ಹೊಸದಿಲ್ಲಿ : ತಮಿಳು ನಾಡಿನ ಸಾಂಪ್ರದಾಯಿಕ ಹಾಗೂ ಪಾರಂಪರಿಕ ಕ್ರೀಡೆ ಜಲ್ಲಿಕಟ್ಟು ಪರವಾಗಿ ಸೂಪರ್ ಸ್ಟಾರ್ ಕಮಲ ಹಾಸನ್ ಬೆಂಬಲ ವ್ಯಕ್ತಪಡಿಸಿದ ಬಳಿಕ ಇದೀಗ ಇನ್ನೋರ್ವ ಸೂಪರ್ ಸ್ಟಾರ್ ತಲೈವ ರಜನೀಕಾಂತ್ ಅವರು ಜಲ್ಲಿಕಟ್ಟು ಪರ ಬ್ಯಾಟಿಂಗ್ ನಡೆಸಿದ್ದಾರೆ.
“ಯಾವುದೇ ಕಾನೂನು, ನಿಯಮಗಳನ್ನು ತಂದರೂ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲೇಬೇಕು. ಏಕೆಂದರೆ ಅದು ತಮಿಳರ ಪ್ರಾಚೀನ ಸಂಸ್ಕೃತಿಯ ದ್ಯೋತಕವಾಗಿದೆ; ನಾವದನ್ನು ಕೈಬಿಡಲಾರೆವು’ ಎಂದು ರಜನೀಕಾಂತ್ ಹೇಳಿದ್ದಾರೆ.
ವಿಕಟನ್ ಫಿಲಂ ಅವಾರ್ಡ್ ಸಮಾರಂಭದ ಪಾರ್ಶ್ವದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಲ್ಲಿಕಟ್ಟು ಕುರಿತಾದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಮೊದಲು ಇಂಡಿಯಾ ಟುಡೇ ಕಾನ್‌ಕ್ಲೇವ್ ನಲ್ಲಿ ಮಾತನಾಡುತ್ತಾ ನಟ ಕಮಲ ಹಾಸನ್ ಅವರು “ನೀವು ಜಲ್ಲಿಕಟ್ಟನ್ನು ನಿಷೇಧಿಸುವುದಾದರೆ ನಾವು ಬಿರಿಯಾನಿಯನ್ನು ಕೂಡ ಬ್ಯಾನ್ ಮಾಡೋಣ’ ಎಂದು ಹೇಳಿದ್ದರು. “ನಾನು ಜಲ್ಲಿಕಟ್ಟು ಕ್ರೀಡೆಯ ದೊಡ್ಡ ಫ್ಯಾನ್. ಬಹುಷಃ ಜಲ್ಲಿಕಟ್ಟು ಕ್ರೀಡೆ ಆಡಿರುವ ಕೆಲವೇ ಕೆಲವು ಚಿತ್ರ ನಟರಲ್ಲಿ ನಾನೊಬ್ಬ; ಹಾಗಾಗಿ ನಾನು ತಮಿಳನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ; ಏಕೆಂದರೆ ಅದು ನಮ್ಮ ಸಂಸ್ಕೃತಿಯಾಗಿದೆ’ ಎಂದು ಕಮಲ ಹಾಸನ್ ಹೇಳಿದ್ದರು.
ಇದೇ ವೇಳೆ ಸಿನಿಮಾ ರಂಗದ ಇತರ ಕಲಾವಿದರಲ್ಲಿ ಧನುಷ್ ಮತ್ತು ಗೌತಮಿ ಕೂಡ ಜಲ್ಲಿಕಟ್ಟು ಬೆಂಬಲಿಸಿ ಮಾತನಾಡಿದ್ದಾರೆ.
ಸುಪ್ರೀಂ ಕೋರ್ಟ್ 2014ರ ಮೇ ತಿಂಗಳಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿ ದಯಾ ಹಿತಾಸಕ್ತಿಯಲ್ಲಿ ನಿಷೇಧಿಸಿತ್ತು. ಪೊಂಗಲ್ ಹಬ್ಬದ ಸಂದರ್ಭದಲ್ಲಿ ತಮಿಳು ನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸುವುದು ಲಾಗಾಯ್ತಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.