Advertisement

ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ: ಚುನಾವಣೆ ನಡೆಯಲಿ

06:00 AM Nov 24, 2018 | Team Udayavani |

ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಜಮ್ಮು-ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜನೆಗೊಳಿಸುವುದರೊಂದಿಗೆ ಕಣಿವೆ ರಾಜ್ಯದ ರಾಜಕೀಯ ಇನ್ನೊಂದು ತಿರುವು ಪಡೆದುಕೊಂಡಿದೆ. ಆದರೆ ವಿಧಾನಸಭೆ ವಿಸರ್ಜ ನೆಗೊಳಿಸಲು ರಾಜ್ಯಪಾಲರು ನೀಡಿರುವ ಕಾರಣಗಳು ತೃಪ್ತಿಕರವಾಗಿಲ್ಲ. ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿ, ಉಮರ್‌ ಅಬ್ದುಲ್ಲಾ ನೇತೃತ್ವದ ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಸೇರಿ ಸಮ್ಮಿಶ್ರ ಸರಕಾರ ರಚಿಸುವ ಕೋರಿಕೆ ಮಂಡಿಸಿದ ಕೆಲವೇ ತಾಸುಗಳಲ್ಲಿ ರಾಜ್ಯಪಾಲರು ವಿಧಾನಸಭೆ ವಿಸರ್ಜನೆಗೊಳಿಸಿದ್ದು ಹಲವು ಪ್ರಶ್ನೆಗಳನ್ನೆಬ್ಬಿಸಿದೆ. 

Advertisement

ಪರಸ್ಪರ ತದ್ವಿರುದ್ಧ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳು ಜತೆ ಸೇರಿದರೆ ಸ್ಥಿರ ಸರಕಾರ ರಚನೆ ಅಸಾಧ್ಯ ಎನ್ನುವುದು ನಿಜವೇ ಆಗಿದ್ದರೂ ಪ್ರಜಾತಂತ್ರದಲ್ಲಿ ಸರಕಾರ ರಚನೆಗೆ ಅಗತ್ಯವಾಗಿರುವುದು ಸಂಖ್ಯಾಬಲವೇ ಹೊರತು ಸಿದ್ಧಾಂತವಲ್ಲ. ಸದನದಲ್ಲಿ ಬಹುಮತ ಸಾಬೀತುಪಡಿಸುವ ಪಕ್ಷಕ್ಕೆ ಸರಕಾರ ರಚಿಸುವ ಹಕ್ಕು ಸಿಗುತ್ತದೆ. ಆದರೆ ರಾಜ್ಯಪಾಲರು ಇಲ್ಲಿ ಸರಕಾರ ರಚಿಸಲು ಕೋರಿಕೆ ಮಂಡಿಸಿದವರಿಗೆ ಈ ಅವಕಾಶವನ್ನೇ ನೀಡದೆ ವಿಧಾನಸಭೆಯನ್ನು ವಿಸರ್ಜಿಸಿರುವುದು ಪ್ರಜಾತಂತ್ರಕ್ಕೆ ಪೂರಕವಾದ ನಡೆಯಲ್ಲ. ರಾಜ್ಯಪಾಲರ ಕೆಲಸ ಸಂವಿಧಾನದ ರಕ್ಷಣೆಯೇ ಹೊರತು ಪಕ್ಷಗಳ ಸಿದ್ಧಾಂತಗಳ ರಕ್ಷಣೆಯಲ್ಲ. ಹೀಗಾಗಿ ಮಲಿಕ್‌ ನಡೆ ಪ್ರಜಾತಂತ್ರ ವಿರೋಧಿ ಎನ್ನಬೇಕಾಗುತ್ತದೆ. ಒಂದು ವೇಳೆ ಅವರು ಹೇಳಿದ ವಿರುದ್ಧ ಸಿದ್ಧಾಂತಗಳ ಪಕ್ಷಗಳು ತತ್ವವನ್ನು ಒಪ್ಪಿಕೊಂಡರೆ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿರುವ ಸಮ್ಮಿಶ್ರ ಸರಕಾರಗಳು ಆಡಳಿತ ನಡೆಸುವ ಅರ್ಹತೆಯನ್ನು ಕಳೆದುಕೊಳ್ಳುತ್ತವೆ. 

ಕರ್ನಾಟಕದಲ್ಲಿ ಚುನಾವಣೆ ಸಂದರ್ಭದಲ್ಲಿ ವಿಪರೀತವಾಗಿ ಕಚ್ಚಾಡಿದ್ದ ಎರಡು ಪಕ್ಷಗಳೇ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ. ಇಲ್ಲಿ ಸಂಖ್ಯಾಬಲ ಈ ಪಕ್ಷಗಳ ಕಡೆಗಿದ್ದ ಕಾರಣ ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ನೀಡಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇಷ್ಟು ಮಾತ್ರವಲ್ಲ ಕಳೆದ ಜೂನ್‌ ತನಕ ಜಮ್ಮು-ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ ಪಿಡಿಪಿ-ಬಿಜೆಪಿ ಸರಕಾರವೂ ಪರಸ್ಪರ ವಿರುದ್ಧ ಸಿದ್ಧಾಂತಗಳ ಪಕ್ಷಗಳ ಮೈತ್ರಿಕೂಟವಾಗಿತ್ತು ಎನ್ನುವುದನ್ನು ರಾಜ್ಯಪಾಲರು ಅಷ್ಟು ಬೇಗ ಮರೆತದ್ದು ಆಶ್ಚರ್ಯವುಂಟು ಮಾಡುತ್ತದೆ. 

ಜೂನ್‌ನಿಂದೀಚೆಗೆ ಕಣಿವೆ ರಾಜ್ಯ ರಾಜ್ಯಪಾಲರ ಆಳ್ವಿಕೆಯಲ್ಲಿದೆ. ಈ ಸಂದರ್ಭದಲ್ಲಿ ಸ್ಥಳೀಯಾಡಳಿತ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವಂಥ ಘಟನೆಗಳು ಗಮನೀಯವಾಗಿ ಕಡಿಮೆಯಾಗಿವೆ. ಅಂತೆಯೇ ಉಗ್ರ ಬೇಟೆಯೂ ಬಿರುಸಿನಿಂದ ನಡೆದಿದೆ. ಒಟ್ಟಾರೆಯಾಗಿ ಹಿಂಸಾಚಾರ ತುಸು ತಹಬಂದಿಗೆ ಬಂದಿರುವಂತೆ ಕಾಣಿಸುತ್ತಿರುವುದು ನಿಜ. ಆದರೆ ರಾಜ್ಯಪಾಲರ ಆಳ್ವಿಕೆ ಮುಂದುವರಿಸಲು ಇದು ಸಮರ್ಥನೆಯಾಗುವುದಿಲ್ಲ. ಸಂವಿಧಾನ ಪ್ರಕಾರ ಅಲ್ಲಿ ಚುನಾಯಿತ ಸರಕಾರ ಬರಲೇಬೇಕು. 

ಸಮ್ಮಿಶ್ರ ಸರಕಾರ ರಚನೆಯಾಗುವ ಸಂದರ್ಭದಲ್ಲಿ ಕುದುರೆ ವ್ಯಾಪಾರ ನಡೆಯುತ್ತದೆ ಎನ್ನುವುದು ನಮ್ಮ ರಾಜಕೀಯ ವ್ಯವಸ್ಥೆಯ ಎಲ್ಲರಿಗೂ ಗೊತ್ತಿರುವ ಗುಟ್ಟು. ಹಾಗೆಂದು ಕುದುರೆ ವ್ಯಾಪಾರವನ್ನು ತಡೆಯಲು ವಿಧಾಸನಸಭೆಯನ್ನು ವಿಸರ್ಜಿಸುವುದು ಸಮಂಜಸ ಕ್ರಮವಲ್ಲ. ಕುದುರೆ ವ್ಯಾಪಾರ ನಡೆಯದಂತೆ ನೋಡಿಕೊಳ್ಳುವುದು ಸಂಬಂಧಪಟ್ಟವರ ಹೊಣೆ. 

Advertisement

ಜೂನ್‌ನಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದೆಗೆದುಕೊಂಡ ಬಳಿಕ ಜಮ್ಮು-ಕಾಶ್ಮೀರದ ರಾಜಕೀಯ ಅಸ್ಥಿರಗೊಂಡಿದೆ. ರಾಜೀನಾಮೆ ನೀಡುವ ಸಂದರ್ಭದಲ್ಲೇ ಮೆಹಬೂಬ ಮುಫ್ತಿ ವಿಧಾನಸಭೆಯನ್ನು ವಿಸರ್ಜಿಸಬೇಕೆಂದು ಆಗ್ರಹಿಸಿದ್ದರು. ಆದರೆ ಆಗ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಜ್ಯಪಾಲರ ಕೈಗೆ ಆಡಳಿತ ಸೂತ್ರವನ್ನು ನೀಡಲಾಯಿತು. ಈ ನಡುವೆ ಪಿಡಿಪಿಯನ್ನು ಒಡೆದು ಸರಕಾರ ರಚಿಸುವ ಪ್ರಯತ್ನವನ್ನೂ ಬಿಜೆಪಿ ಮಾಡಿತು. ಸಜ್ಜನ್‌ ಘನಿ ಲೋನ್‌ ನೇತೃತ್ವದ ಪೀಪಲ್ಸ್‌ ಕಾನ್ಫರೆನ್ಸ್‌ ಎಂಬ ಚಿಕ್ಕ ಪಕ್ಷದ ಬೆಂಬಲ ಪಡೆಯುವ ಪ್ರಯತ್ನವನ್ನೂ ಬಿಜೆಪಿ ಮಾಡಿದೆ. ಆದರೆ ಪಿಡಿಪಿ- ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಜತೆಯಾದರೆ ಸಂಖ್ಯಾಬಲ ಸಾಕಾಗುವುದಿಲ್ಲ ಎಂದು ಅರಿವಾಗಿ ಈ ಪ್ರಯತ್ನವನ್ನು ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷಗಳ ಮೈತ್ರಿ ಸರಕಾರ ರಚನೆಯಾಗುವುದನ್ನು ತಡೆಯಲು ಕೇಂದ್ರ ಸರಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆಯೇ ಎಂಬ ಅನುಮಾನವೂ ಇದೆ. ಈ ಮಧ್ಯೆ ನಡೆದ ಸ್ಥಳೀಯಾಡಳಿತ ಚುನಾವಣೆಯನ್ನು ಪಿಡಿಪಿ ಮತ್ತು ನ್ಯಾಶನಲ್‌ ಕಾನ್ಫರೆನ್ಸ್‌ ಬಹಿಷ್ಕರಿಸಿದ ಕಾರಣ ಬಿಜೆಪಿ ಏಕಪಕ್ಷೀಯವಾಗಿ ಸ್ಪರ್ಧಿಸಿ ಗೆದ್ದುಕೊಂಡಿದೆ. ಹೀಗೆ ಕೆಲವು ತಿಂಗಳಿಂದೀಚೆಗೆ ಕಣಿವೆ ರಾಜ್ಯದ ರಾಜಕೀಯ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದ್ದು, ಇದೀಗ ರಾಜ್ಯಪಾಲರು ವಿಧಾನಸಭೆ ವಿಸರ್ಜಿಸುವುದರೊಂದಿಗೆ ಈ ಅನಿಶ್ಚಿತತೆ ಸದ್ಯಕ್ಕೆ ಕೊನೆಗೊಂಡಂತಾಗಿದೆ. ಇದೀಗ ವಿಧಾನಸಭೆ ವಿಸರ್ಜನೆಯಾಗಿರುವುದರಿಂದ ಹೊಸದಾಗಿ ಜನಾದೇಶ ಪಡೆಯುವುದೊಂದೇ ಉಳಿದಿರುವ ಮಾರ್ಗ. ಹೀಗಾಗಿ ಆದಷ್ಟು ಬೇಗ ಚುನಾವಣೆ ನಡೆಯಲಿ.

Advertisement

Udayavani is now on Telegram. Click here to join our channel and stay updated with the latest news.

Next