ಚೆನ್ನೈ: ಕಳೆದ ಆರು ದಿನಗಳಿಂದ ಚೆನ್ನೈಯ ಮರೀನಾ ಬೀಚ್‌ನಲ್ಲಿ ಶಾಂತರೀತಿ ಪ್ರತಿಭಟನೆ ನಡೆಸಿ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದ ಜಲ್ಲಿಕಟ್ಟು ಬೆಂಬಲಿತ ಪ್ರತಿಭಟನಕಾರರು, ಕಡೆ ದಿನ ಮಾತ್ರ ಹಿಂಸಾಚಾರಕ್ಕೆ ಇಳಿದು, ಪೊಲೀಸರು, ತಮಿಳುನಾಡು ಸರಕಾರಕ್ಕೆ ತಲೆನೋವಾಗಿದ್ದಾರೆ.
ಐಸ್‌ಹೌಸ್ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದೂ ಅಲ್ಲದೇ, ಪೊಲೀಸರ ಜತೆ ಸಂಘರ್ಷಕ್ಕೆ ಇಳಿದಿದ್ದಾರೆ. ಇದರಿಂದಾಗಿ ಪೊಲೀಸರು ಲಾಠೀ ಚಾರ್ಜ್ ನಡೆಸಿ ಅಶ್ರುವಾಯು ಪ್ರಯೋಗಿಸಿದ್ದಾರೆ. ಚೆನ್ನೈಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೊದಲ ನಾಲ್ಕು ದಿನಗಳ ಶಾಂತ ಪ್ರತಿಭಟನೆಗೆ ಮಣಿದಿದ್ದ ತಮಿಳುನಾಡು ಸರಕಾರ ಕೇಂದ್ರ ಸರ ಕಾರದ ಜತೆಗೆ ಮಾತನಾಡಿ, ಜಲ್ಲಿಕಟ್ಟು ನಡೆಸಲು ಅಧ್ಯಾದೇಶ ತಂದು ಸಮಸ್ಯೆ ಇತ್ಯರ್ಥಗೊಳಿಸಿತ್ತು. ಅಲ್ಲದೆ ಸೋಮವಾರ ವಿಶೇಷ ಅಧಿವೇಶನ ಕರೆದು, ಈ ಅಧ್ಯಾದೇಶವನ್ನು ಮಸೂದೆಯಾಗಿ ಮಂಡಿಸಿ ಒಪ್ಪಿಗೆಯನ್ನೂ ಪಡೆದಿದೆ. ಈ ಮೂಲಕ ಜಲ್ಲಿಕಟ್ಟುವಿಗೆ ಯಾವುದೇ ಅಡ್ಡಿ ಬಾರದಂತೆ ಎಲ್ಲ ಸಿದ್ಧತೆಗಳನ್ನೂ ಮಾಡಿದೆ.
ಪೊಲೀಸರ ಅವಸರವೇ ಕಾರಣ?: ಜಲ್ಲಿಕಟ್ಟು ಬೆಂಬಲಿತ ಹೋರಾಟಗಾರರಿಗೆ ಹೆಚ್ಚು ಕಡಿಮೆ ಶನಿವಾರವೇ ಜಯ ಸಿಕ್ಕಿತ್ತು. ಆದರೆ ಅಧ್ಯಾದೇಶ ದಿಂದ ಸಮಸ್ಯೆಗೆ ತಾತ್ಕಾಲಿಕ ಉಪಶಮನವಷ್ಟೇ, ಶಾಶ್ವತ ಪರಿಹಾರ ಬೇಕು ಎಂದು ಹೋರಾಟ ಮುಂದುವರಿಸಿದ್ದರು. ಅಲ್ಲದೆ ರವಿವಾರ ಕೂಡ ಪ್ರತಿಭಟನಕಾರರು ಮರೀನಾ ಬೀಚ್ ಬಿಟ್ಟು ಕದಲಲಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಪೊಲೀಸರು ಮರೀನಾ ಬೀಚ್‌ಗೆ ನುಗ್ಗಿ ಪ್ರತಿಭಟನಕಾರರನ್ನು ಚದುರಿಸಲು ಶುರು ಮಾಡಿದರು. ಆಕ್ಷೇಪ ವ್ಯಕ್ತಪಡಿಸಿದ ಕೆಲವರನ್ನು ಪೊಲೀಸರು ಬಲವಂತವಾಗಿ ಎಬ್ಬಿಸಿ ಹೊರ ಹಾಕಿದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟನೆ ಕೊಟ್ಟ ಪೊಲೀಸರು, ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿ ಸಿದ ಎಲ್ಲ ಅಡ್ಡಿಗಳು ನಿವಾರಣೆಯಾಗಿವೆ. ಹೀಗಾಗಿ ಪ್ರತಿಭಟನಕಾರರನ್ನು ಕಳುಹಿಸಲಾಗುತ್ತಿದೆ ಎಂದರು.
ಅನಂತರ ಶುರುವಾಗಿದ್ದೇ ಗದ್ದಲ: ಮರೀನಾ ಬೀಚ್‌ನಿಂದ ಪ್ರತಿಭಟನಕಾರರನ್ನು ಎಬ್ಬಿಸಿದ ತತ್‌ಕ್ಷಣ, ಹಿಂಸಾಚಾರ ಶುರುವಾಯಿತು. ಸರಿ ಸುಮಾರು 300 ಮಂದಿ ಪ್ರತಿಭಟನಕಾರರನ್ನು ಪೊಲೀಸರು ಹೊರಗೆ ಕಳುಹಿಸಿದರು. ಇಲ್ಲಿಂದ ನೇರವಾಗಿ ಚೆನ್ನೈ ನಗರದ ಬೀದಿಗಳಿಗೆ ತೆರಳಿದ ಅವರು, ಗಲಾಟೆ ಎಬ್ಬಿಸಿದರು. ಹತ್ತಿರದಲ್ಲೇ ಇದ್ದ ಐಸ್ ಹೌಸ್ ಪೊಲೀಸ್ ಠಾಣೆಗೆ ಬೆಂಕಿ ಇಟ್ಟರು. ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರ ಮೇಲೆ ಕಲ್ಲು ತೂರಾಟ ಶುರು ಮಾಡಿದರು. ಪರಿಸ್ಥಿತಿ ಕೈ ಮೀರಿದ ತತ್‌ಕ್ಷಣ ಪೊಲೀಸರು ಲಾಠೀ ಚಾರ್ಜ್ ನಡೆಸಿದರು. ಗುಂಪು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು. ಇದು ಕೇವಲ ಚೆನ್ನೈಗೆ ಮಾತ್ರ ಸೀಮಿತವಾಗಲಿಲ್ಲ. ಕೊಯಮತ್ತೂರು ಸಹಿತ ವಿವಿಧೆಡೆ ಹಿಂಸಾಚಾರದಿಂದ ಹಲವು ಮಂದಿ ಗಾಯಗೊಂಡಿದ್ದಾರೆ.
ಹೋರಾಟಗಾರರ ಖಂಡನೆ: ಹಿಂಸೆ ಮಿತಿ
ಮೀರುತ್ತಿದ್ದಂತೆ ಜಲ್ಲಿಕಟ್ಟು ಬೆಂಬಲ ಸೂಚಿಸಿ ಹೋರಾಟಕ್ಕೆ ಕರೆ ನೀಡಿದ್ದ ನಾಯಕರು ಸ್ಪಷ್ಟನೆ ನೀಡಿದರು. ಮರೀನಾ ಬೀಚ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳು, ಯುವ ಸಂಘ ಟನೆಗಳು ವಾಪಸ್ ಹೋಗಿಯಾಗಿದೆ. ಅಲ್ಲಿ ಪ್ರತಿ ಭಟನೆ ನಡೆಸುತ್ತಿದ್ದವರಿಗೂ ನಮಗೂ ಸಂಬಂಧ ವಿಲ್ಲ. ಅವರು ಸಮಾಜಘಾತುಕರು ಎಂದು ಸ್ಪಷ್ಟ ಪಡಿಸಿದರು. ವಿಶೇಷವೆಂದರೆ, ಪೊಲೀಸರೂ ಇದೇ ಮಾತನ್ನೇ ಪುನರುಚ್ಚರಿಸಿದರು.
ಪ್ರತಿಭಟನೆ ವಾಪಸ್‌ಗೆ ಮನವಿ: ಜಲ್ಲಿಕಟ್ಟು ಕ್ರೀಡೆ ಸಂಬಂಧ ಆರಂಭದಿಂದಲೂ ಪೂರ್ಣ ಬೆಂಬಲ ನೀಡಿದ್ದ ಟಾಲಿವುಡ್ ನಟರಾದ ರಜನೀಕಾಂತ್, ಕಮಲ್‌ಹಾಸನ್ ಸಹಿತ ಹಲವಾರು ನಟರು, ಹಿಂಸಾಚಾರ ನಡೆಸದಂತೆ ಹಾಗೂ ಪ್ರತಿಭಟನೆ ಬಿಡುವಂತೆ ಮನವಿ ಮಾಡಿದರು. ಈಗಾಗಲೇ ತಮಿಳುನಾಡು ಸರಕಾರ ಜಲ್ಲಿಕಟ್ಟು ಕ್ರೀಡೆಗಾಗಿ ಹಲವು ಕ್ರಮ ತೆಗೆದುಕೊಂಡಿದೆ. ಹೀಗಾಗಿ ಪ್ರತಿ
ಭಟನೆ ವಾಪಸ್ ತೆಗೆದುಕೊಳ್ಳಿ ಎಂದು ಹೇಳಿದರು. ಇದರ ಜತೆಯಲ್ಲೇ ಪ್ರತಿಭಟನಕಾರರನ್ನು ಚದು ರಿಸಿದ ಪೊಲೀಸರ ಕ್ರಮವನ್ನು ಚಿತ್ರನಟರೂ ಸೇರಿದಂತೆ ಡಿಎಂಕೆ, ಕಾಂಗ್ರೆಸ್‌ನ ರಾಜಕಾರಣಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಪೊಲೀಸರೇಕೆ ಇಂಥ ಕ್ರಮಕ್ಕೆ ಮುಂದಾಗಬೇಕಿತ್ತು? ಈ ಬಗ್ಗೆ ಸರಿಯಾದ ಉತ್ತರ ನೀಡಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.