ಜಮ್ಮು-ಕಾಶ್ಮೀರದಲ್ಲಿ ವಲಸಿಗರನ್ನು ಗುರಿಯಾಗಿಸಿ ದಾಳಿ ನಡೆಸುವ ಉಗ್ರರು ತಮ್ಮ ಹಿಂದಿನ ಹಳೆಯ ಚಾಳಿಯನ್ನು ಶುರುವಿಟ್ಟುಕೊಂಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸರಿಸುಮಾರು ಒಂದೂವರೆ ದಶಕದ ಬಳಿಕ ಚುನಾಯಿತ ಸರಕಾರ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಉಗ್ರರು ಅಮಾಯಕ ಕಾರ್ಮಿಕರನ್ನು ಗುರಿಯಾಗಿಸಿ ಅತ್ಯಂತ ಕ್ರೂರ ಕೃತ್ಯ ಎಸಗಿದ್ದಾರೆ.
ಭಾನುವಾರ ಗಾಂದರ್‌ಬಲ್ ಜಿಲ್ಲೆಯ ಸೋನಾಮಾರ್ಗ್‌ನಲ್ಲಿ ಸುರಂಗ ಮಾರ್ಗದ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಪೈಶಾಚಿಕ ದಾಳಿಯಲ್ಲಿ 6 ಮಂದಿ ಕಾರ್ಮಿಕರು ಮತ್ತು ಓರ್ವ ವೈದ್ಯರ ಸಹಿತ 7 ಮಂದಿ ಸಾವನ್ನಪ್ಪಿದ್ದರು. ಕೆಲವು ತಿಂಗಳುಗಳ ಹಿಂದೆ ವಲಸಿಗರನ್ನೇ ಗುರಿಯಾಗಿಸಿ ಉಗ್ರರು ದಾಳಿಗಳನ್ನು ನಡೆಸುತ್ತ ಬಂದಿದ್ದರಾದರೂ ಇತ್ತೀಚೆಗೆ ಇಂತಹ ದಾಳಿಗಳು ಕಡಿಮೆಯಾಗಿದ್ದವು. ಆದರೆ 2 ದಿನಗಳ ಹಿಂದೆಯಷ್ಟೇ ಉಗ್ರರು ಶೋಪಿಯಾನ್‌ನಲ್ಲಿ ಬಿಹಾರ ಮೂಲದ ಕಾರ್ಮಿಕನನ್ನು ಹತ್ಯೆಗೈದಿದ್ದರು. ಇದರ ಬೆನ್ನಲ್ಲೇ ಈ ಕ್ರೂರ ಕೃತ್ಯ ಎಸಗಿದ್ದಾರೆ.
ಪಾಕಿಸ್ಥಾನ ಪ್ರೇರಿತ ಉಗ್ರರ ಈ ಪೈಶಾಚಿಕ ಕೃತ್ಯದ ಹಿಂದೆ ಭಾರೀ ಷಡ್ಯಂತ್ರ ಅಡಗಿರುವಂತೆ ತೋರುತ್ತಿದೆ. ವಲಸಿಗರನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಅನ್ಯರಾಜ್ಯಗಳ ಕಾರ್ಮಿಕರು ಮತ್ತು ಜನರಲ್ಲಿ ಭೀತಿ ಸೃಷ್ಟಿಸಿ, ಜಮ್ಮು-ಕಾಶ್ಮೀರದತ್ತ ಮುಖ ಮಾಡದಂತೆ ಮಾಡುವ ಹಾಗೂ ಸ್ಥಳೀಯರು ಮತ್ತು ವಲಸಿಗರ ನಡುವೆ ಸಂಘರ್ಷ ಸೃಷ್ಟಿಸಿ, ಶಾಂತಿ ಕದಡುವ ಪ್ರಯತ್ನ ಈ ದುಷ್ಕೃತ್ಯದ ಹಿಂದೆ ಅಡಗಿದಂತೆ ತೋರುತ್ತಿದೆ. ಈ ಬಾರಿ ಉಗ್ರರು ಸುರಂಗ ಮಾರ್ಗ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ವಲಸಿಗ ಕಾರ್ಮಿಕರ ಬಿಡಾರಗಳ ಮೇಲೆ ದಾಳಿ ನಡೆಸಿ, ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಿ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ. ಜಮ್ಮು-ಕಾಶ್ಮೀರ ಸಹಜಸ್ಥಿತಿಗೆ ಮರಳುತ್ತಿರುವುದನ್ನು ಸಹಿಸಿಕೊಳ್ಳಲಾಗದೆ ಪಾಕ್ ಪ್ರೇರಿತ ಉಗ್ರರು ಪದೇಪದೆ ಇಂತಹ ಪೈಶಾಚಿಕ ಕೃತ್ಯಗಳನ್ನು ಎಸಗುತ್ತಿರುವುದು ಸುಸ್ಪಷ್ಟ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದ ಕೇಂದ್ರ ಸರಕಾರ ರಾಜ್ಯದಲ್ಲಿ ಉಗ್ರರ ಎಲ್ಲ ತೆರನಾದ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದು ಅದರಲ್ಲಿ ಭಾರೀ ಯಶಸ್ಸನ್ನು ಕಂಡಿದೆ. ಇದರ ಹೊರತಾಗಿಯೂ ಪಾಕಿಸ್ತಾನದ ನಿರಂತರ ಪ್ರಚೋದನೆಯಿಂದಾಗಿ ಭಯೋತ್ಪಾದಕರು ಒಳನುಸುಳಿ ಅಲ್ಲಲ್ಲಿ ದಾಳಿಗಳನ್ನು ನಡೆಸುವ ಮೂಲಕ ಅಮಾಯಕರನ್ನು ಹತ್ಯೆಗೈಯ್ಯುತ್ತಲೇ ಬಂದಿದ್ದಾರೆ. ಕಳೆದ ಐದು ತಿಂಗಳುಗಳ ಅವಧಿಯಲ್ಲಿ ಇಂತಹ ಹಲವಾರು ಘಟನೆಗಳು ನಡೆದಿದ್ದು, ಭದ್ರತಾ ಪಡೆಗಳು ಕೂಡ ಭಾರೀ ಸಂಖ್ಯೆಯಲ್ಲಿ ಉಗ್ರರನ್ನು ಸದೆಬಡಿಯುವಲ್ಲಿ ಸಫಲವಾಗಿವೆ. ಇದರ ಹೊರತಾಗಿಯೂ ಉಗ್ರರು ತಮ್ಮ ಕಾರ್ಯಾಚರಣಾ ವಿಧಾನಗಳನ್ನು ಪದೇಪದೆ ಬದಲಾಯಿಸಿ, ದಾಳಿಗಳನ್ನು ನಡೆಸುತ್ತಿದ್ದಾರೆ. ಉಗ್ರರ ಈ ಷಡ್ಯಂತ್ರ, ದುಷ್ಕೃತ್ಯಗಳನ್ನು ಸದೆಬಡಿಯಲು ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರಕಾರ ಇನ್ನಷ್ಟು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯ ತಂದೊಡ್ಡುತ್ತಿರುವ ಉಗ್ರರ ವಿರುದ್ಧ ಕೇಂದ್ರ ಸರಕಾರ ಅನುಸರಿಸುತ್ತ ಬಂದಿರುವ ಶೂನ್ಯ ಸಹಿಷ್ಣು ನೀತಿಗೆ ಜಮ್ಮು-ಕಾಶ್ಮೀರ ಸರಕಾರ ಸಂಪೂರ್ಣ ಸಹಕಾರ ನೀಡಬೇಕು. ಸದ್ಯ ಜಮ್ಮು-ಕಾಶ್ಮೀರದ ಕಾನೂನು ಸುವ್ಯವಸ್ಥೆ, ಭದ್ರತೆ ಕೇಂದ್ರ ಗೃಹ ಇಲಾಖೆಯ ಸುಪರ್ದಿಯಲ್ಲಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ವಿಷಯದಲ್ಲಿ ಯಾವುದೇ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ಜಮ್ಮು-ಕಾಶ್ಮೀರದ ಶಾಂತಿ ಮತ್ತು ಅಭಿವೃದ್ಧಿಗೆ ತೊಡಕಾಗದಂತೆ ಹಾಗೂ ಮುಖ್ಯವಾಗಿ ನಾಗರಿಕರ ರಕ್ಷಣೆ ವಿಷಯದಲ್ಲಿ ಸರಕಾರ ಮತ್ತು ಭದ್ರತಾ ಪಡೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.