ಲಂಡನ್: ಇಂಗ್ಲೆಂಡ್ ನ ದಿಗ್ಗಜ ವೇಗಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಕಿವೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಆ್ಯಂಡರ್ಸನ್ ಮತ್ತೊಂದು ಪ್ರಮುಖ ಸಾಧನೆ ಮಾಡಲಿದ್ದಾರೆ.
ಇಂಗ್ಲೆಂಡ್ ಪರ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರನೆಂಬ ದಾಖಲೆಗೆ ಜಿಮ್ಮಿ ಆ್ಯಂಡರ್ಸನ್ ಪಾತ್ರರಾಗಲಿದ್ದಾರೆ. ಇದುವರೆಗೆ 161 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಮಾಜಿ ನಾಯಕ ಅಲಿಸ್ಟರ್ ಕುಕ್ ಜೊತೆ ದಾಖಲೆ ಹಂಚಿಕೊಂಡಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಲೇ ಹೊಸ ದಾಖಲೆ ಬರೆಯಲಿದ್ದಾರೆ.
ಇದನ್ನೂ ಓದಿ:42 ವರ್ಷ ಪ್ರಾಯದ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಗ್ಕೋ ಸಿಂಗ್ ನಿಧನ
ಜೇಮ್ಸ್ ಆ್ಯಂಡರ್ಸನ್ 2003ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಸದ್ಯ 38 ವರ್ಷದ ಆ್ಯಂಡರ್ಸನ್ 616 ವಿಕೆಟ್ ಕಬಳಿಸಿದ್ದಾರೆ. ಇಂಗ್ಲೆಂಡ್ ಪರ ಬೇರೆ ಯಾವುದೇ ಬೌಲರ್ ಇದಕ್ಕಿಂತ ಹೆಚ್ಚು ವಿಕೆಟ್ ಪಡೆದಿಲ್ಲ. ಇನ್ನು ನಾಲ್ಕು ವಿಕೆಟ್ ಪಡೆದರೆ ಭಾರತದ ಅನಿಲ್ ಕುಂಬ್ಳೆ ದಾಖಲೆಯನ್ನು ಅಳಿಸಲಿದ್ದಾರೆ. ಆ ದಾಖಲೆಯೂ ಇದೇ ಪಂದ್ಯದಲ್ಲಿ ಆಗುವ ಸಾಧ್ಯತೆ ಹೆಚ್ಚಿದೆ.
ಎಡ್ಜ್ ಬಾಸ್ಟನ್ ಅಂಗಳದಲ್ಲಿ ಇಂದು ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.