ಜಮಖಂಡಿ: ಪ್ರಾಥಮಿಕ, ಪ್ರೌಢಶಾಲೆ ಮಕ್ಕಳಿಗೆ ಸರಕಾರದಿಂದ ನೀಡಲಾಗುವ ಬಿಸಿಯೂಟದಲ್ಲಿ ಅವ್ಯವಹಾರ ನಡೆದಿದೆ. ಮಕ್ಕಳ ದಾಖಲಾತಿ, ಹಾಜರಾತಿ ಹಾಗೂ ಪೂರೈಕೆಯ ಅಂಕಿ-ಅಂಶಗಳು ಸಂಪೂರ್ಣ ವ್ಯತ್ಯಾಸವಾಗಿದ್ದು ತನಿಖೆ ನಡೆಸಬೇಕು ಎಂದು ತಾಪಂ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರದ ತಾಪಂ ಸಭಾಭವನದಲ್ಲಿ ಶನಿವಾರ ತಾಪಂ ಅಧ್ಯಕ್ಷೆ ನಾಗವ್ವ ಕುರಣಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಸಿಯೂಟ ಅ ಧಿಕಾರಿ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಅ ಧಿಕಾರಿಗಳ ಹಾಗೂ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತೇರದಾಳ ಶಾಸಕ ಸಿದ್ದು ಸವದಿ ಮಧ್ಯೆ ಪ್ರವೇಶಿಸಿ ತಾಲೂಕು ಬಿಸಿಯೂಟ ಅಧಿಕಾರಿಗಳ ನೀಡಿದ ಪ್ರಗತಿ ವರದಿ ಪರಿಶೀಲಿಸಿದ ನಂತರ ಅಂಕಿ-ಅಂಶಗಳ ಪ್ರಕಾರ ಮಕ್ಕಳ ಹಾಜರಾತಿ ಕಡಿಮೆಯಿದ್ದು, ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಅಂದಾಜು 10 ರಿಂದ 20 ಸಾವಿರ ಮಕ್ಕಳಿಗೆ ಆಹಾರ ಪೂರೈಸದಿದ್ದರೂ ಯಾವ ಆಧಾರದ ಮೇಲೆ, ಯಾಕೆ ವೇತನ ಪಾವತಿ ಮಾಡಲಾಗಿದೆ. ಓರ್ವ ವಿದ್ಯಾರ್ಥಿಗೆ ನಿತ್ಯ 5 ರೂ.ದಂತೆ ಅಂದಾಜು 10 ರಿಂದ 20 ಸಾವಿರ ವಿದ್ಯಾರ್ಥಿಗಳ ಒಂದು ದಿನದ ವೆಚ್ಚ 50 ರಿಂದ 95 ಸಾವಿರ ರೂ. ಪೋಲಾಗಿದ್ದು ತಾಲೂಕು ಮಟ್ಟದ ಅಧಿಕಾರಿಗಳು ಗಮನಿಸುವ ಮೂಲಕ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ತಾ.ಪಂ ಅಧ್ಯಕ್ಷೆ ನಾಗವ್ವ ಕುರಣಿ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಸ್ಥಾಯಿ ಸಮಿತಿ ಚೇರಮನ್ ಗುರಪಾದಯ್ಯ ಮರಡಿಮಠ, ತಾ.ಪಂ ಇಒ ಎ.ಜಿ. ಪಾಟೀಲ ಸಹಿತ ತಾ.ಪಂ ಸದಸ್ಯರು ಇದ್ದರು. ಖಾಸಗಿ ಆಸ್ಪತ್ರೆಯ ವೈದ್ಯರು ಸುಳ್ಳು ಹೇಳುವ ಮೂಲಕ ಬೇಕಾಬಿಟ್ಟಿ ಹಣ ವಸೂಲಿಯಲ್ಲಿ ತೊಡಗಿಕೊಂಡಿದ್ದಾರೆ. ರೋಗಿಯ ಚಿಕಿತ್ಸೆ ಅರಿತು ರೋಗ ನಿರೋಧಕ ಔಷ ಧ ನೀಡದೇ ಮನಬಂದಂತೆ ಉಪಚಾರ ನೀಡುವ ಮೂಲಕ ಬಡವರ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಪವಿಭಾಗ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಕೆ.ಕೆ. ಬಣ್ಣದ ಮಾತನಾಡಿ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಹತೋಟಿಯಲ್ಲಿ ಇಲ್ಲ. ತಾಲೂಕು ಆರೋಗ್ಯ ಅಧಿಕಾರಿಗಳು ಸಭೆ ಕರೆದು ಎಚ್ಚರಿಕೆ ನೀಡಲಿದ್ದಾರೆ. ಅನುಮಾನ ಬಂದ ಖಾಸಗಿ ವೈದ್ಯರ ಮೇಲೆ ವಂಚನೆ ಪ್ರಕರಣ ದಾಖಲು ಮಾಡಲು ಸಾಧ್ಯವಿದ್ದು, ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಅಥವಾ ಆರೋಗ್ಯ ಇಲಾಖೆ ಸಮಿತಿ ಅಗತ್ಯ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸರಕಾರಿ ಆಸ್ಪತ್ರೆಗೆ 5 ರಿಂದ 6 ಎಕರೆ ಜಾಗ ಲಭಿಸಿದಲ್ಲಿ ಬಿಡುಗಡೆಗೊಂಡ ಅನುದಾನ ಬಳಕೆ ಮಾಡಿಕೊಂಡು ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದರು.
ತಾಪಂ ಅಧಿಧೀನದಲ್ಲಿರುವ ನಗರದ ಕುಡಚಿ ರಸ್ತೆಯಲ್ಲಿರುವ 6 ಬಿಎಲ್‌ಡಿಇ ಕಾಲೇಜು ಎದುರಿಗೆ 1 ಹಾಗೂ ಸಾವಳಗಿಯಲ್ಲಿ 3 ಅಂಗಡಿಕಾರರು ಕಳೆದ ವರ್ಷಗಳಿಂದ ಬಾಡಿಗೆ ತುಂಬಿರುವುದಿಲ್ಲ. ಎಸ್. ಎಂ. ದಳವಾಯಿ, ಎಸ್.ಎಂ. ಪಾಟೀಲ ಎಂಬುವರು ಕಳೆದ 10 ವರ್ಷಗಳಿಂದ ಬಾಡಿಗೆ ಹಣ ಕಟ್ಟಿರುವುದಿಲ್ಲ ಯಾಕೆ, ಅಧಿಕಾರಿಗಳು ಯಾಕೆ ಮೌನ ವಹಿಸಿದ್ದಾರೆ ಸಭೆಯಲ್ಲಿ ಬಹಿರಂಗ ಪಡಿಸಬೇಕೆಂದು ತಾ.ಪಂ ಸದಸ್ಯ ಶ್ರೀಮಂತ ಚೌರಿ ಒತ್ತಾಯಿಸಿದರು.
ತಾ.ಪಂ ಇಒ ಎ.ಜಿ.ಪಾಟೀಲ ಮಾತನಾಡಿ, ಒಂದು ವಾರದಲ್ಲಿ ಬಾಡಿಗೆ ತುಂಬುವಂತೆ ನೋಟಿಸ್ ನೀಡಲಾಗುವುದು. ನಂತರ ಬಾಡಿಗೆ ಪರಿಷ್ಕರಣೆ ಮಾಡಿ ಹೊಸದಾಗಿ ಬಾಡಿಗೆ ತುಂಬುವಂತೆ ಸೂಚಿಸಲಾಗುವುದು. ಕರಾರುಗಳಿಗೆ ಒಪ್ಪದಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಮತ್ತೊಮ್ಮೆ ಹರಾಜು ಪ್ರಕ್ರಿಯೆ ನಡೆಸಲಾಗುವು ಎಂದರು.
ಜಿಪಂ ಸದಸ್ಯರಾದ ಶಿವಾನಂದ ಪಾಟೀಲ, ಪುಂಡಲೀಕ ಪಾಲಬಾವಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಆಹಾರ ಧಾನ್ಯಗಳು ರಾತ್ರಿ ವೇಳೆಯಲ್ಲಿ ಸಾಗಾಣಿಕೆ ಮಾಡುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಮನೆಯಲ್ಲಿ ವಿತರಿಸಲಾಗುತ್ತಿದೆ. ಸರಕಾರ ಆಹಾರ ಧಾನ್ಯ ರಾತ್ರಿ ವೇಳೆಯಲ್ಲಿ ಯಾಕೆ ಪೂರೈಕೆ ಮಾಡಲಾಗುತ್ತಿದೆ ಎಂದರು.