Advertisement

ಪಾಂಡಿತ್ಯ ಲಾಲಿತ್ಯಗಳ ಮೋಹಕ ಮೇಳ: ಜಮಿನೀಶ್‌ ಗಾಯನ

03:50 AM Feb 24, 2017 | |

ಇತ್ತೀಚೆಗಿನ ದಿನಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ಗಂಭೀರವಾಗಿ ಚಿಂತಿಸಿ ಪ್ರಯೋಗಶೀಲರಾಗುತ್ತಿ ರುವ ಒಂದು ಯುವ ಪೀಳಿಗೆ ಸಿದ್ಧವಾಗುತ್ತಿರುವುದು ಶಾಸ್ತ್ರೀಯ ಸಂಗೀತವನ್ನು ಗಮನಿಸುತ್ತಿರುವವರಿಗೆ  ಸಂತೋಷದ ವಿಷಯವಾಗಿದೆ. 32ನೆಯ ಆಲಂಪಾಡಿ ವೆಂಕಟೇಶ ಶಾನುಭಾಗ ಸ್ಮಾರಕ ಸಂಗೀತೋತ್ಸವದಲ್ಲಿ ಪ್ರಧಾನ ಕಚೇರಿಯನ್ನು ನೀಡಿದ ಯುವ ಕಲಾವಿದ ಕೋಟ್ಟಯಂ ಜಮನೀಶ್‌ ಭಾಗವತರ್‌ ಅವರ ಕಛೇರಿ ಈ ಮಾತಿಗೆ ಸಾಕ್ಷಿಯಾಯಿತು. ಜಮನೀಶ ರಿಗೆ ಗಂಭೀರವಾದ ಶಾರೀರವಿದೆ, ಪಾಂಡಿತ್ಯವಿದೆ. ಲಾಲಿತ್ಯ ನಿರೂಪಣೆ ಯೊಂದಿಗೆ ಹೊಸತನ ವನ್ನು ಕೊಡುವ ಚಮತ್ಕಾರಗಳೂ ಸಿದ್ಧಿಸಿವೆ. ಆದ್ದರಿಂದಲೇ ಅವರ ಕಛೇರಿ ಕಲಾರಸಿಕರಿಗೆ ಒಂದು ಹೊಸತನದ ಭಾವೋತ್ಕರ್ಷವನ್ನು ಕೊಡಲು ಸಮರ್ಥವಾಯಿತು.

Advertisement

ಸಾವೇರಿ ರಾಗದ ವರ್ಣದಿಂದ ಕಛೇರಿ ಆರಂಭಿಸಿದ ಜಮನೀಶ್‌ ಆರಂಭದಿಂದಲೇ ಸವೆದ ದಾರಿಯನ್ನು ತುಳಿಯುವುದಿಲ್ಲ ಎಂಬ ಆಂತರ್ಯವನ್ನು ಪ್ರಕಟಿಸಿದರು. ಹಂಸಧ್ವನಿಯ ಬಾಲಮುರಳಿಯವರ ಪಿರೈ ಅಣಿಯುಮ್‌ ಪೆರುಮಾಳ್‌ ಹಾಡಿದ ಬಳಿಕ ಅನುದಿನ ಮುನು – ಬೇಗಡೆಯನ್ನು ವಿಸ್ತಾರವಾದ ಆಲಾಪನೆ, ನೆರವಲ್‌, ಮನೋಧರ್ಮಗಳೊಂದಿಗೆ ಸಂಪನ್ನಗೊಳಿಸಿದರು. ಅರುಣಾಚಲ ಕವಿಯವರ ರಾಮನುಕ್ಕು ಮನ್ನನ್‌ ಹಿಂದೋಳದಲ್ಲಿ ಸೊಗಸಾಗಿ ಮೂಡಿಬಂತು. ಬಳಿಕ ಪ್ರಧಾನ ಕೀರ್ತನೆಯಾಗಿ ಬಿಲಹರಿಯಲ್ಲಿ ಸ್ವಾತಿ ತಿರುನಾಳರ ಸದಾಸೃರ ಮಾನಸವನ್ನು ಎತ್ತಿಕೊಂಡರು. ವಿಸ್ತಾರವಾದ ರಾಗ ಆಲಾಪನೆ, ಮನೋಧರ್ಮ, ಸ್ವರ ಪ್ರಸ್ತಾರಗಳೊಂದಿಗೆ ಸಂಪನ್ನವಾದ ಈ ಕೃತಿಯಲ್ಲಿ ನೆರವಲ್‌ಗಾಗಿ ಕನಕ ಸುಚೇಲಮ್‌ ಗರುಡ ತುರಂಗವನ್ನು ಎತ್ತಿಕೊಂಡುದುದು ಅವರ ಮಾಸ್ಟರ್‌ ಪೀಸ್‌ ಆಯಿತು. ಪಾಪನಾಶಂ ಶಿವ ಅವರ ಎನ್ನತವನ್‌ ಸೈದನೈ ಯಶೋದ (ಕಾಪಿ), ಚಂದ್ರಶೇಖರ ಈಶ (ಸಿಂಧು ಭೈರವಿ), ಶಂಕರಾಚಾರ್ಯರ ಭಜಗೋವಿಂದಂ (ಮಾಂಡ್‌) ಹಾಡಿ ಜಮನೀಶ ಮಂಗಳ ಹಾಡಿದಾಗ ಅವರಲ್ಲಿ ಇಂದಿನ ಯುವಪೀಳಿಗೆಯಲ್ಲಿ ನಾಳೆ ಅಗ್ರಮಾನ್ಯ ಕಲಾವಿದನಾಗುವ ಸಾಧ್ಯತೆಗಳನ್ನು ಕಲಾರಸಿಕರಿಗೆ ಗುರುತಿಸಲು ಸಾಧ್ಯವಾಯಿತು.

ವಯೋಲಿನ್‌ನಲ್ಲಿ ಗಣರಾಜ ಕಾರ್ಲೆ ಗಾಯಕನ ಮನೋಧರ್ಮ ಹಿಡಿದು ಸಹಕರಿಸಿದರು. ಮೃದಂಗ ದಲ್ಲಿ ಡಾ| ಶಂಕರರಾಜ್‌ ಮತ್ತು ಘಟಂನಲ್ಲಿ  ತ್ರಿಚ್ಚಾರ್‌ ಮನೋಹರ ಸಹಕರಿಸುತ್ತ ಮುಕ್ಕಾಲೆಡೆಯಲ್ಲಿ ಒಂದು ಸೊಗಸಾದ ತನಿ ಆವರ್ತನವನ್ನಿತ್ತರು.

ಇದಕ್ಕೆ ಮೊದಲು ನಡೆದ ಸಂಗೀತಾರಾಧನಾ ಕಾರ್ಯಕ್ರಮದಲ್ಲಿ ರಾಧಾ ಮುರಳೀಧರ್‌, ಡಾ| ಶೋಭಿತಾ, ಸತೀಶ್‌, ನಯನಾ ರಾಜ್‌, ಪ್ರಭಾಕರ ಕುಂಜಾರು, ಪುರುಷೋತ್ತಮ ಪುಣಚತ್ತಾಯ, ಎಂ. ಗೋವಿಂದನ್‌ ನಂಬಿಯಾರ್‌, ಶ್ರೀವತ್ಸ ಮೊದಲಾದವರು ಭಾಗವಹಿಸಿದರು. ಡಾ| ಸುರೇಶ ಮಯ್ಯ ಸಂಸ್ಮರಣ ಭಾಷಣ ಮಾಡಿದರು.

ಸುಕುಮಾರ ಆಲಂಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next