Advertisement

ಥಿಯೇಟರ್‌ನಲ್ಲಿ ಜಲ್ಲಿಕಟ್ಟು ಆಟ: ಗೋ ಸಂರಕ್ಷಣೆ ರಾಜಕೀಯದ ಸುತ್ತ ಒಂದು ಚಿತ್ರ

02:57 PM Jan 18, 2022 | Team Udayavani |

ತಮಿಳುನಾಡಿನ “ಜಲ್ಲಿಕಟ್ಟು’ ಸಾಂಪ್ರದಾಯಿಕ ಕ್ರೀಡೆಯ ಬಗ್ಗೆ ನೀವು ಕೇಳಿರಬಹುದು. ರಾಜಕೀಯ ಮತ್ತು ನ್ಯಾಯಾಂಗದ ಅಂಗಳದಲ್ಲಿ ಆಗಾಗ್ಗೆ ಸುದ್ದಿಯಾಗುವ ಇದೇ “ಜಲ್ಲಿಕಟ್ಟು’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರುವ ತಯಾರಿಯಲ್ಲಿದೆ.

Advertisement

ಅಂದಹಾಗೆ, ಈ ಸಿನಿಮಾದ ಹೆಸರು “ಜಲ್ಲಿಕಟ್ಟು’ ಅಂತಿದ್ದರೂ, ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಇಡೀ ಸಿನಿಮಾದ ಕಥೆ ಗೋವು ಮತ್ತು ಗೋ ಸಂರಕ್ಷಣೆಯ ಸುತ್ತ ನಡೆಯುವ ಪರ-ವಿರೋಧ ಸಂಗತಿಗಳ ಸುತ್ತ ನಡೆಯುವುದರಿಂದ, ಚಿತ್ರದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಸಿನಿಮಾಕ್ಕೆ “ಜಲ್ಲಿಕಟ್ಟು’ ಎಂದು ಹೆಸರಿಟ್ಟಿದ್ದೇವೆ ಎನ್ನುವುದು ಚಿತ್ರತಂಡದ ಮಾತು.

ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ, ಈಗಾಗಲೇ “ರಾಜ್‌ ಬಹದ್ದೂರ್‌’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅನುಭವವಿರುವ ಆಲ್ವಿನ್‌ ಫ್ರಾನ್ಸಿಸ್‌ “ಜಲ್ಲಿಕಟ್ಟು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. “ಭುವನ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ಭುವನ್‌ ಸುರೇಶ್‌ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

ಇದನ್ನೂ ಓದಿ:15 ನಿಮಿಷದ ವಿಳಂಬಕ್ಕೆ ಕರ್ನಾಟಕದ ಸ್ಥಬ್ದಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿತ್ತು!

ಪ್ರಭು ಸೂರ್ಯ ಮತ್ತು ಶಿಲ್ಪಾ, ಲಿಖೀತಾ ಸೋನು “ಜಲ್ಲಿಕಟ್ಟು’ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಉಳಿದಂತೆ ಸುಚೇಂದ್ರ ಪ್ರಸಾದ್‌, ಶೋಭರಾಜ್‌, ಕಿರಿಕ್‌ ಕೀರ್ತಿ, ಸಂಗೀತಾ, ಮಜಾ ಟಾಕೀಸ್‌ ಪವನ್‌, ಕೆಂಪೇಗೌಡ, ಉಗ್ರಂ ರವಿ, ಕರಾಟೆ ರಾಜ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ತಮ್ಮ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಆಲ್ವಿನ್‌ ಫ್ರಾನ್ಸಿಸ್‌, “ಗೋ ಹತ್ಯೆ ವಿಷಯವನ್ನು ಇಟ್ಟುಕೊಂಡು ಮಾಡುತ್ತಿರುವ ಈ ಸಿನಿಮಾ ಮಾಡಿದ್ದೇವೆ. ಹೆಣ್ಣಿನಷ್ಟೇ ಗೋವು ಪವಿತ್ರ ಎಂಬ ಸಂದೇಶ ಸಿನಿಮಾದಲ್ಲಿದೆ. ಗೋ ಹತ್ಯೆಯ ಪರ-ವಿರೋಧ ವಾದಗಳು, ಅದರ ಹಿಂದಿನ ರಾಜಕೀಯ ಎಲ್ಲವನ್ನೂ ಇಲ್ಲಿ ತೋರಿಸಿದ್ದೇವೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸೆನ್ಸಾರ್‌ನಿಂದ “ಎ’ ಪ್ರಮಾಣಪತ್ರ ಕೂಡ ಸಿಕ್ಕಿದೆ’ ಎಂಬ ಮಾಹಿತಿ ನೀಡುತ್ತಾರೆ.

“ಜಲ್ಲಿಕಟ್ಟು’ ಚಿತ್ರದ ನಾಲ್ಕು ಹಾಡುಗಳಿಗೆ ವಿಜಯ್‌ ಯಾಡ್ಲಿ ಸಂಗೀತ ಸಂಯೋಜಿಸಿದ್ದು, ಅಂತೋನಿ ದಾಸನ್‌, ಚೇತನ್‌ ಕುಮಾರ್‌, ಅನುರಾಧಾ ಭಟ್‌, ಚೈತ್ರಾ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಚಿತ್ರಕ್ಕೆ ವೀರೇಶ್‌ ಎನ್‌ಟಿಎ ಛಾಯಾಗ್ರಹಣ, ವಿಶ್ವ ಎನ್‌.ಎಂ ಸಂಕಲನವಿದೆ. ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕೋವಿಡ್‌ ಮೊದಲ ಲಾಕ್‌ಡೌನ್‌ ವೇಳೆ ಶುರುವಾದ “ಜಲ್ಲಿಕಟ್ಟು’ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ ಎನ್ನುವುದು ಚಿತ್ರತಂಡದ ಮಾಹಿತಿ.

Advertisement

Udayavani is now on Telegram. Click here to join our channel and stay updated with the latest news.

Next