ಜಮಖಂಡಿ: ಅಧಿಕಾರಿಗಳು ತಮ್ಮ ವ್ಯಾಪ್ತಿಯ ಚೆಕ್ ಪೋಸ್ಟ್‌ಗಳಲ್ಲಿ ಯಾವುದೇ ಲೋಪ ಎಸಗದಂತೆ ಕೆಲಸ ನಿರ್ವಹಿಸಬೇಕು. ಪ್ರತಿಯೊಂದು ವಾಹನ ತಪಾಸಣೆಗೆ ಒಳಪಡಿಸಿ ಅಕ್ರಮ ಹಣ, ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಚುನಾವಣಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಇಕ್ರಮ ಶರೀಫ್ ಹೇಳಿದರು.
ನಗರದ ಮಿನಿ ವಿಧಾನಸೌಧ ಚುನಾವಣಾ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ಅನುಮತಿಯಿಲ್ಲದೇ ನಿಮಗೆ ವಹಿಸಿದ ವ್ಯಾಪ್ತಿ ಬಿಟ್ಟು ಹೊರಗಡೆ ಹೋಗುವಂತಿಲ್ಲ ಎಂದು ಅಧಿಕಾರಿಗಳಿಗೆ ತಾಕಿತು
ಮಾಡಿದರು. ಯಾವುದೇ ಮನೆಯಲ್ಲಿ, ಪ್ರದೇಶದಲ್ಲಿ ಹಣ ಅಥವಾ ಮದ್ಯ ಸಾಗಾಣಿಕೆ ಅಕ್ರಮವಾಗಿ ನಡೆಯುತ್ತಿವೆಂಬ ಅನುಮಾನಗಳು ಕಂಡುಬಂದಲ್ಲಿ ತೆರಿಗೆ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆಗಳ ಸಹಯೋಗದೊಂದಿಗೆ ಪಂಚನಾಮೆ ಮಾಡಿ ಪ್ರಕರಣ ನೊಂದಾಯಿಸಬೇಕು. ಪೊಲೀಸ್‌ರು ಅಕ್ರಮ ಹಣ ಮತ್ತು ಮದ್ಯವನ್ನು ಸೀಜ್ ಮಾಡಿದ 24 ಗಂಟೆ ಒಳಗಡೆ ಸಕ್ಷಮ ಪ್ರಾಧಿಕಾರದ ಎದುರು ಹಾಜರು ಪಡಿಸಬೇಕು ಎಂದರು.
ತಮ್ಮ ವ್ಯಾಪ್ತಿಯಲ್ಲಿ ಬರುವ ದುರ್ಬಲ, ಸೂಕ್ಷ್ಮ ಮತಗಟ್ಟೆ ಪ್ರದೇಶಗಳ ಮೇಲೆ ಪ್ರತಿದಿನ ವಿಕ್ಷಣೆ ಇರಬೇಕು. ಸಮುದಾಯ ಭವನ, ಕಲ್ಯಾಣ ಮಂಟಪ, ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ನಿಗಾ ಇಡಬೇಕು. ಮನೆ-ಮನೆ ಪ್ರಚಾರ, ರ್ಯಾಲಿ ಸಹಿತ ಪ್ರತಿಯೊಂದು ಪ್ರಚಾರಕ್ಕೆ ಚುನಾವಣಾ ಅ ಧಿಕಾರಿಗಳಿಂದ 48 ಗಂಟೆ ಮುಂಚೆ ಅನುಮತಿ ಪಡೆದಿರಬೇಕು. ಇಲ್ಲವಾದಲ್ಲಿ ಅಂತಹ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕೆಂದು ಸೂಚಿಸಿದರು. ಸಾರ್ವಜನಿಕರು ಚುನಾವಣಾ ಸಂಬಂಧಿಸಿದ ಅಕ್ರಮ ವ್ಯವಹಾರಗಳು ಕಂಡುಬಂದಲ್ಲಿ ದೂರುಗಳನ್ನು ದಾಖಲಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ವಿವಿಟಿ ಮತ್ತು ವಿಎಸ್‌ಟಿ ಅಧಿಕಾರಿಗಳಿಗೆ ಅವರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿ ನೀಡಲಾಯಿತು. ರಾಜಕೀಯ ಪ್ರಚಾರಗಳ ಭಾಷಣ ವಿಡಿಯೋಗಳನ್ನು ಮಾಡಬೇಕು. ಯಾವುದೇ ಕಾರಣಕ್ಕೆ ಕರ್ತವ್ಯ ಲೋಪ ಎಸಗದೆ ಕಾರ್ಯನಿರ್ವಹಿಸಲು ಎಚ್ಚರಿಕೆ ನೀಡಿದರು. ಸಭೆಯಲ್ಲಿ ತಹಶೀಲ್ದಾರ್ ಚಂದ್ರಶೇಖರ ಗಾಳಿ, ತೇರದಾಳದ ಸಹಾಯಕ ಚುನಾವಣಾಧಿಕಾರಿ ದುರ್ಗೇಶ ರುದ್ರಾಕ್ಷಿ, ರಬಕವಿ ಬನಹಟ್ಟಿ ತಹಶೀಲ್ದಾರ್ ಮಹೆಬೂಬಿ ಸೇರಿದಂತೆ ಇತರರು ಇದ್ದರು.