್ಟು ಬೇಗನೇ ತೊರೆದು ತಮ್ಮ ಊರುಗಳಿಗೆ ತೆರಳುವಂತೆ ಸೂಚಿಸಿವೆ.

ತವರಿನ ಕಡೆಗೆ ವಿದ್ಯಾರ್ಥಿಗಳು: ಶ್ರೀನಗರದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ತರಗತಿಗಳು ಅನಿರ್ದಿಷ್ಟಾವಧಿವರೆಗೆ ರದ್ದಾದ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ತಮ್ಮ ತವರು ರಾಜ್ಯಗಳತ್ತ ಮುಖ ಮಾಡಿದ್ದಾರೆ. ತರಗತಿಗಳು ರದ್ದಾದ ಹಿನ್ನೆಲೆಯಲ್ಲಿ ಶನಿವಾರದಿಂದಲೇ ತಮ್ಮ ವಾಸ್ತವ್ಯ ತೆರವುಗೊಳಿಸಲು ಆರಂಭಿಸಿದ್ದರು.

ಮಾರುಕಟ್ಟೆಗೆ ನುಗ್ಗಿದ ಜನತೆ: ಬಿಗಿಭದ್ರತೆ ಮತ್ತಷ್ಟು ಹೆಚ್ಚಳವಾಗುತ್ತಲೇ, ಭಾರೀ ಕಳವಳಗೊಂಡಿರುವ ಕಣಿವೆ ರಾಜ್ಯದ ಜನತೆ, ಮಾರುಕಟ್ಟೆಗೆ ದಾಂಗುಡಿಯಿಟ್ಟು ಅಗತ್ಯ ವಸ್ತುಗಳ ಜೋರು ಖರೀದಿಯಲ್ಲಿ ಮುಳುಗಿದ್ದಾರೆ. ಗುರು ವಾರ ರಾತ್ರಿಯೇ ರಾಜ್ಯದಲ್ಲಿ ಹೆಚ್ಚುವರಿ ಸೇನೆ ಜಮಾವಣೆ ಗೊಂಡಿದ್ದ ಹಿನ್ನೆಲೆಯಲ್ಲಿ ಆಗಲೂ ಮಾರುಕಟ್ಟೆ ಯಿಂದ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದ ಜನರು, ರವಿವಾರ ಮತ್ತಷ್ಟು ಭಯಭೀತರಾಗಿ ಅಗತ್ಯವಸ್ತುಗಳನ್ನು ಕೊಳ್ಳಲು ಮುಗಿಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿ ದ್ದಾರೆ.

Advertisement

ಮತ್ತೆ ಮೂರು ಕಡೆ ವಿಫ‌ಲ: ಕೇರನ್‌ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ನುಸುಳುಕೋರರ ತಂಡವನ್ನು ಹೊಡೆದುರುಳಿಸಿದ ಭಾರತೀಯ ಸೇನೆ, ಭಾರತ-ಪಾಕಿಸ್ಥಾನ ಗಡಿ ರೇಖೆ ಬಳಿಯ ಗುರೇಜ್‌, ಮಾಚಿಲ್ ಹಾಗೂ ತಂಗಧಾರ್‌ನಲ್ಲಿ ಇಂಥ ಪ್ರಯತ್ನಗಳನ್ನು ವಿಫ‌ಲಗೊಳಿಸಿದೆ ಎಂದು ಹೇಳಿದೆ. ಕಳೆದೊಂದು ವಾರದಲ್ಲಿ ಪಾಕಿಸ್ಥಾನ ಯೋಧರು ಹಾಗೂ ಉಗ್ರರ ತಂಡಗಳ ಒಳನುಸುಳುವಿಕೆಯ ನಾಲ್ಕು ಪ್ರಯತ್ನಗಳನ್ನು ಹತ್ತಿಕ್ಕಲಾಗಿದೆ ಎಂದು ಸೇನೆ ತಿಳಿಸಿದೆ.

ಟಿಕೆಟ್ ಪ್ರಯಾಣ ದರ ಇಳಿಕೆ

ಅಮರನಾಥ ಯಾತ್ರೆ ಏಕಾಏಕಿ ರದ್ದಾದ ಹಿನ್ನೆಲೆಯ ಅನಂತರ ಪ್ರಯಾಣಿಕರಿಗೆ ಉಂಟಾಗಿದ್ದ ಕಿರಿಕಿರಿಯನ್ನು ಕೊಂಚ ಮಟ್ಟಿಗೆ ತಗ್ಗಿಸಲು ಏರ್‌ ಇಂಡಿಯಾ ಕ್ರಮ ಕೈಗೊಂಡಿದೆ. ಶ್ರೀನಗರ ವಿಮಾನ ನಿಲ್ದಾಣದಿಂದ ವಿವಿಧ ರಾಜ್ಯಗಳಿಗೆ ತಾನು ನೀಡುವ ವೈಮಾನಿಕ ಸೇವಾ ದರವನ್ನು ಗರಿಷ್ಠ 7,000 ರೂ.ಗಳಿಗೆ ಏರ್‌ ಇಂಡಿಯಾ ನಿಗದಿಗೊಳಿಸಿದೆ. ಯಾತ್ರೆ ರದ್ದಾಗ ಕೂಡಲೇ, ಶ್ರೀನಗರ ವಿಮಾನ ನಿಲ್ದಾಣದಿಂದ ವಿವಿಧ ರಾಜ್ಯಗಳಿಗೆ ನೀಡಲಾಗುವ ವಿಮಾನ ಸೇವೆಗಳ ಟಿಕೆಟ್ ದರ ಗಣನೀಯವಾಗಿ ಹೆಚ್ಚಾಗಿದ್ದವು. ಈಗ ದಿಲ್ಲಿ-ಶ್ರೀನಗರ ನಡುವಿನ ಪ್ರಯಾಣಕ್ಕೆ 6,715 ರೂ., ದಿಲ್ಲಿ- ಶ್ರೀನಗರ ಪ್ರಯಾಣದ ಟಿಕೆಟ್‌ಗೆ 6,899 ರೂ.ಗಳನ್ನು ನಿಗದಿಪಡಿಸಲಾಗಿದ್ದು, ಈ ದರಗಳು ಆ. 15ರವರೆಗೆ ಚಾಲ್ತಿಯಲ್ಲಿ ಇರಲಿವೆ” ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಇಸ್ಲಾಮಿಕ್‌ ಸಂಘಟನೆಗೆ ಸೂಚನೆ

ಪಾಕ್‌ ವಿದೇಶಾಂಗ ಸಚಿವ ಶಾ ಮೆಹ್ಮೂದ್‌ ಖುರೇಷಿ ಅವರು, ಕಾಶ್ಮೀರದ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸುವಂತೆ ಪಾಕಿಸ್ಥಾನದ ಆರ್ಗನೈಸೇಷನ್‌ ಆಫ್ ಇಸ್ಲಾಮಿಕ್‌ ಕೊ-ಆಪರೇಟಿವ್‌ ಸೊಸೈಟಿಯ ಮಹಾ ಕಾರ್ಯದರ್ಶಿ ಡಾ. ಯೂಸುಫ್ ಅಹ್ಮದ್‌ ಅಲ್-ಒಥಾಯ್‌ಮಿನ್‌ ಅವರಿಗೆ ತಾಕೀತು ಮಾಡಿದ್ದಾರೆ. ಇದಕ್ಕೆ ಡಾ. ಯೂಸುಫ್ ಸಹ ಒಪ್ಪಿದ್ದಾರೆ ಎನ್ನಲಾಗಿದೆ.

ಅಶಾಂತಿ ಸೃಷ್ಟಿಸುವುದು ಬೇಡ: ಫಾರೂಕ್‌ ಮನವಿ

ಕಾಶ್ಮೀರದಲ್ಲಿ ಅಶಾಂತಿಗೆ ಕಾರಣವಾಗುವಂಥ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು ಭಾರತ ಮತ್ತು ಪಾಕಿಸ್ಥಾನ ಸರಕಾರಗಳನ್ನು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ನಾಯಕ ಫಾರೂಕ್‌ ಅಬ್ದುಲ್ಲಾ ಮನವಿ ಮಾಡಿದ್ದಾರೆ. ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಮನೆಯಲ್ಲಿ ರವಿವಾರ ಸಂಜೆ ನಡೆದ ಸರ್ವಪಕ್ಷಗಳ ಸದಸ್ಯರ ಸಭೆಯ ಅನಂತರ ಮಾತನಾಡಿದ ಅವರು, ಕಣಿವೆ ರಾಜ್ಯದ ಜನರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರಲ್ಲದೆ, ಜಮ್ಮು ಕಾಶ್ಮೀರದ ಎಲ್ಲರಾಜಕೀಯ ನಾಯಕರು ಒಗ್ಗೂಡಿದ್ದಾರೆ. ರಾಜ್ಯದ ವಿಶೇಷ ಸ್ಥಾನಮಾನ ಕಿತ್ತುಕೊಳ್ಳುವಂಥ ಯಾವುದೇ ನಡೆಯನ್ನು ಒಗ್ಗಟ್ಟಿನಿಂದ ಎದುರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ರಾಜ್ಯದಲ್ಲಿನ ಬಿಗುವಿನ ಪರಿಸ್ಥಿತಿ ಹೀಗೇ ಮುಂದುವರಿದರೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಮನವರಿಕೆ ಮಾಡಿಕೊಡುವುದಾಗಿಯೂ ತಿಳಿಸಿದ್ದಾರೆ.

ಬೈಕ್‌ ಸವಾರರಿಗೆ ನಿರ್ಬಂಧ

ಕಾಶ್ಮೀರ ಕಣಿವೆಯ ಮೂಲಕ ಲಡಾಕ್‌ಗೆ ತೆರಳಲು ಆಗಮಿಸಿದ್ದ ಸಾಹಸಿ ಬೈಕ್‌ ಸವಾರರ ತಂಡವೊಂದನ್ನು ರಾಮಬನ್‌ ಜಿಲ್ಲೆಯಲ್ಲಿ ತಡೆದು ಹಿಂದಕ್ಕೆ ಕಳುಹಿಸಲಾಗಿದೆ. ಜಿಲ್ಲೆಯ ಜವಾಹರ ಸುರಂಗ ಮಾರ್ಗದ ಮೂಲಕ ಅವರನ್ನು ಹಿಂದಕ್ಕೆ ತೆರಳುವಂತೆ ಸೂಚಿಸಲಾಗಿದೆ.

ನುಸುಳುಕೋರರ ನುಗ್ಗಿಸುವ ಬ್ಯಾಟ್‌ ಎಂಬ ಭೂತ
ಭಾರತದೊಳಕ್ಕೆ ರಕ್ತದಾಹಿಗಳನ್ನು ಕಳುಹಿಸುವ ಪಾಕಿಸ್ತಾನಿ ಸೇನೆಯ ಪ್ರಯತ್ನವನ್ನು ಶನಿವಾರವಷ್ಟೇ ವಿಫ‌ಲಗೊಳಿಸಿದ ಭಾರತೀಯ ಸೇನೆಯು 7 ಉಗ್ರರನ್ನು ಹೊಡೆದುರುಳಿಸಿತ್ತು. ತನ್ನ ಗಡಿ ಕಾರ್ಯಾಚರಣೆ ಪಡೆ(ಬ್ಯಾಟ್‌)ಯ ಮೂಲಕ ಭಾರತದ ನೆಲಕ್ಕೆ ಉಗ್ರರನ್ನು ಕಳುಹಿಸುವ, ಭಾರತೀಯ ಯೋಧರ ಹತ್ಯೆಗೈಯ್ಯುವ, ಶಿರಚ್ಛೇದ ಮಾಡುವಂಥ ಹೀನಕೃತ್ಯಗಳನ್ನು ಪಾಕ್‌ ಸೇನೆ ನಡೆಸುತ್ತಲೇ ಬಂದಿದೆ. ಪಾಕ್‌ನ ಬ್ಯಾಟ್‌ ಪಡೆಯ ಕಾರ್ಯಾಚರಣೆ ಕುರಿತ ಮಾಹಿತಿ ಇಲ್ಲಿದೆ.

ದಾಳಿಗೆ ಮುನ್ನ?
ಬ್ಯಾಟ್‌ ತಂಡದ ಗಡಿಯಾಚೆಗಿನ ಕಾರ್ಯಾಚರಣೆಯಲ್ಲಿ ಸಾಮಾನ್ಯವಾಗಿ 6ರಿಂದ 7 ಪಾಕಿಸ್ತಾನಿ ಸೈನಿಕರು ಹಾಗೂ ಕೆಲವು ಭಯೋತ್ಪಾದಕರು ಸೇರಿರುತ್ತಾರೆ. ಸೈನಿಕರು ಮತ್ತು ಉಗ್ರರನ್ನು ಒಳಗೊಂಡ ಈ ತಂಡವು ಭಾರತದೊಳಗಿನ ದುರ್ಬಲ ಪ್ರದೇಶದ ಕುರಿತು ವ್ಯವಸ್ಥಿತವಾಗಿ ವಿಚಕ್ಷಣೆ ಅಥವಾ ಸ್ಥಳಾನ್ವೇಷಣೆ ನಡೆಸುತ್ತದೆ. ಜತೆಗೆ, 778 ಕಿ.ಮೀ.ನ ಎಲ್‌ಒಸಿಯುದ್ದಕ್ಕೂ ಭಾರತದ ಯೋಧರ ನಿಯೋಜನೆ ಹಾಗೂ ಗಸ್ತು ತಿರುಗುವ ವ್ಯವಸ್ಥೆಯ ಕುರಿತು ಮಾಹಿತಿ ಕಲೆಹಾಕುತ್ತದೆ.

ಬ್ಯಾಟ್‌ನಲ್ಲಿ ಯಾರಿರುತ್ತಾರೆ?
ಪಾಕಿಸ್ಥಾನ ಸೇನೆಯ ಸ್ಪೆಷಲ್‌ ಸರ್ವಿಸಸ್‌ ಗ್ರೂಪ್‌(ಎಸ್‌ಎಸ್‌ಜಿ) ಕಮಾಂಡೋಗಳು ಕೂಡ ಈ ಪಡೆಯಲ್ಲಿರುತ್ತಾರೆ. ಈ ಕಮಾಂಡೋ ಗಳನ್ನು “ಬ್ಲ್ಯಾಕ್‌ ಸ್ಟಾರ್ಕ್ಸ್’ ಎಂದೂ ಕರೆಯುತ್ತಾರೆ. 1990ರಲ್ಲಿ ಕಾರ್ಗಿಲ್‌ ಯುದ್ಧದ ವೇಳೆ ಮುಂಚೂಣಿಯಲ್ಲಿ ನಿಲ್ಲಲೆಂದು ಮೊದಲು ಎಲ್‌ಒಸಿ ದಾಟಿ ಬಂದಿದ್ದೇ ಈ ಕಮಾಂಡೋಗಳು.

ಉದ್ದೇಶ ಏನು?
ಪಾಕಿಸ್ತಾನಿ ಉಗ್ರರನ್ನು ಭಾರತದ ಒಳಕ್ಕೆ ನುಸುಳುವಂತೆ ಮಾಡುವುದೇ ಬ್ಯಾಟ್‌ ಪಡೆಯ ಪ್ರಮುಖ ಉದ್ದೇಶವಾಗಿರುತ್ತದೆ.

ಹೇಗೆ ಕಾರ್ಯಾಚರಣೆ?
ಮೊದಲಿಗೆ ಪಾಕಿಸ್ಥಾನದ ಸೇನೆಯು ಗಡಿಯಲ್ಲಿ ಏಕಾಏಕಿ ಗುಂಡಿನ ದಾಳಿ, ಶೆಲ್‌ ದಾಳಿ ನಡೆ ಸಲು ಆರಂಭಿಸುತ್ತದೆ. ತತ್‌ಕ್ಷಣ ಸಹಜ ವಾಗಿಯೇ ಭಾರತೀಯ ಸೇನೆಯು ಅದಕ್ಕೆ ಪ್ರತ್ಯುತ್ತರ ನೀಡುತ್ತದೆ. ಹೀಗೆ ಭಾರತೀಯ ಯೋಧರ ಗಮನವು ಪಾಕ್‌ನ ಶೆಲ್‌ ದಾಳಿ ಕಡೆಗೆ ನೆಟ್ಟಿರುವ ಸಮಯದಲ್ಲೇ ಯೋಧರ ಕಣ್ತಪ್ಪಿಸಿ ಉಗ್ರರನ್ನು ನುಸುಳಿಸಲಾಗುತ್ತದೆ. ಇದುವೇ ಬ್ಯಾಟ್‌ ಪಡೆಯ ಕುತಂತ್ರ.

ಹೀನ ಕೃತ್ಯಗಳು
2017 ಮೇ
ಪೂಂಛ… ಜಿಲ್ಲೆಯ ಕೃಷ್ಣಘಾಟಿ ವಲಯದಲ್ಲಿ ಬ್ಯಾಟ್‌ ಪಡೆಯಿಂದ ಇಬ್ಬರು ಭಾರತೀಯ ಯೋಧರ ಶಿರಚ್ಛೇದ. ಎರಡೂ ದೇಶಗಳ ನಡುವೆ ಪ್ರಕ್ಷುಬ್ಧ ಸ್ಥಿತಿ ನಿರ್ಮಿಸಿದ ಘಟನೆಯಿದು.
2013 ಜನವರಿ
ಯೋಧ ಲ್ಯಾನ್ಸ್‌ ನಾಯ್ಕ ಹೇಮರಾಜ್‌ರನ್ನು ಹತ್ಯೆ ಮಾಡಿ, ದೇಹವನ್ನು ಛಿದ್ರಗೊಳಿಸಿದ ಬ್ಯಾಟ್‌ ಪಡೆ. ಲ್ಯಾನ್ಸ್‌ ನಾಯ್ಕ ಸುಧಾಕರ್‌ ಸಿಂಗ್‌ರ ಶಿರಚ್ಛೇದ. ಕಾನ್‌ಸ್ಟೆàಬಲ್‌ ರಾಜೀಂದರ್‌ ಸಿಂಗ್‌ಗೆ ಗಾಯ.
6ಕ್ಕೂ ಹೆಚ್ಚು
ಕಳೆದ 2 ವರ್ಷಗಳಲ್ಲಿ, ಪಾಕ್‌ ಸೇನೆ 6ಕ್ಕೂ ಹೆಚ್ಚು ಬಾರಿ ಬ್ಯಾಟ್‌ ದಾಳಿ ನಡೆಸಿ, ನುಸುಳುಕೋರರನ್ನು ಭಾರತದೊಳಕ್ಕೆ ಕಳುಹಿಸಲು ಮತ್ತು ಮುಂಚೂಣಿ ನೆಲೆಗಳ ಮೇಲೆ ದಾಳಿ ಮಾಡಿಸಲು ಯತ್ನಿಸಿದೆ.

ಮಾನವೀಯತೆ ಮೆರೆದಿದ್ದ ಭಾರತೀಯ ಸೇನೆ
ಪಾಕಿಸ್ಥಾನದ ಬ್ಯಾಟ್‌ ಪಡೆಯು ನಮ್ಮ ಯೋಧರ ಶಿರಚ್ಛೇದ, ಅಂಗಛೇದನದಂಥ ಕುಕೃತ್ಯಕ್ಕೆ ಕೈಹಾಕಿದರೂ, ಭಾರತೀಯ ಸೇನೆ ಮಾತ್ರ ನೆರೆರಾಷ್ಟ್ರದ ಚ ಮೃತದೇಹಗಳಿಗೆ ಗೌರವ ನೀಡಿ ಮಾನವೀಯತೆ ಮೆರೆಯುತ್ತಾ ಬಂದಿದೆ. ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲೂ, ಪಾಕ್‌ ಸೈನಿಕರ ಮೃತದೇಹಗಳನ್ನು ತಮ್ಮದೆಂದು ಸ್ವೀಕರಿಸಲು ಪಾಕ್‌ ನಿರಾಕರಿಸಿತ್ತು. ಭಾರತಕ್ಕೆ ನುಸುಳಿದ್ದು ಯೋಧರಲ್ಲ, ಉಗ್ರರನ್ನು ಎಂದೇ ಹೇಳುತ್ತಾ ಬಂದಿತ್ತು. ಕೊನೆಗೆ, ಭಾರತೀಯ ಸೇನೆಯೇ ಪಾಕ್‌ ಸೈನಿಕರ ಮೃತದೇಹಗಳಿಗೆ ಗನ್‌ ಹಿಲ್‌ ಎಂಬ ಪ್ರದೇಶದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿತು. ಮೃತದೇಹಗಳಿಗೆ ಪಾಕಿಸ್ಥಾನದ ಧ್ವಜವನ್ನು ಹೊದಿಸಿ, ಸೇನೆಯ ವತಿಯಿಂದ ಮುಸ್ಲಿಂ ಧರ್ಮಗುರುವೊಬ್ಬರನ್ನು ಕರೆಸಿಕೊಂಡು, ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next